ಬೆಳಗಾವಿ: ಮೂರನೇ ಡೋಸ್ ಕೋವಿಡ್-19 (coronavirus) ಲಸಿಕೆ ಪಡೆದರೆ ಹಾಗೆ ಆಗುತ್ತದೆ ಹೀಗೆ ಆಗುತ್ತದೆ ಎಂಬ ಅಂತೆಕಂತೆಗಳನ್ನು ಬಿಟ್ಟು ಲಸಿಕೆ ಪಡೆಯಬೇಕು ಎಂದು ಸಾರ್ವಜನಿಕರಿಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದ್ದಾರೆ.
ಬೆಳಗಾವಿ ಅಧಿವೇಶನದ ನಡುವೆಯೇ ಕೋವಿಡ್ ಕುರಿತು ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು ಹಾಗೂ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದ ನಂತರ ಸುಧಾಕರ್ ಮಾತನಾಡಿದರು.
ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕೆಂದು ಸೂಚನೆ ನೀಡಲಾಗಿದೆ. ಇದನ್ನು ಸಾರ್ವಜನಿಕರು ಪಾಲಿಸಬೇಕು. ಜಿಲ್ಲಾ ಆಸ್ಪತ್ರೆಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ಗಾಗಿ ಬೆಡ್ ಮೀಸಲು ಮಾಡಲು ಸೂಚನೆ ನೀಡಲಾಗುವುದು.
3ನೇ ಡೋಸ್ ಲಸಿಕಾಕರಣಕ್ಕೆ ಒತ್ತು ಕೊಡಬೇಕೆಂದು ಚರ್ಚಿಸಲಾಗಿದೆ. ಶೇ.20% ರಷ್ಟು ಮಾತ್ರ 3 ನೇ ಡೋಸ್ ಲಸಿಕಾಕರಣ ಆಗಿದೆ. ಹಾಗಾಗಿ ಜಿಲ್ಲೆಗಳಲ್ಲಿ ವಿಶೇಷ ಲಸಿಕಾ ಕ್ಯಾಂಪ್ ನಡೆಸಿ 3ನೇ ಡೋಸ್ ಪ್ರಾಮುಖ್ಯತೆ ತಿಳಿಸಿಕೊಡಬೇಕೆಂದು ಹೇಳಲಾಗಿದೆ.
ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸರ್ವ ಸಿದ್ದತೆ ನಡೆಸಿದೆ. 3 ನೇ ಡೋಸ್ ಶೀಘ್ರವಾಗಿ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಅಂತೆ ಕಂತೆಗಳನ್ನು ಬಿಡಬೇಕು. 3ನೇ ಡೋಸ್‌ನಿಂದ ಅಪಾಯ ಎಂದು ಕೆಲವರು ಹೇಳುತ್ತಾರೆ. ಸದನದಲ್ಲೂ ಕೂಡ ಕೆಲವರು ಇದನ್ನು ಹೇಳಿದ್ದರು. ಲಸಿಕೆಗೂ ಸೈಡ್‌ಎಫೆಕ್ಟ್ಸ್‌ಗೂ ಸಂಬಂಧವಿಲ್ಲ. ಲಸಿಕೆಯಿಂದ ಅಡ್ಡಪರಿಣಾಮ ಆಗಿದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದರು.
ಜನರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು. ಲಸಿಕಾಕರಣದ ಬಗ್ಗೆ ಜಾಗೃತಿಯನ್ನು ಮಾಧ್ಯಮ ಮತ್ತಷ್ಟು ಪ್ರಸಾರ ಮಾಡಬೇಕು. ಬಿಎಫ್ 7 ತಳಿ ಯಾವುದೇ ಕ್ಷಣಕ್ಕೂ ನಮ್ಮ ರಾಜ್ಯಕ್ಕೆ ಕಾಲಿಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯ ಕ್ರಮ ಅಗತ್ಯ. ಹೊಸ ವರ್ಷ ಆಚರಣೆ ವಿಚಾರ ಹೊರಾಂಗಣ ಪ್ರದೇಶದಲ್ಲಿ ದೊಡ್ಡ ಸಮಸ್ಯೆ ಆಗುವುದಿಲ್ಲ. ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಪ್ರಧಾನಿಗಳ ಸಭೆ ನಡೆಯುತ್ತಿದೆ. ಸಭೆ ಬಳಿಕ ಅಲ್ಲಿನ ನಿಯಾಮವಳಿ ನೋಡಿಕೊಂಡು ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಮತ್ತು ನಿಯಾಮವಳಿ ಬಿಡುಗಡೆ ಮಾಡಲಿದ್ದೇವೆ. ಸಂಜೆ ಒಳಗೆ ಹೊಸ ಮುನ್ನೆಚ್ಚರಿಕೆ ಕ್ರಮ ನಿಯಾಮವಳಿ ಬಿಡುಗಡೆ ಮಾಡಲಿದ್ದೇವೆ. ಏರ್ಪೋರ್ಟ್‌ಗಳಲ್ಲಿ ರ‍್ಯಾಂಡಮ್ ಟೆಸ್ಟ್ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಸೂಚನೆ ನೀಡಿದರೆ ಮತ್ತಷ್ಟು ಬಿಗಿಗೊಳಿಸುತ್ತೇವೆ ಎಂದರು.
ಭಾರತ್ ಜೋಡೋ ನಿಲ್ಲಿಸಲು ಕೋವಿಡ್ ನಾಟಕ ಎಂಬ ಡಿಕೆಶಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, 100 ದಿನದಲ್ಲಿ ಕೋವಿಡ್ ಬಗ್ಗೆ ನಾವ್ಯಾರೂ ಮಾತನಾಡಲಿಲ್ಲ. ಚೀನಾದಲ್ಲಿ ನಾವೇ ಈಗ ಕೋವಿಡ್ ಜಾಸ್ತಿ ಮಾಡಿದ್ದೇವಾ? ಅಮೇರಿಕದಲ್ಲಿ ನಾವು ಜಾಸ್ತಿ ಮಾಡಿದ್ದೀವಾ? ಸಮಾಜದ ತಿಳಿವಳಿಕೆ ಇರಬೇಕು ಇವರಿಗೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ | ಕೋವಿಡ್-19 | ಮೂರನೇ ಡೋಸ್ ಲಸಿಕೆ ಪಡೆಯದವರ ಮೇಲೆ ಹೆಚ್ಚಿನ ನಿಗಾ: ಡಾ. ಕೆ. ಸುಧಾಕರ್