Site icon Vistara News

CT Ravi : ಎಚ್‌ಡಿಕೆ ಜತೆ ಸಿದ್ದರಾಮಯ್ಯ ಕೂಡಾ ದತ್ತಪೀಠಕ್ಕೆ ಬರಲಿ ಎಂದ ಸಿ.ಟಿ ರವಿ

Siddaramaiah CT Ravi Datta Mala

ಚಿಕ್ಕಮಗಳೂರು: ಈ ಬಾರಿ ದತ್ತಜಯಂತಿ (Datta Jayanti) ಸಂದರ್ಭದಲ್ಲಿ ದತ್ತಮಾಲೆ (Datta Mala) ಧರಿಸುವುದಾಗಿ ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಪ್ರಸ್ತಾಪ ಮಾಡಿದ್ದನ್ನು ಬಿಜೆಪಿ ನಾಯಕ, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಅವರು, ಕುಮಾರಸ್ವಾಮಿ ಜೊತೆ ಸಿದ್ದರಾಮಯ್ಯನವರು ದತ್ತಪೀಠಕ್ಕೆ ಬರಲಿ ಎಂದು ಆಹ್ವಾನ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು, ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆ ಸಿಎಂ ಸಿದ್ದರಾಮಯ್ಯನವರಿಗೂ ಮಾದರಿ. ಅವರು ಕೂಡಾ ಬರಲಿ ಎಂದಿದ್ದಾರೆ.

ʻʻಹಿಂದು ಎಂದು ಹೇಳಿಕೊಳ್ಳಲು ಗರ್ವ ಪಡಬೇಕು, ಸಮಾಜ ಇದನ್ನೇ ಕೇಳೋದು. ನಾನು ಹಿಂದೂ ಅಲ್ವಾ, ನನ್ನ ಹೆಸರಲ್ಲೇ ಸಿದ್ರಾಮ ಇದ್ದಾನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆʼʼ ಎಂದು ಹೇಳಿದ ಸಿ.ಟಿ. ರವಿ ಅವರು, ʻʻನೀವು ಮಾಲೆ ಹಾಕಿಕೊಂಡು ಬಂದರೆ ನಮ್ಮ ಸತ್ಯದ ಹೋರಾಟಕ್ಕೆ ಬಲ ಬರಲಿದೆʼʼ ಎಂದಿದ್ದಾರೆ.

ʻʻಸಿದ್ದರಾಮಯ್ಯ ಅವರು ದತ್ತ ಮಾಲೆ ಹಾಕಿದ್ದರೆ ಜಮೀರ್ ಖಾನ್‌ ಅವರು ಮಾಲೆ ಹಾಕೇ ಹಾಕುತ್ತಾರೆ. ಆಗ ಐದು ದಶಕದ ಹೋರಾಟಕ್ಕೆ ಬಲ ಬರುತ್ತದೆ. ಸತ್ಯವನ್ನು ಎತ್ತಿ ಹಿಡಿದಂತಾಗುತ್ತದೆʼʼ ಎಂದು ಹೇಳಿದರು ಸಿ.ಟಿ. ರವಿ.

ʻʻನಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಲು ಯಾರಿಗೆ ಏಕೆ ಹೆದರಬೇಕು? ಯಾರೂ ಎಲೆಕ್ಷನ್ ಟೈಂ ಹಿಂದೂಗಳಾಗಬಾರದು, ಜೀವನ ಪರ್ಯಂತ ಹಿಂದೂಗಳಾಬೇಕು. ಹಿಂದುತ್ವದ ವಿಚಾರ ಬಂದಾಗ ಹಿಂದೆ ನೋಡಲೇಬಾರದು, ಮುಂದಕ್ಕೆ ನೋಡಬೇಕು. ಹೀಗಾಗಿ ಸಿದ್ದರಾಮಯ್ಯನವರು ಬರಲಿ ಎಂದು ಮನವಿ ಮಾಡುತ್ತೇನೆʼʼ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಎಚ್.ಡಿ ಕುಮಾರಸ್ವಾಮಿ ಹೇಳಿದ್ದೇನು?

ಚಿಕ್ಕಮಗಳೂರಿನಲ್ಲಿ ಜೆಡಿಎಸ್‌ ಶಾಸಕರು ಮತ್ತು ನಾಯಕರ ಸಭೆ ಕರೆದಿದ್ದ ಎಚ್.‌ಡಿ ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ, ತಾನು ದತ್ತ ಮಾಲೆ ಧರಿಸಲು ಸಿದ್ಧ ಎಂದು ಘೋಷಿಸಿದ್ದರು.

ಜಮೀರ್‌ ಅಹಮದ್‌ ಖಾನ್‌ ಅವರು ಮುಸ್ಲಿಂ ನಾಯಕರನ್ನು ಓಲೈಸಲು ಸ್ಪೀಕರ್‌ ಹುದ್ದೆ ಕುರಿತಂತೆ ಆಡಿದ ಮಾತಿನ ಬಗ್ಗೆ ಪ್ರತಿಕ್ರಿಯಿಸುತ್ತಾ, ʻʻ ಅವರಿಗೆ ಅವರ ಧರ್ಮದ ಬಗ್ಗೆ ಅಷ್ಟು ಅಭಿಮಾನ ಇದೆ. ನಮ್ಮ ಧರ್ಮದ ಧರ್ಮಾಬೀಮಾನಕ್ಕೆ ನಾನು ಭಯ ಪಡ್ತೀನಾ… ಹಾಕೋ ಸಮಯ ಬಂದ್ರೆ ದತ್ತ ಮಾಲೆಯನ್ನೂ ಹಾಕ್ತೀನಿʼʼ ಎಂದು ಚಿಕ್ಕಮಗಳೂರಿನ ಹನಿ ಡ್ಯೂ ರೆಸಾರ್ಟ್ ನಲ್ಲಿ ಕುಮಾರಸ್ವಾಮಿ ಹೇಳಿದ್ದರು.

ʻʻದತ್ತಮಾಲೆ ಏಕೆ ಹಾಕಬಾರದು…? ಅದು ದೇವರ ಕಾರ್ಯಕ್ರಮ, ಹಾಕೋದು ಬಂದ್ರೆ ಹಾಕ್ತೀನಿ. ಕಾನೂನು ಬಾಹಿರವಾಗಿ ಅಲ್ಲ… ಕಾನೂನುಬಾಹಿರವಾಗಿ ಯಾವುದನ್ನೂ ಮಾಡಲ್ಲ… ನಮ್ಮ ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆʼʼ ಎಂದರು.

ʻʻಜಾತ್ಯತೀತತೆ ಅಂದ್ರೆ ಏನು…? ಅಲ್ಲೆಲ್ಲೋ ಹೋಗಿ ನಿಮ್ಮ ಮಂತ್ರಿ ಮಾತನಾಡಿದ್ದಾರಲ್ಲ. ನಮ್ಮ ಸಮಾಜದ ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈಮುಗೀಬೇಕು. ಇದು ಜಾತ್ಯತೀತ ಅಲ್ವಾ…? ಇದು ಜಾತ್ಯತೀತತೇನಾ…? ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸಿಗರಿಗೆ ಯಾವ ಯೋಗ್ಯತೆ ಇದೆʼʼ ಎಂದು ಕೇಳಿದ್ದರು.

Exit mobile version