Site icon Vistara News

Bangalore Kambala: ಬೆಂಗಳೂರು ಕಂಬಳಕ್ಕೆ ಕೌಂಟ್‌ಡೌನ್‌, ಮಿಂಚಿನ ಓಟಕ್ಕೆ 200 ಜೋಡಿ ಕೋಣಗಳು ಸಜ್ಜು!

bangalore kambala

ಬೆಂಗಳೂರು: ತುಳುನಾಡಿನ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳ ಇಂದಿನಿಂದ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Kambala) ಮೇಳೈಸಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ 200 ಜೋಡಿ ಕೋಣಗಳು ಬೆಂಗಳೂರಿಗೆ ಆಗಮಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಜನರ ಸಂಸ್ಕೃತಿಯ ಜೊತೆ ತಳುಕು ಹಾಕಿಕೊಂಡಿರುವ, ಜೋಡಿ ಕೋಣಗಳು ಕೆಸರು ಗದ್ದೆಯಲ್ಲಿ ಓಡುವ ಕಂಬಳದ ಕಂಪು, ಇದೀಗ ತುಳುನಾಡಿನಿಂದ ಸಿಲಿಕಾನ್ ಸಿಟಿಗೂ ಹರಡಿದೆ. ಬೆಂಗಳೂರು ಕಂಬಳಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಅರಮನೆ ಆವರಣದಲ್ಲಿ ಸಜ್ಜಾಗಿರುವ ಕಂಬಳದ ಗದ್ದೆಯಲ್ಲಿ ಕೋಣಗಳ ರಿಹರ್ಸಲ್ ಶುರುವಾಗಿದೆ. ರಾಜ- ಮಹಾರಾಜ ಹೆಸರಿನ ಕಂಬಳದ ಗದ್ದೆ ಟ್ರ್ಯಾಕ್‌ನಲ್ಲಿ ಮೇಲ್ಗಡೆ ನಿಶಾನೆ ಧ್ವಜಗಳನ್ನು ಕಟ್ಟಲಾಗಿದ್ದು, ನಿಶಾನೆಗೆ ನೀರು ಚಿಮ್ಮಿಸಲು ಕೋಣಗಳು ಸಜ್ಜಾಗಿವೆ.

ಕಂಬಳಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಬೆಂಗಳೂರು ಕಂಬಳ ಸಮಿತಿ ಅರಮನೆ ಮೈದಾನದಲ್ಲಿ ಮಾಡುತ್ತಿದ್ದು, ಇಂದು ಕೋಣಗಳ ಪ್ರದರ್ಶನ ಓಟದ ರಿಹರ್ಸಲ್ ಮಾಡಲಾಯಿತು. ಸಂಪ್ರದಾಯದಂತೆ ಗದ್ದೆಗೆ ಪೂಜೆ ಮಾಡಿ ಕೋಣಗಳನ್ನು ನೀರಿಗಿಳಿಸಿ ಕೋಣಗಳ ಸಾಮರ್ಥ್ಯ ಪರೀಕ್ಷಿಸಲಾಯಿತು. ರಿಹರ್ಸಲ್‌ನಲ್ಲಿ ನೀರಿನ ಮಟ್ಟ, ಮಣ್ಣಿನ ಗುಣಮಟ್ಟಗಳನ್ನು ಪರಿಶೀಲಿಸಿದರು.

ಮೊದಲ ದಿನ ಅಂದರೆ ಇಂದು (ಶುಕ್ರವಾರ) 10 ಗಂಟೆಗೆ ತುಳು ಕೂಟದ ಉದ್ಘಾಟನಾ ಸಭಾ ಕಾರ್ಯಕ್ರಮ ನಡೆಯಲಿದೆ. ಇಂದು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಿನಿಮಾ ನಟ-ನಟಿಯರು ಆಗಮಿಸಲಿದ್ದಾರೆ.‌ ಇಂದೂ ಕೋಣಗಳ ರಿಹರ್ಸಲ್ ಮಾತ್ರ ನಡೆಯಲಿದೆ. ಶನಿವಾರ ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯನವರಿಂದ ಸಂಜೆ 3:30ಕ್ಕೆ ಉದ್ಘಾಟನೆ ಆದ ನಂತರ ಭಾನುವಾರ ಪೂರ್ಣ ಪ್ರಮಾಣದ ಕಂಬಳ ನಡೆಯಲಿದೆ.

ಕಂಬಳದಲ್ಲಿ 200ಕ್ಕೂ ಹೆಚ್ಚು ಕೋಣಗಳು ಭಾಗಿಯಾಗಲಿದ್ದು, ಕಂಬಳಕ್ಕೆಂದೇ ರಾಜ- ಮಹಾರಾಜ ಹೆಸರಿನ ಕಂಬಳದ ಟ್ರ್ಯಾಕ್ ರೆಡಿ ಮಾಡಲಾಗಿದೆ. ಈ ಟ್ರ್ಯಾಕ್ 157 ಮೀ ಉದ್ದ, 8 ಮೀ ಅಗಲವನ್ನು ಒಳಗೊಂಡಿದೆ. 6ರಿಂದ 7 ಲಕ್ಷ ಜನರು ಬರುವ ಸಾಧ್ಯತೆ ಇದ್ದು, ಜನರು ಕೂತು ಕಂಬಳ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.‌ ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳನ್ನು ಕೂಡ ಅಳವಡಿಕೆ ಮಾಡಲಾಗಿದ್ದು, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ‌ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ರೈ ಹೇಳಿದ್ದಾರೆ.

ಎಲ್ಲೆಲ್ಲಿಂದ ಬಂದಿವೆ?

ಕಂಬಳಕ್ಕೆ ಮಂಗಳೂರು, ಉಡುಪಿ, ಪುತ್ತೂರು, ಕುಂದಾಪುರ, ಬೈಂದೂರು ಭಾಗದಿಂದ ಕೋಣಗಳು ಬಂದಿವೆ. ರಾತ್ರಿಯೇ ಕೋಣಗಳನ್ನು ಮಾಲೀಕರು ಲಾರಿ, ಪಿಕಪ್‌ಗಳಲ್ಲಿ ತಂದಿದ್ದಾರೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ಕೋಣಗಳನ್ನು ಕಟ್ಟಲು ವ್ಯವಸ್ಥೆ ಮಾಡಲಾಗಿದೆ.

4 ವಿಭಾಗದಲ್ಲಿ ಕಂಬಳ ನಡೆಸಲಾಗುತ್ತಿದೆ. ನೇಗಿಲ ಓಟ, ಹಗ್ಗ ಓಟ, ಅಡ್ಡ ಹಲಗೆ, ಕೆನೆ ಹಲಗೆ ಹೀಗೆ ನಾಲ್ಕು ವಿಭಾಗದಲ್ಲಿ ಭಾಗಿಯಾಗಲು ಕೋಣಗಳನ್ನು ತರಲಾಗಿದೆ. 2-6 ಹಲ್ಲುಗಳಿರುವ ಕೋಣಗಳು ಜೂನಿಯರ್ ವಿಭಾಗ, 7-8 ಹಲ್ಲುಗಳಿರುವ ಕೋಣಗಳು ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸುತ್ತವೆ.

ಸಂಚಾರಿ ಪೊಲೀಸರಿಂದ ಮಾರ್ಗಸೂಚಿ

ನ.24ರಿಂದ 26ರವರೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳ ನಡೆಯಲಿರುವ ಹಿನ್ನೆಲೆಯಲ್ಲಿ 25 ಮತ್ತು 26ರಂದು ಸುಗಮ ಸಂಚಾರಕ್ಕೆ ಟ್ರಾಫಿಕ್‌ ಪೊಲೀಸರು ಮಾರ್ಗಸೂಚಿ ನೀಡಿದ್ದಾರೆ.

ಪ್ರವೇಶ ಮತ್ತು ವಾಹನ ನಿಲುಗಡೆ ಸ್ಥಳಗಳು: ಸಿಬಿಡಿ ಏರಿಯಾದಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಬಳಿಯ ಗೇಟ್ ನಂ 1(ಕೃಷ್ಣ ವಿಹಾರ್) ನಲ್ಲಿ ಪ್ರವೇಶದ ಪಾರ್ಕಿಂಗ್. ಹೆಬ್ಬಾಳ ಕಡೆಯಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಅಂಡರ್ ಪಾಸ್ ಮೂಲಕ ಗೇಟ್ ನಂ.1ರಿಂದ ಪ್ರವೇಶ.

ಯಶವಂತಪುರ ಕಡೆ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ಬಲ ತಿರುವು ಗೇಟ್ ನಂಬರ್ 1ರಲ್ಲಿ ಪ್ರವೇಶ. ಕ್ಯಾಬ್‌ನಲ್ಲಿ ಬರುವವರು ಗೇಟ್ ನಂಬರ್ 2ರ ಮೂಲಕ ಪ್ರವೇಶ. ಗೇಟ್ ನಂಬರ್ 3ರ ಮೂಲಕ ಕ್ಯಾಬ್‌ಗಳಿಗೆ ಎಕ್ಸಿಟ್‌ಗೆ ಸೂಚನೆ ನೀಡಲಾಗಿದೆ. ಇತರೆ ವಾಹನಗಳು ವಾಪಸ್ ಹೋಗುವಾಗ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮೂಲಕ ನಿರ್ಗಮಿಸಬೇಕು.

ಕಾರ್ಯಕ್ರಮ ಹೊರತುಪಡಿಸಿ ಸಂಚರಿಸುವ ಸವಾರರಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಲಾಗಿದ್ದು, ಮೈಸೂರು ಬ್ಯಾಂಕ್ ರಸ್ತೆ ಮೂಲಕ ವಸಂತ್ ನಗರ ಅಂಡರ್ ಪಾಸ್‌ನಲ್ಲಿ ಹೋಗುವವರು ಅರಮನೆ ರಸ್ತೆ ಮೂಲಕವೇ ಸಂಚರಿಸಬೇಕು.

ಇದನ್ನೂ ಓದಿ: Bangalore Kambala : ಕರಾವಳಿಯಿಂದ ಕೋಣಗಳ ಮೆರವಣಿಗೆ ಶುರು ; ರಾಜಧಾನಿಯಲ್ಲಿ ಕುದಿ ಕಂಬಳ!

Exit mobile version