ಮೈಸೂರು: ವಿಶ್ವವಿಖ್ಯಾತ 416ನೇ ಮೈಸೂರು ದಸರಾ (Mysore Dasara) ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ (ಅಕ್ಟೋಬರ್ 15) ಬೆಳಗ್ಗೆ 10.15ಕ್ಕೆ ನಾಡಹಬ್ಬಕ್ಕೆ ಸಂಗೀತ ನಿರ್ದೇಶಕ ಹಂಸಲೇಖ (Music Director Hamsalekha) ಚಾಲನೆ ನೀಡಲಿದ್ದು, ಈಗಾಗಲೇ ಪೂಜೆ, ಕಂಕಣಧಾರಣೆ ಸೇರಿ ಹಲವು ವಿಧಿವಿಧಾನಗಳು ಆರಂಭವಾಗಿವೆ.
ಬೆಳಗ್ಗೆ 10:15ರಿಂದ 10.36ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬದ ಉದ್ಘಾಟನೆ ನೆರವೇರಲಿದ್ದು, ನಾಡ ನಾಡಿನ ದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಭಾಗಿಯಾಗಲಿದ್ದಾರೆ.
ಇಂದಿನ ಕಾರ್ಯಕ್ರಮಗಳ ಪಟ್ಟಿ
- ಬೆಳಗ್ಗೆ 10:15ರಿಂದ 10.36ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ಉದ್ಘಾಟನೆ
- ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಧ್ಯುಕ್ತ ಚಾಲನೆ
- ಬೆಳಗ್ಗೆ 11:30ಕ್ಕೆ ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರಿಂದ ಕಲಾಮಂದಿರದಲ್ಲಿ ಚಲನ ಚಿತ್ರೋತ್ಸವಕ್ಕೆ ಚಾಲನೆ
- 12:30 ಕ್ಕೆ ಕುಪ್ಪಣ್ಣ ಪಾರ್ಕ್ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಮಾಡಲಿರುವ ಸಚಿವ ಎಚ್.ಸಿ ಮಹದೇವಪ್ಪ.
- ಮಧ್ಯಾಹ್ನ 1 ಗಂಟೆಗೆ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳ ಉದ್ಘಾಟನೆ
- ಸಂಜೆ 4 ಗಂಟೆಗೆ ವಸ್ತು ಪ್ರದರ್ಶನ; ಪ್ರಾಧಿಕಾರದ ಆವರಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ ಮಾಡಲಿರುವ ಸಿಎಂ ಸಿದ್ದರಾಮಯ್ಯ
- ಸಂಜೆ 4:30ಕ್ಕೆ ವಸ್ತು ಪ್ರದರ್ಶನ ಉದ್ಘಾಟನೆ ಮಾಡಲಿರುವ ಸಿಎಂ
- ಸಂಜೆ 5 ಗಂಟೆಗೆ ಸೆನೆಟ್ ಭವನದಲ್ಲಿ ಯೋಗ ದಸರಾ ಉದ್ಘಾಟನೆ ಮಾಡಲಿರುವ ಸಚಿವ ಡಾ. ಎಚ್.ಸಿ ಮಹದೇವಪ್ಪ.
- ಸಂಜೆ 6:30ಕ್ಕೆ ವಿದ್ಯುತ್ ದೀಪಾಲಂಕಾರ ಕಾರ್ಯಕ್ರಮ ಉದ್ಘಾಟನೆ ಮಾಡಲಿರುವ ಇಂಧನ ಸಚಿವ ಕೆ.ಜೆ ಜಾರ್ಜ್.
- ಸಂಜೆ 7 ಗಂಟೆಗೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿರುವ ಸಿಎಂ ಸಿದ್ದರಾಮಯ್ಯ
ಬಿಗಿ ಬಂದೋಬಸ್ತ್
ಮೈಸೂರು ದಸರೆಗೆ ವಿಧ್ಯುಕ್ತ ಚಾಲನೆ ದೊರೆಯುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದಲ್ಲಿ ಸುಮಾರು 4,200 ಪೊಲೀಸರು ಭದ್ರತೆ ಒದಗಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮೈಸೂರು ನಗರ ಪೊಲೀಸರು ಸಕಲ ಸಿದ್ಧತೆ ಕೈಗೊಂಡಿದ್ದಾರೆ. ದಸರಾ ಕಾರ್ಯಕ್ರಮಗಳು ನಡೆಯಲಿರುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 1 ಡಿಐಜಿ, 11 ಎಸ್‌ಪಿ, 410 ಪೊಲೀಸ್ ಅಧಿಕಾರಿಗಳು, 3,778 ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 4200 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಾಗೆಯೇ, ಸಶಸ್ತ್ರ ಪಡೆಗಳು, ಬಾಂಬ್ ನಿಸ್ಕ್ರೀಯ ದಳ ಮತ್ತು ವಿಶೇಷ ಗರುಡ ಪಡೆಯನ್ನೂ ನಿಯೋಜಿಸಲಾಗಿದೆ.
ಇದನ್ನೂ ಓದಿ: Mysore dasara : ಇವರೇ ನಮ್ಮ ಆರ್ಕೆಸ್ಟ್ರಾ ಗಾಯಕ ಹಂಸಲೇಖ; ಈ ಬಾರಿ ಉದ್ಘಾಟಿಸಲಿದ್ದಾರೆ ದಸರಾ ಲೋಕ!
ವಿಜಯದಶಮಿ ವಿಶೇಷ
24-10-2023ರ ಮಂಗಳವಾರದಂದು ವಿಜಯದಶಮಿ ನಡೆಯಲಿದೆ. ಅಂದು ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಂದಿ ಧ್ವಜ ಪೂಜೆ ನಡೆಯಲಿದೆ. ಮಧ್ಯಾಹ್ನ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿಯಿಂದ ಮತ್ತು ಗಣ್ಯರಿಂದ ಅಂಬಾರಿಯಲ್ಲಿರುವ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ನಡೆಯಲಿದೆ. ನಂತರ ಜಂಬೂ ಸವಾರಿ ಪ್ರಾರಂಭವಾಗಲಿದೆ. ಭಾನುವಾರ (ಅಕ್ಟೋಬರ್ 26) ಚಾಮುಂಡಿ ಬೆಟ್ಟದಲ್ಲಿ ಶ್ರೀಚಾಮುಂಡೇಶ್ವರಿ ರಥೋತ್ಸವ ನಡೆಯಲಿದೆ.