ರಾಮನಗರ: ರಾಮ ನಗರ ಜಿಲ್ಲೆಯಲ್ಲಿ (Ramanagara news) ದನಗಳ್ಳರ ಅಟ್ಟಹಾಸ (Cow slaughter) ಯಾವ ರೀತಿ ಇದೆಯೆಂದರೆ, ಇಲ್ಲಿನ ಮನೆಯೊಂದರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ನಾಲ್ಕು ಹಸುಗಳನ್ನು (four Cows stolen) ಕಳವು ಮಾಡಿದ ದುಷ್ಟರು, ಪಕ್ಕದ ತೋಟದಲ್ಲೇ ಅದನ್ನು ಮಾಂಸ ಮಾಡಿ ದೇಹದ ಉಳಿದ ಭಾಗಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.
ಮಾಗಡಿ ತಾಲೂಕಿನ ಬಗೀನಗೆರೆ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಗ್ರಾಮದ ರೈತರಾಗಿರುವ ರಾಮಯ್ಯ ಎಂಬುವವರಿಗೆ ಸೇರಿದ ಹಸುಗಳನ್ನು ಕಳ್ಳರು ಕೊಟ್ಟಿಗೆಯಿಂದಲೇ ಕಳವು ಮಾಡಿದ್ದಾರೆ. ಇವರ ತೋಟದ ಮನೆಯ ಕೊಟ್ಟಿಗೆಯಲ್ಲಿದ್ದ ಹಸುಗಳ ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ.
ಗೋವುಗಳ ಕಳ್ಳತನ ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ, ಈ ಬಾರಿ ದುಷ್ಟರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸಾಮಾನ್ಯವಾಗಿ ಕಳವು ಮಾಡಿದ ಬಳಿಕ ಯಾರಿಗೂ ಗೊತ್ತಾಗದಂತೆ ಅವುಗಳನ್ನು ಬಚ್ಚಿಡುವುದೋ, ದೂರಕ್ಕೆ ಸಾಗಿಸುವ ಕೆಲಸವನ್ನೋ ಈ ದುಷ್ಟರು ಮಾಡುತ್ತಾರೆ. ಆದರೆ, ಈ ಪ್ರಕರಣದಲ್ಲಿ ದುಷ್ಟರು ತಮಗೆ ಯಾರ ಭಯವೂ ಇಲ್ಲ ಎಂಬಂತೆ ವರ್ತಿಸಿದ್ದಾರೆ.
ಹಸುಗಳನ್ನು ಕದ್ದಿರುವ ಅವರು ಸ್ವಲ್ಪ ದೂರಕ್ಕೆ ಎತ್ತಿಕೊಂಡು ಹೋಗಿ ಅದನ್ನು ವಧೆ ಮಾಡಿ, ಮಾಂಸ ಮಾಡುವ ಮೂಲಕ ದೊಡ್ಡ ಮಟ್ಟದ ಕ್ರೌರ್ಯವನ್ನು ಮೆರೆದಿದ್ದಾರೆ. ದನಗಳನ್ನು ಕೊಂದು ಅದರ ಚರ್ಮ ಮತ್ತು ಮಾಂಸ ಹೊತ್ತೊಯ್ದಿರುವ ಇವರು ಉಳಿದ ದೇಹದ ಭಾಗಗಳನ್ನ ಅಲ್ಲೇ ಬಿಟ್ಟು ಹೋಗಿದ್ದಾರೆ.
ಬೆಳಗ್ಗೆ ಎದ್ದು ನೋಡಿದಾಗ ಹಟ್ಟಿಯಲ್ಲಿ ಹಸುಗಳು ಇಲ್ಲದ್ದನ್ನು ನೋಡಿ ಕಂಗಾಲಾದ ರಾಮಯ್ಯ ಅವರು ಹುಡುಕಲು ಶುರು ಮಾಡಿದರು. ಆಗ ವಿಷಯ ತಿಳಿದ ಇತರರೂ ಸೇರಿಕೊಂಡರು. ಆಗ ಪಕ್ಕದ ಇನ್ನೊಂದು ತೋಟದಲ್ಲಿ ದನಗಳ ದೇಹ ಭಾಗಗಳು ಪತ್ತೆಯಾದವು. ಇದರಿಂದಾಗಿ ಈ ದುಷ್ಟರು ಇಂಥ ಕ್ರೌರ್ಯವನ್ನು ಮೆರೆದಿರುವುದು ಬೆಳಕಿಗೆ ಬಂತು.
.ರೈತ ರಾಮಯ್ಯ. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಾರು 2ಲಕ್ಷ ಬೆಲೆಬಾಳುವ ಜಾನುವಾರು ಕಳೆದುಕೊಂಡು ಕಂಗಾಲಾಗಿರುವ ಅವರು ಕೂಡಲೇ ಆರೋಪಿಗಳನ್ನ ಬಂಧಿಸಿ, ಸೂಕ್ತ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.
ಜಿಂಕೆ ಬೇಟೆಯಾಡಿದ ಆರೋಪಿಗಳ ಬಂಧನ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನೇಗತ್ತೂರು ಗ್ರಾಮದಲ್ಲಿ ಜಿಂಕೆ ಬೇಟೆಯಾಡಿದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಅಬ್ಬೂರಿನ ಮಧು, ಸಿಂಡೇನಹಳ್ಳಿ ಪ್ರದೀಪ್ ಬಂಧಿತ ಆರೋಪಿಗಳು. ಮತ್ತಿಬ್ಬರು ಆರೋಪಿಗಳಾದ ರಾಜು, ಪ್ರಸನ್ನ ಬಂಧನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಹನಗೋಡು ಹೋಬಳಿ ವ್ಯಾಪ್ತಿಯ ವನ್ಯಜೀವಿ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯಾಧಿಕಾರಿ ಹರ್ಷಕುಮಾರ್ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಯಾನಂದ್ ಅವರು ತಕ್ಷಣ ಕಾರ್ಯಾಚರಣೆ ನಡೆಸಿರು.
ದಾಳಿ ನಡೆಸಿರುವ ಅರಣ್ಯಾಧಿಕಾರಿಗಳು ಆರೋಪಿಗಳನ್ನು ಬಂಧಿಸಿ ಹೊಲದಲ್ಲಿ ಬಚ್ಚಿಟ್ಟಿದ್ದ ಮಾಂಸ ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೂರು ಕತ್ತಿ ಹಾಗೂ ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳಾದ ರತನ್ ಕುನಾರ್, ಗಣರಾಜ್ ಪಟಕಾರ್, ಸಿದ್ದರಾಜು, ಪ್ರಸನ್ನ ಕುಮಾರ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.
ಇದನ್ನೂ ಓದಿ : Cow Slaughter : ಗೋಹತ್ಯೆಗೆ ಶಿಕಾರಿಪುರ ಕೆಂಡ; ಬಂದ್ ಮಾಡಿ ಆಕ್ರೋಶ