ಬೆಂಗಳೂರು: 75ರ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ರಾಜ್ಯ ಸರ್ಕಾರವು 75 ದಿನಗಳ ಕೋವಿಡ್ ಲಸಿಕೆ (COVID-19 vaccine) ಅಮೃತ ಮಹೋತ್ಸವವನ್ನು ಆರಂಭಿಸಿದೆ. ಶುಕ್ರವಾರದಿಂದ (ಜು.15) ಈ ವಿಶೇಷ ಅಭಿಯಾನ ಶುರುವಾಗಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ.
ಈ ಮೊದಲು ಏಪ್ರಿಲ್ 10ರಿಂದ ಆರೋಗ್ಯ, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿತ್ತು. ಉಳಿದಂತೆ 18 ವರ್ಷ ಮೇಲ್ಪಟ್ಟವರಿಗೆ 225 ರೂ. ಶುಲ್ಕ ನಿಗದಿ ಮಾಡಲಾಗಿತ್ತು. ಈ ಮೂರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 4 ಲಕ್ಷದಷ್ಟು ಮಂದಿ ಮಾತ್ರ ಶುಲ್ಕ ನೀಡಿ ಮೂರನೇ ಡೋಸ್ ಪಡೆದಿದ್ದಾರೆ.
ಉಳಿದಂತೆ ಒಂದು ಕೋಟಿಗೂ ಅಧಿಕ ಮಂದಿ ಅರ್ಹತೆ ಪಡೆದಿದ್ದರೂ, ಲಸಿಕೆ ಪಡೆಯದೆ ದೂರ ಉಳಿದಿದ್ದಾರೆ. ಹೀಗಾಗಿ ಅಮೃತ ಮಹೋತ್ಸವ ಸಂಭ್ರಮದಂದು ವಿಶೇಷ ಅಭಿಯಾನಕ್ಕೆ ಸರ್ಕಾರ ಮುಂದಾಗಿದ್ದು, ಎಲ್ಲರೂ ಮೂರನೇ ಡೋಸ್ ಉಚಿತವಾಗಿ ಪಡೆಯಬಹುದಾಗಿದೆ.
ಇದನ್ನೂ ಓದಿ | ಮಕ್ಕಳಿಗೆ ಕೋವಿಡ್ ಲಸಿಕೆ ಹಿನ್ನಡೆ, ಬಿಬಿಎಂಪಿಯಿಂದ ಶಾಲೆಗಳಲ್ಲಿ ವಿಶೇಷ ಅಭಿಯಾನ
3ನೇ ಡೋಸ್‌ಗೆ ಯಾರೆಲ್ಲ ಅರ್ಹರು?
2ನೇ ಡೋಸ್ ಪಡೆದುಕೊಂಡ ನಂತರ 6 ತಿಂಗಳು ಅಥವಾ 26 ವಾರ ಪೂರ್ಣಗೊಳಿಸಿರುವ 18 ವರ್ಷ ಮೇಲ್ಪಟ್ಟ ಎಲ್ಲರೂ ಜುಲೈ 15ರಿಂದ ಸೆಪ್ಟೆಂಬರ್ 30ರವರೆಗೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು. 75 ದಿನಗಳಲ್ಲಿ ಕರ್ನಾಟಕದಾದ್ಯಂತ 8,000 ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಸುಮಾರು 4.34 ಕೋಟಿ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ವಿತರಿಸುವ ಯೋಜನೆ ರೂಪಿಸಲಾಗದೆ.
ರಾಜ್ಯದಲ್ಲಿ 8.84 ಲಕ್ಷ ಡೋಸ್ ಕೋವಿಶೀಲ್ಡ್ ಹಾಗೂ 31.55 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕಾ ದಾಸ್ತಾನು ಹೊಂದಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ. ಮನೆ ಮನೆಗೆ ಲಸಿಕಾ ಮಿತ್ರ, ಬುಧವಾರದ ಲಸಿಕಾ ಮೇಳದ ಜೊತೆಗೆ ಐಟಿ ಕಂಪನಿ, ಕಾರ್ಖಾನೆ, ಸರ್ಕಾರಿ ಕಚೇರಿಗಳಲ್ಲಿ ಸ್ಥಳದಲ್ಲೇ ಲಸಿಕೆ ನೀಡುವ ಜಿಲ್ಲಾ ಮಟ್ಟದ ಸೂಕ್ಷ್ಮ ಕ್ರಿಯಾ ಯೋಜನೆ ರೂಪಿಸಲಾಗಿದೆ. ಎಲ್ಲ ಅರ್ಹ ನಾಗರಿಕರು ಮುನ್ನೆಚ್ಚರಿಕೆ ಡೋಸ್ ಪಡೆಯುವ ಮೂಲಕ ಕೊರೊನಾ ಮುಕ್ತ ಕರ್ನಾಟಕ ನಿರ್ಮಿಸಲು ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಕೋವಿಡ್ ಲಸಿಕೆಯಿಂದ ಯುವಜನರಲ್ಲಿ ಹೃದಯ ರೋಗ ಹೆಚ್ಚಾಗಿದ್ದು ನಿಜವೇ?