ಕೊಡಗು: ದೇಶದ ರಾಜಧಾನಿ ನವ ದೆಹಲಿಯಲ್ಲಿ ಮುದ್ದಿನ ಮಡದಿ (Couple Love) ಕಳೆದು ಹೋಗಿ ೯ ವರ್ಷಗಳೇ ಗತಿಸಿತ್ತು. ಹುಡುಕಿ ಹುಡುಕಿ ಸುಸ್ತಾಗಿದ್ದ ಪತಿ ಮತ್ತವನ ಕುಟುಂಬಸ್ಥರು ಆಕೆ ಸತ್ತೇ ಹೋಗಿದ್ದಳು ಎಂದು ಕೈಚೆಲ್ಲಿ ಕುಳಿತಿದ್ದರು. ಆದರೆ, ಮಡಿಕೇರಿಯು ಈ ದಂಪತಿಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದೆ. ಹೆಂಡತಿ ಬದುಕಿದ್ದಾಳೆ ಎಂದು ಸುದ್ದಿ ತಿಳಿದ ಪತಿಯು ಹರ್ಯಾಣದಿಂದ ಓಡಿ ಬಂದಿದ್ದು, ಕಣ್ಣುಗಳು ಅರಸಿಯನ್ನು ಅರಸಿದೆ. ಅವಳು ಕಂಡೊಡನೆ ಓಡೋಡಿ ಹೋಗಿ ಬಿಗಿದಪ್ಪಿದ, ಗಟ್ಟಿಯಾಗಿ ಹಿಡಿದು ಮುದ್ದಾಡಿದ. ಚಿಕ್ಕ ಮಕ್ಕಳಂತೆ ಕಣ್ಣೀರು ಹಾಕಿದ ಪ್ರಸಂಗಕ್ಕೆ ಮಡಿಕೇರಿ ಸಾಕ್ಷಿಯಾಯಿತು.
ಈಕೆಯ ಹೆಸರು ದರ್ಶಿನಿ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡ ಕೆಹರ್ ಸಿಂಗ್ ಜತೆಗೆ ಸಂಸಾರ ಮಾಡುತ್ತಿದ್ದರು. ಐವರು ಮಕ್ಕಳೂ ಇವರಿಗಿದ್ದರು. ಆದರೆ, ದರ್ಶಿನಿ ಅವರಿಗೆ ಕೊಂಚ ಮಾನಸಿಕ ಅಸ್ವಸ್ಥತೆ ಕಾಡಿತ್ತು. ಇದೇ ವೇಳೆ 2013ರಲ್ಲಿ ದೆಹಲಿಯಲ್ಲಿ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ದರ್ಶಿನಿಗಾಗಿ ಕೆಹರ್ ಸಿಂಗ್ ಹುಡುಕಾಡಿದ ಊರುಗಳಿಲ್ಲ. ಬರೋಬ್ಬರಿ 9 ವರ್ಷಗಳ ಹುಡುಕಾಟ ನಡೆಸಿದರೂ ಪತ್ನಿಯ ಸುಳಿವು ಇರಲಿಲ್ಲ. ಕೊನೆಗೆ ಆಕೆ ಕೋವಿಡ್‌ಗೆ ಬಲಿಯಾಗಿರುಬಹುದೆಂದು ಊಹಿಸಿ ಹುಡುಕುವುದನ್ನು ನಿಲ್ಲಿಸಲಾಗಿತ್ತು.
ಪತ್ನಿಯ ಅಗಲಿಕೆಯ ನೋವಿನಲ್ಲಿದ್ದ ಸಿಂಗ್‌ಗೆ ಬಂದ ಅದೊಂದು ಫೋನ್ ಕಾಲ್‌ನಿಂದ ಅಚ್ಚರಿಯಾಯಿತು. ಆಕಾಶಕ್ಕೆ ಇನ್ನು ಮೂರೇ ಗೇಣು ಎಂಬಂತೆ ಭಾಸವಾಗಿತ್ತು. ಫೋನ್ ಕಾಲ್ ಮಾಡಿದವರು ನಿಮ್ಮ ಪತ್ನಿ ದರ್ಶಿನಿ ಮಡಿಕೇರಿಯಲ್ಲಿ ಇರುವುದಾಗಿ ತಿಳಿಸಿದ್ದರು. ಇದನ್ನು ನಂಬಬೇಕೊ ಬೇಡವೋ ಎಂಬ ಗೊಂದಲದಲ್ಲಿಯೇ ಸುಮಾರು 3,000 ಕಿ.ಮೀ ದೂರದ ದೆಹಲಿಯಿಂದ ಕೊಡಗಿಗೆ ಓಡೋಡಿ ಬಂದರು.
ಇದನ್ನೂ ಓದಿ |Karnataka Election | ಕುಟುಂಬ ರಾಜಕಾರಣ ಎಂದರೇ ಭ್ರಷ್ಟಾಚಾರ; ದೇಶ-ಕರ್ನಾಟಕದಲ್ಲಿ ಇದಕ್ಕಿಲ್ಲ ಅವಕಾಶ: ಪ್ರಲ್ಹಾದ್ ಜೋಶಿ
ಸಿಹಿ ತಿನ್ನಿಸಿದ ಪತಿ
ಕೊನೆಗೆ ಹರ್ಯಾಣದಿಂದ ಕೊಡಗಿನ ತನಲ್ ಸಂಸ್ಥೆಗೆ ಕೆಹರ್ ಸಿಂಗ್ ಬಂದಿದ್ದಾರೆ. ಅಲ್ಲಿನ ಆವರಣಕ್ಕೆ ಬಂದೊಡದೆ ಸಿಂಗ್ ಕಣ್ಣುಗಳು ಪ್ರೀತಿಯ ಮಡದಿಗಾಗಿ ಹುಡುಕಾಡುತ್ತಿತ್ತು. ಪತ್ನಿ ಎಲ್ಲಿ, ಎಲ್ಲಿ ಎಂದು ಅತ್ತಿತ್ತ ನೋಡುತ್ತಿತ್ತು. ಆಗ ಒಳಗಿನಿಂದ ಪತ್ನಿಯನ್ನು ಕರೆ ತರಲಾಯಿತು. ಆಕೆಯನ್ನು ಕಂಡೊಡನೆ ಓಡೋಡಿ ಬಂದ ಕೆಹರ್ ಸಿಂಗ್, ಆಕೆಯನ್ನು ಬಿಗಿದಪ್ಪಿದರು. 9 ವರ್ಷಗಳ ಬಳಿಕ ಭೇಟಿಯಾದ ಇಬ್ಬರು ಒಂದು ಕ್ಷಣ ಭಾವುಕಾರಾದರು. ಇವರಿಬ್ಬರ ಆನಂದಭಾಷ್ಪ ಕಂಡು ಅಲ್ಲಿದ್ದವರ ಕಣ್ಣುಗಳು ಒದ್ದೆಯಾಗಿದ್ದವು. ಧರ್ಮಪತ್ನಿಗೆ ಸಿಹಿ ತಿನಿಸಿ ಈ ಖುಷಿಯನ್ನು ಸಂಭ್ರಮಿಸಿದರು.
ಅರೆನಗ್ನ ಸ್ಥಿತಿಯಲ್ಲಿ ಪತ್ತೆ
ದೆಹಲಿಯಲ್ಲಿ ನಾಪತ್ತೆಯಾಗಿದ್ದ ದರ್ಶಿನಿ, ಊರೂರು ಸುತ್ತಿ ಕುಶಾಲನಗರದಲ್ಲಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆ ಆಗಿದ್ದರು. ಈಕೆಯನ್ನು ಕಂಡ ಪೊಲೀಸರು ಮಡಿಕೇರಿಯ ತನಲ್ ಎಂಬ ಆಶ್ರಯ ಕೇಂದ್ರಕ್ಕೆ ತಂದು ಸೇರಿಸಿದ್ದರು. ಸುಮಾರು ನಾಲ್ಕು ವರ್ಷಗಳಿಂದ ದರ್ಶಿನಿ ಅಲ್ಲಿಯೇ ಇದ್ದರು. ಈಕೆಗೆ ಮಹಮದ್ ಎಂಬುವವರು ಆಶ್ರಯ ಕೊಟ್ಟು, ಚಿಕಿತ್ಸೆ ಕೊಡಿಸುತ್ತಿದ್ದರು.
ಕಳೆದ ಆರು ತಿಂಗಳ ಹಿಂದಷ್ಟೇ ದರ್ಶಿನಿಗೆ ತನ್ನ ಊರು ಹಾಗೂ ತನ್ನವರ ನೆನಪು ಬಂದಿದೆ. ತಾನು ಹರ್ಯಾಣದವಳು ಎಂಬ ವಿಷಯವನ್ನು ತಿಳಿಸಿದ್ದರು. ಈ ಮಾಹಿತಿಯನ್ನು ಇಟ್ಟುಕೊಂಡು ತನಲ್ ಸಂಸ್ಥೆಯ ಮಹಮದ್‌ರವರು ಹರ್ಯಾಣದ ಹಲವು ಪೊಲೀಸ್ ಠಾಣೆಗಳಿಗೆ ಕರೆ ಮಾಡಿ ಮಿಸಿಂಗ್ ಆದವರ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಎಲ್ಲರ ಮಾಹಿತಿಯನ್ನು ಕಲೆ ಹಾಕಿದಾಗ ದರ್ಶಿನಿಯ ಪತಿಯ ಸಂಪರ್ಕ ಸಿಕ್ಕಿದೆ. ಹೀಗಾಗಿ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ದೂರಾಗಿದ್ದ ದಂಪತಿಯನ್ನು ಒಂದು ಮಾಡಿದರು.
ಕಡೆಗೂ ತನ್ನವರನ್ನು ಸೇರಿದ ಖುಷಿಯಲ್ಲಿ ಸಿಂಗ್ ಹಾಗೂ ದರ್ಶಿನಿ ದಂಪತಿಯು ತನಲ್ ಸಂಸ್ಥೆಯಲ್ಲಿದ್ದವರಿಗೆ ಧನ್ಯತಾ ಭಾವದೊಂದಿಗೆ ನಮಸ್ಕರಿಸಿ ದೆಹಲಿಗೆ ಹೊರಟಿದ್ದಾರೆ. ನಾಲ್ಕು ವರ್ಷ ತನ್ನನ್ನು ಸಾಕಿ ಸಲುಹಿದವರನ್ನು ಬಿಟ್ಟು ಹೋಗುವಾಗ ದರ್ಶಿನಿಯ ಕಣ್ಣುಗಳು ಒದ್ದೆಯಾಗಿದ್ದವು.
ಇದನ್ನೂ ಓದಿ | Karnataka Election | ಬಿಜೆಪಿಗೆ ಮತ ನೀಡಲು ಕರ್ನಾಟಕದ ಜನ ಸಿದ್ಧರಾಗಿದ್ದಾರೆ: ಅಮಿತ್ ಶಾ