Site icon Vistara News

ಹೊಸಪೇಟೆ | ಬೃಹತ್‌ ಗಣಪತಿ ಮೂರ್ತಿ ಸಹಿತ ಕ್ರೇನ್‌ ಪಲ್ಟಿ: ಅಡಿಗೆ ಸಿಲುಕಿ ಇಬ್ಬರು ಯುವಕರು ದಾರುಣ ಮೃತ್ಯು

hosapete crane

ವಿಜಯನಗರ: ಗಣಪತಿ ಮೂರ್ತಿ ವಿಸರ್ಜನೆಯ ವೇಳೆ ಬೃಹತ್‌ ಮೂರ್ತಿಯನ್ನು ನೀರಿಗೆ ಇಳಿಸುತ್ತಿದ್ದ ಕ್ರೇನ್‌ ಪಲ್ಟಿಯಾಗಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ.

ಹೊಸಪೇಟೆಯ ತುಂಗ ಭದ್ರಾ ಡ್ಯಾಂ ಕಾಲುವೆಯ ಬಳಿ ಶನಿವಾರ ರಾತ್ರಿ ೧.೩೦ರ ಹೊತ್ತಿಗೆ ಈ ದುರ್ಘಟನೆ ನಡೆದಿದೆ. ಮಗುಚಿಬಿದ್ದ ಕ್ರೇನ್‌ನ ಅಡಿ ಸಿಲುಕಿದ ಇಬ್ಬರು ಯುವಕರಲ್ಲಿ ಒಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ತುಂಗಭದ್ರಾ ಡ್ಯಾಂನ ಇವಿ ಕ್ಯಾಂಪ್‌ ನಿವಾಸಿಗಳಾದ ಅಶೋಕ್‌ (೧೮) ಮತ್ತು ಸಾಯಿ ನಿಖಿಲ್‌ (೧೮) ಮೃತಪಟ್ಟವರು.

೩೪ ಅಡಿ ಎತ್ತರದ ‌ ಹೊಸಪೇಟೆ ಗಣಪ
ಹೊಸಪೇಟೆಯಲ್ಲಿ ಕಳೆದ ಆಗಸ್ಟ್‌ ೩೧ರಂದು ಸುಮಾರು ೩೪ ಅಡಿ ಎತ್ತರದ ಬೃಹತ್‌ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಶನಿವಾರ ವಿಸರ್ಜನಾ ಮೆರವಣಿಗೆ ನಡೆದಿತ್ತು. ಅಂತಿಮವಾಗಿ ಟಿಬಿ ಡ್ಯಾಂನ ಕಾಲುವೆಯಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜಿಸಲು ಸಕಲ ಸಿದ್ಧತೆ ನಡೆದಿತ್ತು. ವಾಹನದಲ್ಲಿ ಅಲಂಕರಿಸಿ ತರಲಾಗಿದ್ದ ಗಣೇಶ ಮೂರ್ತಿಯನ್ನು ಕ್ರೇನ್‌ ಮೂಲಕ ಎತ್ತಿ ಕಾಲುವೆಗೆ ಇಳಿಸಬೇಕು ಎನ್ನುವಷ್ಟರಲ್ಲಿ ಕ್ರೇನೇ ಆಯತಪ್ಪಿ ಪಲ್ಟಿಯಾಗಿದೆ. ಆಗ ಈ ಇಬ್ಬರು ಯುವಕರು ಅದರ ಅಡಿಗೆ ಸಿಲುಕಿದ್ದಾರೆ.

ಗಣಪತಿ ಶೋಭಾ ಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಈ ಇಬ್ಬರು ಯುವಕರು ಕೂಡಾ ವಿಸರ್ಜನೆಯ ಅಂತಿಮ ಹಂತವನ್ನು ನೋಡುವ ಕುತೂಹಲದಿಂದ ಬಂದಿದ್ದರು. ಇವರು ಉತ್ಸವ ಸಮಿತಿಗೆ ಸೇರಿದವರೇನೂ ಅಲ್ಲ. ಸಾಮಾನ್ಯ ನಾಗರಿಕರು ಅಷ್ಟೆ.

ಇದು ಹೊಸಪೇಟೆಯ ಹೊರವಲಯದಲ್ಲಿರುವ ಟಿಬಿ ಡ್ಯಾಂನ ಕಾಲುವೆ ಬಳಿ ನಡೆದ ದುರಂತವಾಗಿದ್ದು, ರೈಲು ನಿಲ್ದಾಣದ ಸಮೀಪ ಬರುತ್ತದೆ. ಕ್ರೇನ್‌ ಪಲ್ಟಿಯಾಗಿ ಇಬ್ಬರು ಅಡಿಯಲ್ಲಿ ಸಿಲುಕಿದ ವಿಷಯ ತಿಳಿಯುತ್ತಲೇ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು. ಆದರೆ ಯುವಕರು ಕ್ರೇನ್‌ನ ಅಡಿಯಲ್ಲಿ ಸಿಕ್ಕಿದ್ದರಿಂದ ಹೊರತೆಗೆಯುವುದು ಸಾಧ್ಯವಿರಲಿಲ್ಲ. ಅದರಲ್ಲೂ ಇಬ್ಬರೂ ತೀವ್ರವಾಗಿ ನರಳುತ್ತಿದ್ದರು.

ಕೂಡಲೇ ಬೇರೆ ಎರಡು ಕ್ರೇನ್‌ಗಳನ್ನು ತರಿಸಿಕೊಂಡು ಬಿದ್ದ ಕ್ರೇನನ್ನು ಮೇಲೆ ಎತ್ತಿ ಇಬ್ಬರನ್ನೂ ಹೊರತೆಗೆಯಲಾಗಿತ್ತು. ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಅವರನ್ನು ಹೊರಗೆ ತರಲಾಯಿತು. ಆದರೆ, ಅಷ್ಟು ಹೊತ್ತಿಗೆ ಅಶೋಕ್‌ ಪ್ರಾಣ ಹೋಗಿತ್ತು. ಸಾಯಿನಿಖಿಲ್‌ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಒಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಂತಿಮವಾಗಿ ನಿಖಿಲ್‌ ಕೂಡಾ ಪ್ರಾಣ ಕಳೆದುಕೊಂಡಿದ್ದಾರೆ.

ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ , ಪಿಐಗಳಾದ ಹುಲುಗಪ್ಪ, ಶ್ರೀನಿವಾಸ್ ಮೇಟಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದರು. ಮಧ್ಯರಾತ್ರಿಯೇ ಟಿಬಿ ಡ್ಯಾಂನ ಇವಿ ಕ್ಯಾಂಪಸ್‌ ನಿವಾಸಿಗಳು ಧಾವಿಸಿ ಬಂದರು. ಮನೆಯವರ ಸಂಕಟ, ಗೋಳಾಟಗಳು ಕಲ್ಲೆದೆಯನ್ನೂ ಕರಗಿಸುವಂತಿತ್ತು. ಇನ್ನೂ ಪಿಯುಸಿ ಓದುವ ಹಂತದಲ್ಲಿದ್ದ ಹುಡುಗರ ಸಾವು ಅವರನ್ನು ಕಂಗೆಡಿಸಿತ್ತು.

ಇದನ್ನೂ ಓದಿ | Ganesh Chaturthi | ವಿಸರ್ಜನೆ ಬದಲು ಠಾಣೆಯತ್ತ ಗಣೇಶ ಮೆರವಣಿಗೆ: ಡಿಜೆ ಸೀಜ್‌ಗೆ ಆಕ್ರೋಶ

Exit mobile version