Site icon Vistara News

Gruha Lakshmi Scheme: ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಕೌಂಟ್‌ಡೌನ್‌ ಸ್ಟಾರ್ಟ್‌; ನಾಳೆಯೇ ಸಿಗಲಿದೆ 2000 ರೂ.

ಮೈಸೂರು: ಮಹಿಳಾ ಸಬಲೀಕರಣ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿ ಮಾಡಿರುವ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್‌ 30ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಲನೆ ಸಿಗಲಿದೆ. ಐತಿಹಾಸಿಕ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮಕ್ಕಾಗಿ (Gruha Lakshmi Scheme) ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಅದ್ಧೂರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿ ವಿವಿಧ ಸಚಿವರು, ಶಾಸಕರು ಉಪಸ್ಥಿತರಿರಲಿದ್ದಾರೆ. ಇನ್ನು ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಿಂದ ಬರೋಬ್ಬರಿ 1 ಲಕ್ಷ ಜನ ಭಾಗವಹಿಸುವ ಸಾಧ್ಯತೆ ಇದೆ.

ಫಲಾನುಭವಿಗಳೊಂದಿಗೆ ರಾಹುಲ್ ಗಾಂಧಿ ಅವರು ಡಿಜಿಟಲ್ ಸಂವಾದ ನಡೆಸಲಿದ್ದು, ಇದು ಆನ್‌ಲೈನ್ ಮೂಲಕ ರಾಜ್ಯಾದ್ಯಂತ ನೇರಪ್ರಸಾರವಾಗಲಿದೆ. ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ನೇರ ಪ್ರಸಾರ ವೀಕ್ಷಣೆಗ ವ್ಯವಸ್ಥೆ ಮಾಡಲಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳಾದ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ.

ಇದನ್ನೂ ಓದಿ | Chamundi devi: ಗ್ಯಾರಂಟಿ ಜಾರಿ; ಚಾಮುಂಡಿ ದೇವಿ ಹರಕೆ ತೀರಿಸಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್‌ ಅವರು ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದರು.

ಬೃಹತ್‌ ವೇದಿಕೆ, 1 ಲಕ್ಷ ಮಂದಿಗೆ ಆಸನ ವ್ಯವಸ್ಥೆ

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. 80 ಅಡಿ ಉದ್ದ, 60 ಅಡಿ ಅಗಲ, 8 ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ವೇದಿಕೆ ಹಿಂಭಾಗ 140 ಅಡಿ ಉದ್ದದ ಬೃಹತ್ ಎಲ್ಇಡಿ ಪರದೆ ಅಳವಡಿಸಲಾಗುತ್ತಿದೆ. ವಿಐಪಿ, ವಿವಿಐಪಿಗಳಿಗೆ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡುತ್ತಿದ್ದು, ಮೈದಾನದಲ್ಲಿ ವಾಟರ್ ಪ್ರೂಫ್ ಜರ್ಮನ್ ಟೆಂಟ್ ಅಳವಡಿಕೆ ಮಾಡಲಾಗಿದೆ. 500ಕ್ಕೂ ಹೆಚ್ಚು ಕಾರ್ಮಿಕರು ಹಗಲು ರಾತ್ರಿ ವೇದಿಕೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರಿಗೆ ಸುಸಜ್ಜಿತ ತಾತ್ಕಾಲಿಕ ಶೌಚ ಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ವೇದಿಕೆ ಮುಂಭಾಗ 1 ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಸುತ್ತಮುತ್ತ ಕಾಂಗ್ರೆಸ್ ನಾಯಕರ ಫ್ಲೆಕ್ಸ್, ಬಂಟಿಂಗ್ಸ್ ರಾರಾಜಿಸುತ್ತಿವೆ. ಇನ್ನು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಅರಮನೆ ಮಾದರಿಯಲ್ಲಿ ಸಭಾಂಗಣ

ಮೈಸೂರು ಅರಮನೆ ಮಾದರಿಯಲ್ಲಿ ಸಭಾಂಗಣ ವಿನ್ಯಾಸ ಮಾಡಲಾಗಿದ್ದು, ಹೊರಾಂಗಣ ಪ್ರವೇಶ ದ್ವಾರಕ್ಕೆ ವಿಶಿಷ್ಟ ವಿನ್ಯಾಸ ಮಾಡಲಾಗಿದೆ. ಇಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಫೋಟೋ ಇರುವ ಫ್ಲೆಕ್ಸ್ ಅಳವಡಿಸಲಾಗಿದೆ.

ರಸ್ತೆ, ವೃತ್ತಗಳಲ್ಲಿ ರಾರಾಜಿಸುತ್ತಿವೆ ಫ್ಲೆಕ್ಸ್, ಹೋರ್ಡಿಂಗ್ಸ್‌

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಹಿನ್ನೆಲೆಯಲ್ಲಿ ಮೈಸೂರು ತುಂಬೆಲ್ಲ ಫ್ಲೆಕ್ಸ್, ಹೋರ್ಡಿಂಗ್ಸ್ ಅಳವಡಿಕೆ ಮಾಡಲಾಗಿದೆ. ರಸ್ತೆ, ವೃತ್ತಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಳಗೊಂಡ ಕೈ ನಾಯಕರ ಫೋಟೊ ಒಳಗೊಂಡ ಫ್ಲೆಕ್ಸ್‌ಗಳನ್ನು ನಂಜನಗೂಡು ಹೆದ್ದಾರಿ, ಚಾಮರಾಜ ಜೋಡಿ ರಸ್ತೆ, ಕೃಷ್ಣರಾಜ ಬುಲೇವಾರ್ಡ್ ರಸ್ತೆಗಳಲ್ಲಿ ಅಳವಡಿಸಲಾಗಿದೆ.

2000 ಪೊಲೀಸ್ ಸಿಬ್ಬಂದಿಯಿಂದ ಬಿಗಿ ಭದ್ರತೆ

ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದಲ್ಲಿ 2000 ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, 10 ಎಸ್‌ಪಿಗಳು ಸೇರಿ ನೂರಾರು ಅಧಿಕಾರಿಗಳಿಂದ ಬಂದೋಬಸ್ತ್ ಏರ್ಪಡಿಸಲಾಗಿದೆ.

1 ಲಕ್ಷ ಜನ ಸೇರಿಸಲು ಪ್ಲ್ಯಾನ್

ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಗಳಿಗೆ ಜನ ಸೇರಿಸುವ ಟಾಸ್ಕ್ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ 3 ಬಸ್ ವ್ಯವಸ್ಥೆ ಮಾಡಿದ್ದು, ಕಡ್ಡಾಯವಾಗಿ 150 ಜನ ಕರೆತರಲು ಪಿಡಿಒಗಳಿಗೆ ಟಾರ್ಗೆಟ್‌ ನೀಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಿಂದ ಜ‌ನ ಕರೆತರಲು ತೀರ್ಮಾನ ಮಾಡಲಾಗಿದ್ದು, ಬರೋಬ್ಬರಿ 1 ಲಕ್ಷ ಜನ ಸೇರಿಸಲು ಪ್ಲ್ಯಾನ್ ಮಾಡಲಾಗಿದೆ. ಜನ ಕರೆದುಕೊಂಡು ಬರಲು 1200 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಮೈಸೂರು, ಹುಣಸೂರು, ಮಡಿಕೇರಿ ಬಸ್ ಡಿಪೋಗಳಿಂದ ಬಸ್‌ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಬಸ್‌ಗಳು ಕಾರ್ಯಕ್ರಮ ಬರುವುದರಿಂದ ಬುಧವಾರ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ | Gruha Lakshmi Scheme: ಆ.30ಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ; ಮೈಸೂರಿನಲ್ಲಿ ಕಾರ್ಯಕ್ರಮದ ಸಿದ್ಧತೆ ವೀಕ್ಷಿಸಿದ ಡಿಕೆಶಿ‌, ಹೆಬ್ಬಾಳ್ಕರ್

ಗೃಹಲಕ್ಷ್ಮಿ ಯೋಜನೆ ಥೀಮ್ ಸಾಂಗ್, ಸಾಧು ಕೋಕಿಲಾ ಸಂಗೀತ

ಗೃಹಲಕ್ಷ್ಮಿ ಯೋಜನೆಗೆ ಥೀಮ್ ಸಾಂಗ್ ರೆಡಿಯಾಗಿದ್ದು, ಸಂಗೀತ ನಿರ್ದೇಶಕ, ಕಲಾವಿದ ಸಾಧು ಕೋಕಿಲಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೂರು ನಿಮಿಷಗಳ ಥೀಮ್ ಸಾಂಗ್ ಕಾರ್ಯಕ್ರಮ ಚಾಲನೆ ವೇಳೆ ಮೊಳಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾಸ್ಯನಟ ಸಾಧು ಕೋಕಿಲಾ ಅವರು, ನನಗೆ ಅಧಿಕಾರ ಸಿಗಲಿ, ಸಿಗದೆ ಇರಲಿ. ನಾನು ಕಾಂಗ್ರೆಸ್‌ನಲ್ಲಿ ಇರುತ್ತೇನೆ. ನಾನು ಬಡತನದಿಂದ ಬೆಳೆದವನು. ಬಡವರಿಗೆ ಒಳ್ಳೆಯದು ಮಾಡಲು ಅವಕಾಶ ಕೊಡಿ ಅಂತ ಕೇಳಿದ್ದೇನೆ. ಅಧಿಕಾರ ಸಿಕ್ಕರೆ ಸಂತೋಷ ಎಂದು ಹೇಳಿದ್ದಾರೆ.

Exit mobile version