Site icon Vistara News

‌Covid 19 | ಕೋವಿಡ್ ವಿಚಾರದಲ್ಲಿ ಹಣ ದುರುಪಯೋಗ ಆಗಿದ್ದರೆ ತನಿಖೆ ನಡೆಸಿ: ಸಿಎಂಗೆ ಡಿಕೆಶಿ ಸವಾಲು

dk shivakumar

ಬೆಂಗಳೂರು: ಕೋವಿಡ್ (‌Covid 19) ಸಮಯದಲ್ಲಿ ಕಾರ್ಮಿಕರ ಪ್ರಯಾಣಕ್ಕೆ ಪಕ್ಷದ ವತಿಯಿಂದ ಸಾರಿಗೆ ಇಲಾಖೆಗೆ 1 ಕೋಟಿ ರೂ. ನೀಡಲು ಮುಂದಾದ ಬಗ್ಗೆ ಲೆಕ್ಕ ಕೇಳುವ ಮುಖ್ಯಮಂತ್ರಿಗಳೇ, ನಾವು ಅಕ್ರಮ ಮಾಡಿದ್ದರೆ ನಿಮಗೆ ಬೇಕಾದ ತನಿಖೆ ಮಾಡಿಸಿ ನಾವು ಸಿದ್ಧರಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಸರ್ಕಾರದ ವತಿಯಿಂದ ಮಾಡಿದ ಕೆಲಸದ ಲೆಕ್ಕ ಕೊಡಲಿ. ನಂತರ ನಾವು ಕೋವಿಡ್ ಸಮಯದಲ್ಲಿ ಮಾಡಿದ ಕೆಲಸ, ಕಾರ್ಯಕರ್ತರು ಹಾಗೂ ಶಾಸಕರು ಕೊಟ್ಟಿರುವ ಹಣ ಹಾಗೂ ವೆಚ್ಚದ ವಿಚಾರದಲ್ಲಿ ಸರ್ಕಾರ ತನಗೆ ಬೇಕಾದ ಅಧಿಕಾರಿಗಳಿಂದ ತನಿಖೆ ನಡೆಸಲಿ. ನಾವು ರೈತರಿಂದ ತರಕಾರಿ ಖರೀದಿ ಮಾಡಿದ್ದರಿಂದ, ಜನರಿಗೆ ಊಟ ಕೊಟ್ಟಿರುವ ವಿಚಾರದ ಲೆಕ್ಕವನ್ನೂ ಕೊಡುತ್ತೇವೆ. ಅಲ್ಲದೆ, ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 1 ಲಕ್ಷ ರೂ. ನೀಡಿರುವುದೂ ಈ ತನಿಖೆ ವ್ಯಾಪ್ತಿಗೆ ಒಳಪಡಲಿ ಎಂದರು.

ಇದನ್ನೂ ಓದಿ | ವಿರೋಧಕ್ಕೆ ಎಚ್ಚೆತ್ತ ಸರ್ಕಾರ: ಶೂ, ಸಾಕ್ಸ್‌ಗೆ ₹132 ಕೋಟಿ ಅನುಮೋದನೆ ನೀಡಿದ ಸಿಎಂ

ಕೇಂದ್ರ ಸರ್ಕಾರ ಕೊಟ್ಟ 50 ಸಾವಿರ ರೂ. ಹಾಗೂ ನೀವು ಘೋಷಿಸಿದ 1 ಲಕ್ಷ ರೂ.ವನ್ನು ಫಲಾನುಭವಿಗಳಿಗೆ ತಲುಪಿಸಲು ಇಂದಿನವರೆಗೂ ಸಾಧ್ಯವಾಗಿಲ್ಲ. ಕೋವಿಡ್‌ನಲ್ಲಿ ನಾವು ಏನೆಲ್ಲ ಕೆಲಸ ಮಾಡಿದ್ದೇವೆ ತಿಳಿಸುತ್ತೇನೆ. ನಾನು ಹಣ ದುರುಪಯೋಗ ಮಾಡಿದ್ದರೆ ನನ್ನ ವಿರುದ್ಧ ತನಿಖೆಗೆ ಆದೇಶಿಸಿ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು. ಇತ್ತೀಚೆಗೆ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಲು ನಿಮ್ಮ ಕೈಲಿ ಸಾಧ್ಯವಾಗದಿದ್ದರೆ ಇಡೀ ರಾಜ್ಯದಲ್ಲಿ ಸಿ.ಎಸ್.ಆರ್ ಮೂಲಕ ಹಣ ಸಂಗ್ರಹಿಸಲು ಸಿದ್ಧವಾಗಿದ್ದೆ. ಸಂಜೆ ವೇಳೆಗೆ ಅವರೇ ಹಣ ನೀಡುವುದಾಗಿ ಘೋಷಿಸಿದರು.

ಪಿಎಸ್‌ಐ ನೇಮಕಾತಿ

ಪಿಎಸ್ಐ ನೇಮಕಾತಿ ಅಕ್ರಮ ಹಾಗೂ ಪೊಲೀಸ್ ಇಲಾಖೆಯಲ್ಲಿ ಯಾವ ಹುದ್ದೆಗೆ ಎಷ್ಟು ದರ ನಿಗದಿ ಮಾಡಲಾಗಿದೆ ಎಂದು ಮಾಧ್ಯಮಗಳೇ ಪಟ್ಟಿ ಬಿಡುಗಡೆ ಮಾಡಿವೆ. ಆದರೂ ಸರ್ಕಾರ ಏಕೆ ಈ ವಿಚಾರವಾಗಿ ಕ್ರಮ ಕೈಗೊಂಡಿಲ್ಲ? ನಿಮ್ಮ ನಾಯಕರೇ ಪಿಎಸ್ಐ ಹಗರಣದಲ್ಲಿ ಮಾಜಿ ಸಿಎಂ ಮಗ ಭಾಗಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರು ಭಾಗಿಯಾಗಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ನಿಮ್ಮ ನಾಯಕರು ಹೇಳಿಕೆ ನೀಡಿದರೂ ತನಿಖಾಧಿಕಾರಿಗಳು ಯಾಕೆ ಅವರ ತನಿಖೆ ಮಾಡಿ ಮಾಹಿತಿ ಪಡೆದಿಲ್ಲ? ಎಂದು ಪ್ರಶ್ನೆ ಮಾಡಿದರು.

ಸರ್ಕಾರವೇ ಈ ಹಗರಣವನ್ನು ಅಧಿಕಾರಿಗಳ ಮೂಲಕ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಬಂಧಿತ ಐಪಿಎಸ್ ಅಧಿಕಾರಿಯನ್ನು ಅವರ ಬೇಡಿಕೆಯಂತೆ ಸೆಕ್ಷನ್ 164 ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ. ಯಾರೆಲ್ಲ ಬಂಧಿತರಾಗಿರುವವರಿಂದ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ ಎಂದು ಸವಾಲು ಹಾಕಿದರು.

ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ದರೆ ಅದನ್ನು ಬಹಿರಂಗಪಡಿಸಿ. ಯಾರ ಹೆಸರಾದರೂ ಬರಲಿ ನನ್ನ ಹೆಸರು ಬಂದರೂ ನೋಟಿಸ್ ನೀಡಿ ಬಂಧಿಸಿ. ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡ ಇದ್ದು ಅಮೃತ್ ಪಾಲ್ ಮೇಲೆ ಒತ್ತಡ ಹಾಕಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಜಿಲ್ಲೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಯ ವಿಚಾರಣೆಯನ್ನು ತಡೆದು ನಂತರ 20-30 ದಿನಗಳ ನಂತರ ಬಂಧಿಸಿದ್ದಾರೆ. ಇದು ನಮಗೆ ಬಂದಿರುವ ಮಾಹಿತಿಯಾಗಿದೆ. ಯಾವ ಯಾವ ಇಲಾಖೆಯಲ್ಲಿ ಏನೇನಾಗಿದೆ ಎಂದು ಗೊತ್ತಿದೆ. ಇತರೆ ಇಲಾಖೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಆ ಪ್ರಕರಣ ವಿಚಾರವಾಗಿ ತನಿಖೆ ಮಾಡಿಲ್ಲ ಯಾಕೆ? ಸರ್ಕಾರ, ರಾಜಕಾರಣಿ, ಮಂತ್ರಿಗಳು, ಹಿರಿಯ ಅಧಿಕಾರಿಗಳ ಕುಮ್ಮಕ್ಕು ಇಲ್ಲದೆ ಇಂತಹ ಯಾವುದೇ ಪ್ರಕರಣ ನಡೆಯಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.

ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ತೆಗೆದುಹಾಕಲಿ

ಸಿದ್ದರಾಮಯ್ಯ ಅವರ ಕಾರ್ಯಕ್ರಮ ವ್ಯಕ್ತಿ ಪೂಜೆ ಅಲ್ಲವೇ ಎಂಬ ಸಚಿವ ಸುಧಾಕರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಈ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಅನುಕೂಲಕ್ಕೆ ಬೇಕಾಗಿರುವ ಕಾರ್ಯಕ್ರಮಗಳನ್ನು ನಾವು ಚರ್ಚೆ ಮಾಡಿದರೆ ಬಿಜೆಪಿ ಅವರಿಗೆ ಹೊಟ್ಟೆ ಕಿಚ್ಚು ಯಾಕೆ? ಅವರು ಏನಾದರೂ ಹೇಳಲಿ, ಅವರು ನಮ್ಮ ಪಕ್ಷದಲ್ಲಿ ಬಿರುಕು ಮೂಡಿಸಲು ಸಾಧ್ಯವಿಲ್ಲ. ಮೊದಲು ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ತೆಗೆದುಹಾಕಲಿ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ | ಖಾಕಿಗೆ ಮರ್ಯಾದೆ ಹೋಗಿದೆ, ಕಾವಿಗೆ ಮಾತ್ರ ಗೌರವವಿದೆ; ಮಠಗಳ ಕೊಡುಗೆ ಶ್ಲಾಘಿಸಿದ ಡಿ.ಕೆ. ಶಿವಕುಮಾರ್

Exit mobile version