ಬೆಂಗಳೂರು: ಮತಾಂಧತೆ ಕಾಂಗ್ರೆಸ್ ಪಕ್ಷವನ್ನು ಆವರಿಸಿಕೊಂಡಿದೆ. ಮತಬ್ಯಾಂಕಿಗಾಗಿ ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಶಾದಿ ಭಾಗ್ಯದಂಥ ಸಮಾಜ ಒಡೆಯುವ ಯೋಜನೆಯನ್ನು ನರೇಂದ್ರ ಮೋದಿ ಅವರಾಗಲೀ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಾಗಲೀ ಕೊಟ್ಟದ್ದಲ್ಲ. ಅದನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಬುಧವಾರ ತಿಳಿಸಿದರು.
ಬಿಜೆಪಿ ಸಂಸ್ಥಾಪನಾ ದಿನದ ಕಾರ್ಯಕ್ರಮದ ನಂತರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ವಿಪಕ್ಷಗಳಿಗೆ ಟೀಕೆ ಮಾಡಲೇಬೇಕು ಎಂಬ ಧೋರಣೆ ಇದೆ. ಮೆಚ್ಚುವ ಔದಾರ್ಯ ಅವರಲ್ಲಿಲ್ಲ. ಸಮವಸ್ತ್ರ ವಿರುದ್ಧ ಹಿಜಾಬ್ ವಿಷಯವನ್ನು ಎತ್ತಿಕೊಂಡು ಬಂದವರಿಗೆ ಅವರು ಪಾಠ ಹೇಳಬೇಕಿತ್ತು. ದೇಶದ ಶಾಲಾ ಕಾಲೇಜುಗಳಲ್ಲಿ 1983ರಿಂದ ಸಮವಸ್ತ್ರವನ್ನು ಕಡ್ಡಾಯಗೊಳಿಸಲಾಗಿದೆ. ಇದನ್ನು ಬಿಜೆಪಿ ಕಡ್ಡಾಯಗೊಳಿಸಿದ್ದಲ್ಲ. ಹಿಜಾಬ್ ವರ್ಸಸ್ ಸಮವಸ್ತ್ರ ವಿಷಯ ಬಂದಾಗ ಸಮವಸ್ತ್ರ ಪರ ನಿಲ್ಲುತ್ತಾರೋ ಹಿಜಾಬ್ ಪರ ನಿಲ್ಲುತ್ತಾರೋ ಎಂದು ಅವರು ಮೊದಲು ಸ್ಪಷ್ಟಪಡಿಸಲಿ. ನಾವಂತೂ ಯುನಿಫಾರ್ಮ್ ಪರ ನಿಂತಿದ್ದೇವೆ ಎಂದರು.
ಹೆಚ್ಚಿನ ಓದು: ಮುಸ್ಲಿಮರು ಕತ್ತರಿಸಿದ ಮಾಂಸವನ್ನೇ ನಾವು ಸೇವಿಸೋದು: ಸಿದ್ದರಾಮಯ್ಯ
ಬಿಜೆಪಿ ಕೋಮುವಾದಕ್ಕೆ ಕುಮ್ಮಕ್ಕು ನೀಡಿದೆ ಎಂಬ ಸಿದ್ದರಾಮಯ್ಯ ಅವರ ಆರೋಪ ಒಪ್ಪಲು ಆಗುವುದಿಲ್ಲ. ಕೋಮು ಭಾವನೆಗೆ ಕುಮ್ಮಕ್ಕು ನೀಡುವ ಅವಶ್ಯಕತೆ ನಮಗೆ ಇಲ್ಲ. ಹಿಜಾಬ್ ಸಂಘರ್ಷಕ್ಕೆ ಕಾನೂನಿನ ನೆರವು ಒದಗಿಸಿದವರು ಯಾರು? ಹಿಜಾಬ್ ಪರ ಎಲ್ಲ ವಕೀಲರು ಕಾಂಗ್ರೆಸ್‍ನವರೇ ಆಗಿದ್ದರು. ನಾವು ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್ ನಿಲುವೇನು?
ಧ್ವನಿವರ್ಧಕದಲ್ಲಿ ಪ್ರಸಾರ ಎಷ್ಟು ಡೆಸಿಬಲ್ ಇರಬೇಕು ಎಂಬುದನ್ನು ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ನ್ಯಾಯಾಲಯಗಳ ತೀರ್ಪುಗಳೂ ಬಂದಿವೆ. ನಮ್ಮ ಪಕ್ಷ ನ್ಯಾಯಾಲಯದ ತೀರ್ಪಿನ ಪರ ಮತ್ತು ಇಲಾಖಾ ಸುತ್ತೋಲೆ ಪರವಾಗಿದೆ. ಕಾಂಗ್ರೆಸ್‍ನವರು ತಾವು ನ್ಯಾಯಾಲಯದ ತೀರ್ಪಿನ ಪರ ಇದ್ದಾರೆಯೇ ಅಥವಾ ವಿರುದ್ಧ ಇದ್ದಾರೆಯೇ ಎಂಬುದನ್ನು ತಿಳಿಸಬೇಕು. ಮತದ ಆಧಾರದಲ್ಲಿ ನ್ಯಾಯಾಲಯದ ತೀರ್ಪನ್ನು ವಿಭಜಿಸಬೇಕೇ ಎಂಬ ಕುರಿತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ತಮ್ಮ ನಿಲುವನ್ನು ತಿಳಿಸಲಿ ಎಂದು ಸವಾಲೆಸೆದರು. ಆಗ ಮತಾಂಧತೆಯ ಭೂತ ಯಾರನ್ನು ಹೊಕ್ಕಿದೆ ಎಂದು ಸ್ಪಷ್ಟಗೊಳ್ಳುತ್ತದೆ ಎಂದು ತಿಳಿಸಿದರು.
ಚಂದ್ರು ಹತ್ಯೆಗೆ ಖಂಡನೆ
ಕನ್ನಡ ಮಾತನಾಡಿದ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಚಂದ್ರು ಹತ್ಯೆ ಆಗಿದೆ. ಇದನ್ನು ಖಂಡಿಸುತ್ತೇವೆ. ನಾವು ಯಾವ ದೇಶದಲ್ಲಿದ್ದೇವೆ? ಎಂದು ಸಿ.ಟಿ. ರವಿ ಪ್ರಶ್ನಿಸಿದರು. ಇದರ ಹಿಂದೆ ಪ್ರಚೋದನಕಾರಿ ಅಂಶವಿದೆ. ಇವತ್ತು ಗೋರಿಪಾಳ್ಯದಲ್ಲಿ ಆಗಿರುವುದು ನಾಳೆ ಬೇರೆ ಕಡೆ ನಡೆಯಬಹುದು. ನಿನ್ನೆ ಕಾಶ್ಮೀರದಲ್ಲಿ ನಡೆದಿದ್ದು ದೇಶದ ಇತರ ಭಾಗದಲ್ಲಿ ನಡೆಯಬಹುದು. ಇದು ಅತ್ಯಂತ ಖಂಡನೀಯ. ಇದರ ಬಗ್ಗೆ ಬುದ್ಧಿಜೀವಿಗಳು ಮಾತ್ರವಲ್ಲದೆ ಸಿದ್ದರಾಮಯ್ಯ ಮೌನ ವಹಿಸಿದ್ದಾರೆ. ಸತ್ತವರು ಹಿಂದುಗಳಾದರೆ ಸಿದ್ದರಾಮಯ್ಯ ಸಂತಾಪ ಸೂಚಿಸುವುದಿಲ್ಲ. ಅವರ ಆಷಾಡಭೂತಿತನ ಖಂಡನಾರ್ಹ ಎಂದರು.