Site icon Vistara News

Covid-19 Scam: 8.6 ಕೋಟಿ ಉಳಿತಾಯ ಮಾಡಿದ್ದಾಗಿ ಸುಳ್ಳು ಹೇಳಿದ ಆರೋಗ್ಯ ಇಲಾಖೆ: ಕೋವಿಡ್‌ ಹಗರಣ ಬೆಳಕಿಗೆ

Covid 19 scam

ಬೆಂಗಳೂರು: ಕೋವಿಡ್‌-19 ಸಾಂಕ್ರಾಮಿಕದ ಸಂದರ್ಭದಲ್ಲಿ ತುರ್ತು ಅಗತ್ಯವಿದ್ದ ಔಷಧೋಪಕರಣಗಳ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ (Covid-19 Scam) ನಡೆದಿದೆ ಎಂಬ ಸಾಮಾನ್ಯ ಮಾತುಗಳಿಗೆ ಈಗ ಪುಷ್ಠಿ ಸಿಕ್ಕಿದೆ. ರಾಜ್ಯಸರ್ಕಾರಕ್ಕೆ 19 ಕೋಟಿ ರೂ. ನಷ್ಟ ಮಾಡಿದ್ದಷ್ಟೆ ಅಲ್ಲದೆ, 8.6 ಕೋಟಿ ರೂ. ಉಳಿತಾಯ ಮಾಡಿದ್ದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕೋವಿಡ್‌-19 ನಿಯಂತ್ರಿಸುವಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೈಗೊಂಡ ಕ್ರಮಗಳ ಕುರಿತು ತನ್ನ 12ನೇ ವರದಿಯನ್ನು ಸಲ್ಲಿಸಿದ್ದರಲ್ಲಿ ಅನೇಕ ಅಂಶಗಳನ್ನು ತಿಳಿಸಲಾಗಿದೆ.

ಕರ್ನಾಟಕ ರಾಜ್ಯವು ಐದು ಸಾವಿರ ಪರೀಕ್ಷೆಯ ರಾಸಾಯನಿಕಗಳನ್ನು ಉಪಕರಣಗಳೊಂದಿಗೆ ಉಚಿತವಾಗಿ ಪಡೆದಿದೆ ಹಾಗೂ ಹಿಮಾಚಲ ಪ್ರದೇಶವು ಕೇವಲ ಒಂದು ಸಾವಿರ ಪರೀಕ್ಷಾ ರಸಾಯನಿಕಗಳನ್ನು ಉಚಿತವಾಗಿ ಪಡೆದಿರುತ್ತದೆಯೆಂದು ಆರೋಗ್ಯ ಇಲಾಖೆ ತಿಳಿಸಿತ್ತು. ಇದರ ಪರಿಣಾಮವಾಗಿ ರಾಜ್ಯಕ್ಕೆ ರೂ. 8.60 ಕೋಟಿ ಉಳಿತಾಯವಾಗಿರುತ್ತದೆಯೆಂದು ಇಲಾಖೆ ಹೇಳಿತ್ತು. ಈ ತಿಳಿಸಿರುವ ಅಂಶವನ್ನು ಹಾಗೂ ಇಲಾಖೆಯು ಸಲ್ಲಿಸಿದ್ದ ಅಪೂರ್ಣ ದಾಖಲೆಗಳನ್ನು ಸಮಿತಿಯ ಪರಿಶೀಲಿಸಿದಾಗ, ರಾಜ್ಯ ಸರ್ಕಾರವು ಪ್ರತಿ ಯೂನಿಟ್‌ಗೆ ರೂ. 2,96,180 ಗಳಂತೆ 1195 ಯೂನಿಟ್‌ಗಳನ್ನು ಖರೀದಿಸಿದ್ದು ಗೊತ್ತಾಗಿದೆ. ಅದೇ ವೈಶಿಷ್ಟ್ಯಯತೆಯ ಉಪಕರಣಗಳನ್ನು ಹಿಮಾಚಲ ಪ್ರದೇಶವು ಕೇವಲ 1,30,000 ರೂ. ಗಳ ದರದಲ್ಲಿ ಖರೀದಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ 19.86 ಕೋಟಿ ರೂ. ಮೊತ್ತದಷ್ಟು ಅಧಿಕ ವೆಚ್ಚವಾಗಿದೆ.

ಇಷ್ಟಾಗಿಯೂ, ಖರೀದಿಯಲ್ಲಿ 8.60 ಕೋಟಿ ರೂ. ಉಳಿತಾಯವಾಗಿದೆಯೆಂಬ ಇಲಾಖೆಯ ಉತ್ತರವು ಸಮಿತಿಯನ್ನು ದಾರಿ ತಪ್ಪಿಸುವ ಉದ್ದೇಶದಿಂದ ಕೂಡಿದೆಯೆಂದು ಸಮಿತಿಯು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತದೆ.

ಕರ್ನಾಟಕ ಸ್ಟೇಟ್ ಡ್ರಗ್ಸ್, ಲಾಜಿಸ್ಟಿಕ್ಸ್ ಅಂಡ್ ವೇರ್‌ಹೌಸಿಂಗ್ ಸೊಸೈಟಿ ಸಂಸ್ಥೆಯು ಖರೀದಿಸಿರುವ ಪಿ.ಪಿ.ಇ. ಕಿಟ್‌ಗಳ ಬಗ್ಗೆ, ಸ್ಯಾನಿಟೈಸರ್‌ಗಳ ಖರೀದಿ ಮತ್ತು ಪೂರೈಕೆ ಬಗ್ಗೆ, ಖರೀದಿಸಿರುವ ವೆಂಟಿಲೇಟರ್‌ಗಳ ಬಗ್ಗೆ, ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಗಳಿಂದ ಗ್ಲೂಕೋಸ್ ಖರೀದಿಸಿರುವ ಬಗ್ಗೆ ವಿಚಾರಣೆ ನಡೆಸಿದೆ. ಸಿರಿಂಜ್ ಉಪಕರಣಗಳ ಖರೀದಿಯಲ್ಲಿ, ಸರ್ಕಾರಕ್ಕಾದ ನಷ್ಟದ ಬಗ್ಗೆ, ಚೀನಾ ಮೂಲದ ಕಂಪನಿಗಳಿಂದ ಖರೀದಿಸಲಾದ ಮಾಸ್ಕ್ಗಳು, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪೂರಕ ದಾಖಲೆಗಳೊಂದಿಗೆ ಸಲ್ಲಿಸಲು ಸಮಿತಿ ವತಿಯಿಂದ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರದ ಮೂಲಕ ಕಳುಹಿಸಿ, ಅವರಿಂದ ಸೂಕ್ತ ಉತ್ತರವನ್ನು ಪಡೆಯಲು ಸಮಿತಿಯು ತೀರ್ಮಾನಿಸಿತು.

ಆದರೆ, ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯವರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆಯಲಾಗಿದ್ದ ಪತ್ರಗಳಲ್ಲಿನ ಅಂಶಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾಗಲೀ ಅಥವಾ ಇಲಾಖಾ ಮುಖ್ಯಸ್ಥರಾಗಲೀ ಯಾವುದೇ ಮಾಹಿತಿಯನ್ನು ಸಮಿತಿಗೆ ಸಲ್ಲಿಸಿರುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಫೆಬ್ರವರಿ, 2021ರಲ್ಲಿ ಪ್ರತಿ ಯೂನಿಟ್‌ 3-Part Hematology Cell Countsಗೆ 2,96,180 ರೂ. ದರದಲ್ಲಿ 1,195 ಯೂನಿಟ್‌ಗಳನ್ನು ಟೆಂಡರ್ ಮೂಲಕ ಖರೀದಿಸಿತ್ತು. ಆದರೆ, ಅದೇ ಅವಧಿಯಲ್ಲಿ ಸದರಿ ಉಪಕರಣವನ್ನು ಹಿಮಾಚಲ ಪ್ರದೇಶ ರಾಜ್ಯವು ಪ್ರತಿ ಯೂನಿಟ್‌ಗೆ ಕೇವಲ 1,30,000 ರೂ. ವೆಚ್ಚದಲ್ಲಿ ಖರೀದಿಸಿತ್ತು. ಈ ವ್ಯತ್ಯಾಸವು 19,85,85,100 ರೂ. ಅಧಿಕ ವೆಚ್ಚವಾಗಿದೆ.

ಇದನ್ನೂ ಓದಿ: Oral antiviral for Covid-19 : ಕೋವಿಡ್‌ ಚಿಕಿತ್ಸೆಗೆ ಬಂತು ಮೊದಲ ಮಾತ್ರೆ, ಯಾರು ಬಳಸಬಹುದು?

ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಸಮಿತಿಗೆ ಇಲಾಖೆಯು ಸಲ್ಲಿಸಿರುವ ಉತ್ತರದಲ್ಲಿ ಪ್ರಮುಖ ದಾಖಲೆಯಾದ ಗುಣ ವೈಶಿಷ್ಠಯತೆ ಬೇಡಿಕೆ ಪಟ್ಟಿಯನ್ನು ಸಲ್ಲಿಸದಿರುವುದನ್ನು ಗಮನಿಸಿರುತ್ತದೆ. ಖರೀದಿಯನ್ನು ಮೂಲ ಬೇಡಿಕೆ ಆಧಾರದ ಮೇಲೆ ಮಾಡಲಾಗಿದೆಯೆಂಬುದನ್ನು ಖಾತ್ರಿ ಮಾಡಿಕೊಳ್ಳಲು ಅವಶ್ಯವಿರುವ ದಾಖಲೆಯನ್ನು ಇಲಾಖೆಯು ಸಲ್ಲಿಸದಿರುವುದರಿಂದ ಖರೀದಿಯ ಪಾರದರ್ಶಕತೆ ಬಗ್ಗೆ ಸಮಿತಿಯು ಸಂಶಯ ವ್ಯಕ್ತ ಪಡಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹಿಮಾಚಲ ಪ್ರದೇಶ ರಾಜ್ಯವು 0.5 ಕೆ.ವಿ.ಎ. 15 ನಿಮಿಷಗಳ ಬ್ಯಾಕಪ್ ಸಾಮರ್ಥ್ಯದ ಆಫ್ ಲೈನ್ ಯು.ಪಿ.ಎಸ್.ಅನ್ನು ಖರೀದಿಸಿರುತ್ತದೆ. ಕರ್ನಾಟಕ ರಾಜ್ಯವು 1.0 ಕೆ.ವಿ.ಎ. 60 ನಿಮಿಷಗಳ ಬ್ಯಾಕಪ್ ಸಾಮರ್ಥ್ಯದ ಆನ್‌ಲೈನ್ ಯು.ಪಿ.ಎಸ್. ಖರೀದಿಸಿತ್ತಾದರೂ, ಆನ್‌ಲೈನ್‌ ಯುಪಿಎಸ್ ವಿತ್ 1.0 ಕೆ.ವಿ.ಎ. ಸಾಮರ್ಥ್ಯದ ಉಪಕರಣದ ವಾಸ್ತವಿಕ ಅವಶ್ಯಕತೆಯನ್ನು ಇಲಾಖೆಯು ಖಚಿತ ಪಡಿಸಿಕೊಂಡಿಲ್ಲ. ಆನ್‌ಲೈನ್‌ ಯು.ಪಿ.ಎಸ್. ಯಾವಾಗಲೂ ಚಾಲನೆಯಲ್ಲಿರುವುದರಿಂದ, ಅದರ ಜೀವನ ಚಕ್ರ ಆಫ್ ಲೈನ್ ಯು.ಪಿ.ಎಸ್.ಗೆ ತುಲನೆ ಮಾಡಿದರೆ, ಬಹಳ ಕಡಿಮೆ ಅವಧಿಯಾಗಿದ್ದು, ವಾರಂಟಿ ಅವಧಿ ಮುಗಿದ ನಂತರ ಹೆಚ್ಚುವರಿ ಖರ್ಚು-ವೆಚ್ಚಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.

ಕೋವಿಡ್ ಸೋಂಕಿತರಲ್ಲಿ ಕಂಡುಬರುವ ಕಪ್ಪು ಶಿಲೀಂಧ್ರ ಚಿಕಿತ್ಸೆಗಾಗಿ ಆಂಪೋಟೆರಿಸಿನ್‌ನ ವಯಲ್ಸ್ ಖರೀದಿಗಾಗಿ ಮೆ|| ಭಾರತ್ ಸೆರಮ್ಸ್ ಅಂಡ್ ವ್ಯಾಕ್ಸಿನ್ಸ್ ಲಿ., ಸಂಸ್ಥೆಯು ಪ್ರತಿ ವಯಲ್ಸ್‌ಗೆ ಸಲ್ಲಿಸಿದ್ದ 5787.60 ರೂ. ಕನಿಷ್ಟ ದರವಾಗಿದ್ದರಿಂದ, 50,000 ವಯಲ್ಸ್‌ಗಳನ್ನು ಸಂಸ್ಥೆಯಿಂದ ಖರೀದಿಸಲು ಆದೇಶ ನೀಡಲಾಗಿತ್ತೆಂದು ಇಲಾಖೆಯು ತಿಳಿಸಿದೆ. ಆದರೆ, ಎರಡನೇ ಕನಿಷ್ಟ ಬಿಡ್‌ದಾರರಾಗಿದ್ದ ಮೆ|| ಮೈಲಾನ್ ಫಾರ್ಮಾಸಿಟಿಕಲ್ ಸಂಸ್ಥೆಯಿಂದ 6247.50 ರೂ. 25000 ವಯಲ್‌ಗಳನ್ನು ಖರೀದಿಸಿದ್ದರಿಂದ ರೂ. 1.14 ಕೋಟಿ ಅಧಿಕ ವೆಚ್ಚವಾಗಿದೆ ಎಂದು ಸಮಿತಿ ಹೇಳಿದೆ.

Exit mobile version