Site icon Vistara News

CT Ravi: ಮಾಂಸ ತಿಂದಿದ್ದು ನಿಜವಾದ್ರೂ ದೇಗುಲದ ಒಳಗೆ ಹೋಗಿಲ್ಲ, ಬೇರೆಯವರಂತೆ ಏನಿವಾಗ ಅನ್ನಲ್ಲ: ಸಿ.ಟಿ. ರವಿ; ಸಿದ್ದರಾಮಯ್ಯ ಹೇಳಿದ್ದೇನು?

ct ravi clarification about meat meal and says he didnt go inside temple what is siddaramaiah saying

ಮಂಡ್ಯ/ಬಾಗಲಕೋಟೆ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮಾಂಸದ ಊಟ ಸೇವಿಸಿ (Meat meals) ದೇವರ ದರ್ಶನ ಮಾಡಿರುವ ತಮ್ಮ ಬಗ್ಗೆ ಕೇಳಿಬಂದಿರುವ ಆರೋಪವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಸ್ಪಷ್ಟೀಕರಣ ನೀಡಿದ್ದು, ಮಾಂಸ ತಿಂದಿದ್ದು ನಿಜ. ಆದರೆ, ನಾನು ದೇವಸ್ಥಾನದ ಒಳಗೆ ಪ್ರವೇಶ ಮಾಡಿಲ್ಲ. ಬೇರೆಯವರ ಹಾಗೆ ನಾನು ದಾರ್ಷ್ಟ್ಯದ ಮಾತುಗಳನ್ನು ಆಡುವುದಿಲ್ಲ ಎಂದು ಹೇಳಿದರು.

ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮಾಂಸ ತಿನ್ನುವ ಕುಟುಂಬದಲ್ಲಿ ಹುಟ್ಟಿದ್ದೇನೆ. ಅಂದು ಮಾಂಸ‌ ತಿಂದಿದ್ದು ನಿಜವಾದರೂ ನಾನು ದೇವಸ್ಥಾನದ ಒಳಗೆ ಪ್ರವೇಶ ಮಾಡಿಲ್ಲ. ಅಂದು ದೇವಾಲಯದ ಹೊರಗೆ ನಿಂತು ಪ್ರಾರ್ಥನೆ ಮಾಡಿ ಬಂದಿದ್ದೇನೆ. ವಿವಾದ ಮಾಡಬೇಕಂತಲೇ ಇರುವರಿಗೆ ಏನೂ ಮಾಡಲಾಗುವುದಿಲ್ಲ. ಬೇರೆಯವರ ಹಾಗೆ ನಾನು ದಾರ್ಷ್ಟ್ಯ ಮಾಡವುದಿಲ್ಲ. ಮಾಂಸ ತಿಂದು ಹೋದರೆ ಏನಿವಾಗ ಎಂದೆಲ್ಲ ಕೇಳುವುದಿಲ್ಲ. ನಮ್ಮದೇನಿದ್ದರೂ ವಿಧೇಯತೆ ಎಂದು ಹೇಳಿದರು.

ಮಾಂಸ ತಿಂದು ನಾಗಬನಕ್ಕೆ ಹೋಗಬಾರದು ಎಂಬ ವಿಷಯ ನನಗೆ ಗೊತ್ತಿದೆ. ನಾನು ನಾಗಬನದೊಳಕ್ಕೆ ಹೋಗಲೇ ಇಲ್ಲ. ಯಾರೋ ಬೇಕೆಂದೇ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ.

ಇದನ್ನೂ ಓದಿ: Sindhuri Vs Roopa : ಆಯಮ್ಮ ಕ್ಯಾನ್ಸರ್‌ ಇದ್ದ ಹಾಗೆ, ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ತಾಳೆ: ರೂಪಾ ಮಾತಿನ ಆಡಿಯೊ ವೈರಲ್

ಏನಿದು ಘಟನೆ?

ಫೆ.19ರ ಭಾನುವಾರದಂದು ಸಿ.ಟಿ. ರವಿ ಅವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದರು. ಕಾರವಾರದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಅಲ್ಲಿಂದ ಭಟ್ಕಳಕ್ಕೆ ತೆರಳಿದ್ದರು. ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನೀಲ್ ನಾಯ್ಕ ಮನೆಯಲ್ಲಿ ಬಾಡೂಟವನ್ನು ಸೇವನೆ ಮಾಡಿದ್ದರು.

ಭಟ್ಕಳದಲ್ಲಿ ಮಾಂಸ ತಿಂದಿದ್ದ ಬಗ್ಗೆ ಸಿ.ಟಿ. ರವಿ ನೀಡಿರುವ ಹೇಳಿಕೆಯ ವಿಡಿಯೊ ಇಲ್ಲಿದೆ

ಬಾಡೂಟ ಸವಿದ ಸಿ.ಟಿ. ರವಿ ಅವರು ಅಲ್ಲಿಂದ ಭಟ್ಕಳ ನಗರದ ಹಳೇ ಬಸ್‌ ನಿಲ್ದಾಣದ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭಟ್ಕಳ ಶಾಸಕ ಸುನಿಲ್ ನಾಯ್ಕ ಹಾಗೂ ಕಮಿಟಿ ಸದಸ್ಯರು ಈ ವೇಳೆ ಇವರ ಜತೆಗಿದ್ದರು. ಅಲ್ಲದೆ, ದೇವಸ್ಥಾನದ ಆವರಣದಲ್ಲೇ ಶಾಸಕ ಸುನೀಲ್ ನಾಯ್ಕ ಹಾಗೂ ಕಮಿಟಿ ಸದಸ್ಯರಿಂದ ಸನ್ಮಾನವನ್ನೂ ಸ್ವೀಕರಿಸಿದ್ದರು. ಇದರ ವಿಡಿಯೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸಿ.ಟಿ. ರವಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಭೂತದ ಬಾಯಲ್ಲಿ ಭಗವದ್ಗೀತೆ- ಸಿದ್ದರಾಮಯ್ಯ

ದೇವಸ್ಥಾನಕ್ಕೆ ಮಾಂಸ ತಿಂದು ಹೋದ ವಿಷಯವನ್ನು ಇಟ್ಟುಕೊಂಡು ಹೋದ ಕಡೆ, ಬಂದ ಕಡೆಗಳಲ್ಲಿ ಮಾತನಾಡುತ್ತಿದ್ದ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಅವರು ಸುಳ್ಳು ಹೇಳುತ್ತಾರೆಂದು ಜನರಿಗೆ ಗೊತ್ತಾಗಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಅನ್ನೋದು ಸಹ ಜನರಿಗೆ ತಿಳಿದಿದೆ ಎಂದು ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಪ್ರತಿಕ್ರಿಯೆ ನೀಡಿದರು.

ದೇವಸ್ಥಾನಕ್ಕೆ ಹೋಗುವುದು, ಹೋಗದೇ ಇರುವುದು, ಮಾಂಸ ತಿನ್ನುವುದು, ತಿನ್ನದೆ ಇರುವುದೆಲ್ಲ ದೊಡ್ಡ ಸಂಗತಿಗಳೇ ಅಲ್ಲ. ಅವುಗಳು ದೊಡ್ಡ ವಿವಾದಗಳೇ ಅಲ್ಲ. ಇಲ್ಲಿ ಬಹುಮುಖ್ಯವಾಗಿ ಚರ್ಚೆಯಾಗಬೇಕಿರುವುದು ಜನರ ಸಮಸ್ಯೆಗಳಾಗಿವೆ. ಈ ನಾಡಿನ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು. ಈಗ ಬಿಜೆಪಿಯವರ ಸರ್ಕಾರವಿದ್ದು, ನಾಲ್ಕು ವರ್ಷದಲ್ಲಿ ಏನೇನು ಮಾಡಿದ್ದೇವೆ ಎಂಬುದನ್ನು ಹೇಳಬೇಕು. ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸಿದ್ದೇವೆ ಎಂಬುದನ್ನು ಹೇಳಬೇಕು. ಅದನ್ನ ಬಿಟ್ಟು ನಾಮ ಹಾಕೊಳ್ಳೋದು, ದೇವಸ್ಥಾನಕ್ಕೆ ಹೋಗೋದು, ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡೋದು, ಅಬ್ಬಕ್ಕನ ಬಗ್ಗೆ ಮಾತನಾಡೋದು, ಗಾಂಧೀಜಿ, ಗೋಡ್ಸೆ ಬಗ್ಗೆ ಮಾತನಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ಇವರು ಮಾಡಿದ್ದನ್ನು ಕಾಂಗ್ರೆಸ್‌ ಮೇಲೆ ಹೇಳುತ್ತಾರೆ- ವಿಜಯಾನಂದ ಕಾಶಪ್ಪನವರ

ಈ ಹಿಂದೆ ಸಿದ್ದರಾಮಯ್ಯ ಅವರು ಮಾಂಸ ತಿದ್ದು ದೇವಸ್ಥಾನಕ್ಕೆ ಹೋಗಿದ್ದಾಗ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡಿದರು. ನಮ್ಮ ಕಡೆ ಒಂದು ಶಾಸ್ತ್ರ ಇದೆ. ಭೂತದ ಬಾಯಲ್ಲಿ ಭಗವದ್ಗೀತೆ ಎಂದು ಹೇಳುತ್ತಾರೆ. ಬಿಜೆಪಿಯವರು ಎಲ್ಲವನ್ನೂ ಮಾಡುತ್ತಾರೆ. ಆರೋಪ ಮಾಡೋದು ಮಾತ್ರ ಕಾಂಗ್ರೆಸ್‌ ನಾಯಕರ ಮೇಲಾಗಿದೆ. ಈಗ ಇವರು ಮಾಡಿದ್ದೇನು? ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹುನಗುಂದದಲ್ಲಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Sindhuri Vs Roopa: ರೋಹಿಣಿ ಸಿಂಧೂರಿ- ಸಾ.ರಾ. ಮಹೇಶ್‌ ಕದನದಲ್ಲಿ ಪೋಲಾಯಿತು ಕೋಟ್ಯಂತರ ರೂ.!

ಇನ್ನು ಸಚಿವ ಅಶ್ವತ್ಥನಾರಾಯಣ ಅವರ ಬಗ್ಗೆ ಆಕ್ರೋಶ ಹೊರಹಾಕಿದ ವಿಜಯಾನಂದ ಕಾಶಪ್ಪನವರ, ಅವರೊಬ್ಬರು ಮಂತ್ರಿಯಂತೆ. ಸಲ್ಪವಾದರೂ ಜವಾಬ್ದಾರಿ ಇದೆಯಾ? ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನನಂತೆ ಹತ್ಯೆ ಮಾಡಿ ಎಂದು ಹೇಳುತಾರೆ. ಇವರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ. ಸುಮ್ಮನೆ ಬೇಜವಾಬ್ದಾರಿ ಮಾತುಗಳನ್ನು ಆಡುತ್ತಾರೆ. ಕಾರಣ, ಇವರಿಗೆ ಈಗ ಸೋಲುವ ಭೀತಿ ಎದುರಾಗಿದೆ. ಸಿ.ಟಿ. ರವಿ ಈ ಚುನಾವಣೆಯಲ್ಲಿ ಖಂಡಿತವಾಗಿಯೂ ಸೋಲುತ್ತಾರೆ ಎಂದು ಹೇಳಿದರು.

Exit mobile version