ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ (Sri Kshetra Dharmasthala) ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ (Dr D Veerendra Heggade) ಅವರ ವಿರುದ್ಧ ಮಾಧ್ಯಮಗಳ ಮೂಲಕ ಯಾವುದೇ ಅವಹೇಳನಕಾರಿ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು (Bangalore city Civil and sessions court) ಈಚೆಗೆ ತಾತ್ಕಾಲಿಕ ಪ್ರತಿಬಂಧಕಾದೇಶ (Temporary Injunction) ಮಾಡಿದೆ. ಅಲ್ಲದೇ, 61 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಜತೆಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ (Posts in Social Media) ಮಾಡಲಾಗಿರುವ ಪೋಸ್ಟ್‌ಗಳನ್ನು ತೆಗೆದುಹಾಕುವಂತೆಯೂ ಕೋರ್ಟ್ ಸೂಚಿಸಿದೆ.
2012ರಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿ ನಡೆದಿದ್ದ ಸೌಜನ್ಯ ಸಾವಿನ (Soujanya Death Case) ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಧರ್ಮಸ್ಥಳ ಮತ್ತು ಧರ್ಮಾಧಿಕಾರಿಯವರನ್ನು ಗುರಿಯಾಗಿಟ್ಟುಕೊಂಡು ಅಪಪ್ರಚಾರ ನಡೆಸುತ್ತಿದ್ದಾರೆ. ಬಾಲಕಿಯ ಕೊಲೆಯ ಹಿಂದೆ ಧರ್ಮಸ್ಥಳದ ಕೈವಾಡ ಇದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಹಿಂದೆಯೂ ಈ ಅಪಪ್ರಚಾರ ಜಾರಿಯಲ್ಲಿ ಇತ್ತಾದರೂ ಇತ್ತೀಚೆಗೆ ಸಿಬಿಐ ನ್ಯಾಯಾಲಯವು ಪ್ರಕರಣದಲ್ಲಿ ಆರೋಪಿ ಎಂದು ಬಂಧಿತನಾಗಿದ್ದ ಸಂತೋಷ್ ರಾವ್‌ನ ಬಿಡುಗಡೆ ಮಾಡಿದ ನಂತರ ಈ ಕೂಗು ಇನ್ನಷ್ಟು ಹೆಚ್ಚಾಗಿದೆ. ಹೀಗಾಗಿ ಧರ್ಮಸ್ಥಳದ ನಾಗರಿಕರ ಪರವಾಗಿ ಶೀನಪ್ಪ ಮತ್ತು ಇತರರು ಕೋರ್ಟ್‌ಗೆ ದಾವೆ ಸಲ್ಲಿಸಿದ್ದರು.
ಸ್ಥಳೀಯರಾದ ಮಹೇಶ್ ಶೆಟ್ಟಿ ತಿಮರೋಡಿ, ಜಗದೀಶ್, ಪ್ರಭಾ ಬೆಳವಂಗಲ, ಸೋಮನಾಥ್ ನಾಯಕ್, ಬಿ ಎಂ ಭಟ್, ವಿಠ್ಠಲ ಗೌಡ ಮತ್ತಿತರರು ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಕೆಲವು ಮಾಧ್ಯಮಗಳು ಧರ್ಮಸ್ಥಳ ಮತ್ತು ಹೆಗ್ಗಡೆ ಅವರ ಕುಟುಂಬಸ್ಥರ ವಿರುದ್ಧ ಅವಹೇಳನಕಾರಿ ವರದಿ ಮಾಡುತ್ತಿವೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.
ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 11ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಡಿ ಪಿ ಕುಮಾರಸ್ವಾಮಿ ಅವರು ಮಾನಹಾನಿಕರ ವರದಿಗಳಿಗೆ ಪ್ರತಿಬಂಧಕಾಜ್ಞೆ ನೀಡಿದ್ದಾರೆ. ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳಲ್ಲಿ ವರದಿಯಾಗಿರುವ ಅವಹೇಳನಕಾರಿ ವರದಿಗಳನ್ನು ತೆಗೆದು ಹಾಕುವಂತೆ ನ್ಯಾಯಾಲಯವು ಆದೇಶದಲ್ಲಿ ನಿರ್ದೇಶಿಸಿದೆ.
“ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ನಡೆಸುತ್ತಿರುವ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್, ವಿದ್ಯುನ್ಮಾನ ಮಾಧ್ಯಮ ಮತ್ತು ಇತರೆ ಯಾವುದೇ ಮಾಧ್ಯಮದಲ್ಲಿ ಯುವತಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ವರದಿ ಮಾಡಬಾರದು” ಎಂದು ನ್ಯಾಯಾಲಯವು ಪ್ರತಿಬಂಧಕಾದೇಶದಲ್ಲಿ ಹೇಳಿದೆ.
ಸಿಬಿಐ ತನಿಖೆಗೆ ಮನವಿ ಮಾಡಿದ್ದೇ ನಾನು ಎಂದಿದ್ದರು ಹೆಗ್ಗಡೆಯವರು
ಕ್ಷೇತ್ರದ ಬಗ್ಗೆ ಅಪಪ್ರಚಾರ ಹೆಚ್ಚುತ್ತಿರುವ ನಡುವೆ ಇತ್ತೀಚೆಗೆ ತಮ್ಮ ಸಂಸ್ಥೆಗಳ ವಿಭಾಗೀಯ ಮುಖ್ಯಸ್ಥರ ಸಭೆಯನ್ನು ನಡೆಸಿದ ಡಾ. ವೀರೇಂದ್ರ ಹೆಗ್ಗಡೆಯವರು ಸೌಜನ್ಯ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು. ಅಂದು ಸೌಜನ್ಯ ಕೊಲೆಯ ಸಿಬಿಐ ತನಿಖೆಗೆ ಒತ್ತಾಯಿಸಿ ತಾವೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾಗಿ ಹೇಳಿದ್ದಾರೆ. ಇದರ ಜತೆಗೆ ತಮ್ಮ ಮತ್ತು ಕ್ಷೇತ್ರದ ಬಗ್ಗೆ ನಡೆಸುತ್ತಿರುವ ಅವಹೇಳನವನ್ನು ನಿಲ್ಲಿಸಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: Dr D Veerendra Heggade : ಸೌಜನ್ಯ ಪ್ರಕರಣದಲ್ಲಿ ಮೌನ ಮುರಿದ ಡಾ. ಹೆಗ್ಗಡೆ; ವೈಯಕ್ತಿಕ ನಿಂದನೆ ನಿಲ್ಲಿಸಿ ಎಂದು ಎಚ್ಚರಿಕೆ