ಚಿತ್ರದುರ್ಗ: ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ (Corruption Politics) ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಇವರ ಬಾಯಲಿ ಕಡಬು ಸಿಕ್ಕಿಬಿದ್ದಿತ್ತಾ, ಕಡ್ಲೇಪುರಿ ತಿನ್ನುತ್ತಿದ್ದಾರಾ? ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆ ಕಳಿಸುವುದಾಗಿ ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿಗೆ ತಾಕತ್ತಿದ್ದರೆ ನಮ್ಮ ಸರ್ಕಾರ ಮತ್ತು ಅವರ ಸರ್ಕಾರದ ಭ್ರಷ್ಟಾಚಾರದ ತನಿಖೆ ಮಾಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಹೊಸದುರ್ಗ ಪಟ್ಟಣದಲ್ಲಿ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು.
ಭ್ರಷ್ಟಾಚಾರ ಆಗಿದೆ ಎಂದು ಹೇಳುವ ಸಿಎಂ ಬೊಮ್ಮಾಯಿಗೆ ಧಮ್ಮಿಲ್ಲ, ಧೈರ್ಯವೂ ಇಲ್ಲ. ನಮ್ಮ ಆಡಳಿತದಲ್ಲಿ ದೂರು ಬಂದಾಗ 8 ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೇನೆ. ಎಲ್ಲ ಕೇಸ್‌ಗಳಲ್ಲೂ ಸಿಬಿಐನಿಂದ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ನಮ್ಮ ಕಾಲದಲ್ಲಿ ಒಂದೇ ಒಂದು ಹಗರಣ ಇರಲಿಲ್ಲ. ಲಜ್ಜೆಗೆಟ್ಟವರು, ಮಾನಗೆಟ್ಟವರು ಅಧಿಕಾರದಲ್ಲಿ ಇರಬಾರದು ಎಂದು ಹೇಳಿದರು.
ಹೊಸದುರ್ಗ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ
ಪೆಟ್ರೋಲ್, ಡೀಸೆಲ್, ಗೊಬ್ಬರ, ಗ್ಯಾಸ್ ಬೆಲೆ ಏರಿಕೆಯಾಗಿದೆ. ಬಡವರ ಸುಲಿಗೆ ಮಾಡುವ ಟ್ಯಾಕ್ಸ್ ಹೇರುವ ಸರ್ಕಾರ ತೊಲಗಲಿ ಎಂದು ಹೇಳಿದ ಸಿದ್ದರಾಮಯ್ಯ, 2023ರ ಏಪ್ರಿಲ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಗೋವಿಂದಪ್ಪಗೆ ಮತ ಹಾಕಿ ಎಂದು ಹೇಳುವ ಮೂಲಕ ಮುಂದಿನ ಅಭ್ಯರ್ಥಿ ಅವರೇ ಎಂದು ಪರೋಕ್ಷವಾಗಿ ಘೋಷಣೆ ಮಾಡಿದರು.
ಬಿಜೆಪಿ ಸಂಕಲ್ಪ ಯಾತ್ರೆ ಬಗ್ಗೆ ವ್ಯಂಗ್ಯ
ಮನೆ ಕೊಟ್ಟಿಲ್ಲ, ಗುಂಡಿ ಮುಚ್ಚಿಲ್ಲ, ನೀರಾವರಿ ಯೋಜನೆ ಇಲ್ಲ ಎಂಬುದು ಬಿಜೆಪಿ ಸಂಕಲ್ಪನಾ? ಎಂದು ಪ್ರಶ್ನ ಮಾಡಿರುವ ಸಿದ್ದರಾಮಯ್ಯ, ಬೆಳೆಹಾನಿ, ಜಮೀನು ಮುಳುಗಡೆಗೆ ಇನ್ನೂ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರ ಲೂಟಿ ಹೊಡೆಯುವುದರಲ್ಲಿದೆ. 40% ಕಮಿಷನ್ ಹೊಡೆಯುವುದರಲ್ಲಿ ಮುಳುಗಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದೂರು ಕೊಟ್ಟು ವರ್ಷ ಕಳೆದರೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕ್ರಮ ಆಗಿಲ್ಲ. ನಾನು ತಿನ್ನಲ್ಲ, ತಿನ್ನಲೂ ಬಿಡಲ್ಲ ಎಂದು ಹೇಳುವ ಅವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ | ರಾಜ್ಯ ಕಾಂಗ್ರೆಸ್‌ನಲ್ಲಿ 3ನೇ ಪವರ್ ಸೆಂಟರ್; ಸಿದ್ದರಾಮಯ್ಯ, ಡಿಕೆಶಿ ಬಣಗಳ ನಡುವೆ ಆ್ಯಕ್ಟಿವ್ ಆಯ್ತಾ ಖರ್ಗೆ ಬಣ?