ಬೆಂಗಳೂರು: ತಮ್ಮ ಬಗ್ಗೆ ಆಗಾಗ್ಗೆ ಇಲ್ಲಸಲ್ಲದ ಮಾತನಾಡುತ್ತ ಇದ್ದರೆ ನಿಮ್ಮದೆಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (C.T. Ravi) ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ. ರವಿ, ವೈಚಾರಿಕವಾಗಿ ನನ್ನನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು, ಅವರ ನಾಯಕರನ್ನು ನೋಡಿ ಈ ಮಾತು ಹೇಳುತ್ತಿದ್ದಾರೆ. ನಾನು ಬಿಜೆಪಿಯ ಸಿ.ಟಿ. ರವಿಯೇ ಹೊರತು, ಪಪ್ಪು ಅಲ್ಲ. ವಾಜಪೇಯಿ ಇಲ್ಲ ಎಂದಿದ್ದರೆ ನಿಮ್ಮ ನಾಯಕ ಅಮೆರಿಕದ ಜೈಲಲ್ಲಿ ಇರಬೇಕಿತ್ತು ಎಂದರು.
ಬಿ. ಕೆ. ಹರಿಪ್ರಸಾದ್ ಏನು ಹೇಳಿದರೋ, ಅದೆಲ್ಲ ನಿಮ್ಮ ನಾಯಕನಿಗೆ ಅನ್ವಯ ಆಗುತ್ತದೆ. ನನ್ನ ಯೋಗ್ಯತೆ ನೋಡಿ ಚಿಕ್ಕಮಗಳೂರಿನ ಜನರು ಗೆಲ್ಲಿಸಿದ್ದಾರೆ. ಆದರೆ ಇವರ ಯೋಗ್ಯತೆಗೆ ಒಂದು ಗ್ರಾಮ ಪಂಚಾಯತಿ ಚುನಾವಣೆಯನ್ನೂ ಗೆಲ್ಲುವುದಕ್ಕೆ ಆಗಲಿಲ್ಲ. ನನ್ನನ್ನು ಚಿಕ್ಕಮಗಳೂರಿನ ಜನರು ನಾಲ್ಕು ಬಾರಿ ಗೆಲ್ಲಿಸಿದ್ಸಾರೆ. ನಾನು ಬೆಳಿಗ್ಗೆ ೫ ಗಂಟೆಗೆ ಎದ್ದು ಯೋಗ ಮಾಡುತ್ತೀನಿ. ಆದರೆ ನಿಮ್ಮ ರೀತಿ ನಾನು ರಾಜಕಾರಣ ಮಾಡಿಲ್ಲ.
ಜನ ನನಗೆ ಸಿದ್ದಾಂತ, ನಡವಳಿಕೆ, ಅಭಿವೃದ್ಧಿ ನೋಡಿ ವೋಟ್ ಹಾಕಿದ್ದಾರೆ. ನಾನು ಡ್ಯಾಷ್ ಡ್ಯಾಷ್ ಹಿಡಿದು ರಾಜಕಾರಣ ಮಾಡಿದವನಲ್ಲ. ನನ್ಮ ವಿರುದ್ದ ಸುಮ್ಮನೆ ಮಾತನಾಡಬೇಡಿ. ಮಾತನಾಡಿದರೆ ನಿಮ್ಮೆದ್ದೆಲ್ಲವನ್ನೂ ಬಿಚ್ಚಿಡಬೇಕಾಗತ್ತದೆ ಎಂದರು.
ಮೀಸಲಾತಿ ನೀಡಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕೆಗೆ ಉತ್ತರ ನೀಡಿದ ಸಿ.ಟಿ. ರವಿ, ನಾವು ಸಂವಿಧಾನ ಬದ್ದವಾಗಿ ಮೀಸಲಾತಿ ಕೊಡುವ ಕೆಲಸ ಮಾಡಿದ್ದೇವೆ. ಆದರೆ ಕಾಂಗ್ರೆಸ್‌ನವರಿಗೆ ಇದನ್ನು ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅವರು ಮೀಸಲಾತಿ ಹೆಸರಿನ ಮೂಲಕ ಬಿಜೆಪಿ ಸರ್ಕಾರ ಅಸ್ತಿರಗೊಳಿಸುವ ಕೆಲಸ ಮಾಡಿದರು.
ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಅನ್ಯಾಯ ಆಗದ ರೀತಿಯ, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದೇವೆ. ಕಾನೂನು ಬದ್ದವಾಗಿ ಮಾಡಿರುವ ಕ್ರಮದ ಬಗ್ಗೆ ವಿವರವನ್ನು ಆದಷ್ಟು ಬೇಗ ಕೊಡುತ್ತೇವೆ. ಆದರೆ ಡಿ.ಕೆ. ಶಿವಕುಮಾರ್ ಅವರಿಗೆ ಒಂದು ಮಾತು ಹೇಳುತ್ತೇನೆ. ದಿನಕ್ಕೊಂದು ವೇಷ ಹಾಕುವ ವ್ಯಕ್ತಿಯೂ ನಾವಲ್ಲ. ದಿನಕ್ಕೊಂದು ವೇಷ ಹಾಕುವ ಪಾರ್ಟಿಯೂ ನಮ್ಮದಲ್ಲ ಎಂದರು.
ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರದಲ್ಲಿ ಪ್ರತಿಕ್ರಿಯಿಸಿ, ರಾಮನ ಹೆಸರು ಇಟ್ಟುಕೊಂಡು ಇರುವ ನಗರವೇ ರಾಮನಗರ. ಇದನ್ನು ಪಕ್ಷಾತೀತವಾಗಿ ಸ್ವಾಗತಿಸಬೇಕು. ಅದನ್ನು ಯಾಕೆ ವಿವಾದ ಮಾಡಬೇಕು? ಅಲ್ಲಿ ಏನು ಮಾಡಬೇಕು ಎಂದು ಬಯಸುತ್ತೀರಿ? ನಮಗೆ ಅವಕಾಶ ಸಿಕ್ಕಿದೆ. ರಾಮನಗರದಲ್ಲಿ ತಾವೇ ರಾಮಮಂದಿರ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿ.ಟಿ. ರವಿ, ಕುಮಾರಸ್ವಾಮಿ ನಿಲುವು ಸ್ವಾಗತಿಸುತ್ತೇನೆ ಎಂದರು.
ಟಿಪ್ಪುವಿನಿಂದ ಕಾಂಗ್ರೆಸ್ ಪ್ರೇರಣೆ ಪಡೆಯುತ್ತದೆ ಎಂದ ಸಿ.ಟಿ. ರವಿ, ನಾವು ಮದಕರಿ ನಾಯಕ, ಒಡೆಯರ್ ಅವರಿಂದ ಪ್ರೇರಣೆ ಪಡೆಯುತ್ತೇವೆ. ಮೊಡಲಬಾಗಿಲು ಅಂಜೀನೇಯ ದೇವಸ್ಥಾನವನ್ನು ಮಸೀದಿಯಾಗಿ ಮಾಡಿದ್ದಾರೆ, ಇದನ್ನು ಕಾಂಗ್ರೆಸ್‌ನವರು ಹೇಳುವುದಿಲ್ಲ ಎಂದರು.
ಇದನ್ನೂ ಓದಿ | ಬಿ.ಕೆ. ಹರಿಪ್ರಸಾದ್ ಹಫ್ತಾ ವಸೂಲಿ ಗ್ಯಾಂಗ್ ಲೀಡರ್, ಕೊತ್ವಾಲ್ ರಾಮಚಂದ್ರನ ಶಿಷ್ಯ: ಸಿ.ಟಿ. ರವಿ ವಾಗ್ದಾಳಿ