Site icon Vistara News

Land Encroachment : ಎಚ್‌ಡಿಕೆ, ಡಿ.ಸಿ.ತಮ್ಮಣ್ಣ ಭೂಕಬಳಿಕೆ ಕೇಸ್‌: ಭೂಮಿ ವಾಪಸ್‌ ಪಡೆಯಲಾಗದ ಸಿಎಸ್‌ಗೆ ಕೋರ್ಟ್‌ ಸಮನ್ಸ್‌

Kumaraswamy Highcourt

#image_title

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಮತ್ತಿತರರ ವಿರುದ್ಧ ದಾಖಲಾಗಿರುವ ಭೂಕಬಳಿಕೆ ಪ್ರಕರಣಕ್ಕೆ (Land Encroachment) ಸಂಬಂಧಿಸಿ ಹೈಕೋರ್ಟ್‌ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಮನ್ಸ್‌ ನೀಡಿದೆ.

ಕಬಳಿಕೆಯಾದ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯುವಲ್ಲಿ ಸರ್ಕಾರ ಯಾಕೆ ವಿಫಲವಾಗಿದೆ ಎಂಬ ಬಗ್ಗೆ ಖುದ್ದು ಹಾಜರಿದ್ದು ವಿವರಣೆ ನೀಡುವಂತೆ ಈ ಇಬ್ಬರು ಅಧಿಕಾರಿಗಳಿಗೆ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್‌ ಹಿರೇಮಠ ಅವರು ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಪ್ರಮಾಣಪತ್ರ ಒಪ್ಪದ ನ್ಯಾಯಾಲಯ

ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಕಾರ್ಯದರ್ಶಿ ಸಲ್ಲಿಸಿದ ಪ್ರಮಾಣಪತ್ರವನ್ನು ಒಪ್ಪದ ನ್ಯಾಯಾಲಯ “ಭೂಕಬಳಿಕೆ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಗೆ ಲೋಕಾಯುಕ್ತ 2014ರಲ್ಲಿ ಆದೇಶ ನೀಡಿದೆ. ಆದರೆ, ಸರ್ಕಾರ ಯಾವುದೇ ಸಮರ್ಪಕ ಕ್ರಮ ಕೈಗೊಂಡಿಲ್ಲ’ ಎಂದು ಆಕ್ಷೇಪಿಸಿತು.

ಮುಂದಿನ ವಿಚಾರಣೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಎಂದು ಆದೇಶಿಸಿದ ವಿಚಾರಣೆಯನ್ನು ಮಾರ್ಚ್‌ 15ಕ್ಕೆ ಮುಂದೂಡಲಾಯಿತು.

ಏನಿದು ಪ್ರಕರಣ?

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳು ಸೇರಿ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ 14 ಎಕರೆಗೂ ಅಧಿಕ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿದ್ದಾರೆ ಎಂದು ಮಾಜಿ ಸಂಸದ ದಿವಂಗತ ಜಿ. ಮಾದೇಗೌಡರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಸಮಗ್ರ ತನಿಖೆ ನಡೆಸಬೇಕು ಎಂದು ಕಂದಾಯ ಇಲಾಖೆಗೆ ಲೋಕಾಯುಕ್ತರು 2014ರಲ್ಲಿ ಆದೇಶಿಸಿದ್ದರು. ಲೋಕಾಯುಕ್ತರ ಆದೇಶವನ್ನು ಹೈಕೋರ್ಟ್‌ ಕೂಡ ಎತ್ತಿಹಿಡಿದಿತ್ತು. ಆದರೆ, ಹೈಕೋರ್ಟ್ ಆದೇಶ ಪಾಲಿಸಿಲ್ಲ ಎಂದು ದೂರಿ ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಈಗ ನಡೆಯುತ್ತಿದೆ.

ಇದನ್ನೂ ಓದಿ : High court order : 81 ವರ್ಷದ ಹಲ್ಲೆ ಆರೋಪಿಗೆ ಒಂದು ವರ್ಷ ಅಂಗನವಾಡಿ ಸ್ವಯಂಸೇವಕನಾಗಿ ಕೆಲಸ ಮಾಡುವ ಶಿಕ್ಷೆ!

Exit mobile version