Site icon Vistara News

CT Ravi : ನಿಂದನೆ ಯಾರು ಮಾಡಿದ್ರೂ ತಪ್ಪೇ; ಸಿದ್ದರಾಮಯ್ಯ ಬೆಂಬಲಿಸುತ್ತಲೇ ತಿವಿದ ಸಿ.ಟಿ ರವಿ

CM Siddaramaiah CT Ravi

ಚಿಕ್ಕಮಗಳೂರು: ಏಕವಚನ ಪ್ರಯೋಗ (Abusing in Singular) ಯಾರು ಮಾಡಿದರೂ ತಪ್ಪೇ? ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ (CM Siddaramaiah) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಏಕವಚನದಲ್ಲಿ ನಿಂದಿಸಿದ್ದರು. ಅದನ್ನೂ ಖಂಡಿಸಿದ್ದೇನೆ. ಈಗ ಸಂಸದ ಅನಂತ ಕುಮಾರ್‌ ಅವರು ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದನ್ನೂ ನಾನು ವಿರೋಧಿಸುತ್ತೇನೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ (BJP Leader CT Ravi) ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಯಾರೇ ಆದರೂ ಏಕವಚನದಲ್ಲಿ ಮಾತನಾಡೋದು, ಅಗೌರವ ತರೋದನ್ನ ನಾವು ಒಪ್ಪುವುದಿಲ್ಲ ಎಂದರು.

ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ಕಿಡಿ ಕಾರಿದ ಸಿ.ಟಿ. ರವಿ ಅವರು, ಹಿರಿಯರು ಮತ್ತು ಸ್ಥಾನಕ್ಕೆ ಕೊಡಬೇಕಾದ ಗೌರವ ಕೊಡಲೇಬೇಕು. ಹೆಗಡೆ ಅವರ ಕಾರ್ಯಶೈಲಿ ಭಿನ್ನವಿದೆ, ಹಾಗಂತ ಮತ್ತೊಬ್ಬರನ್ನು ಹರ್ಟ್ ಮಾಡಬಾರದು. ಅವರ ಹೇಳಿಕೆಯನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ ಎಂದರು. ʻʻರಾಮ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವನು, ಅವರು ಏಕವಚನದಲ್ಲಿ ಮಾತನಾಡಿರುವುದು ಒಪ್ಪುವುದಿಲ್ಲʼʼ ಎಂದು ಹೇಳಿದರು ಸಿ.ಟಿ ರವಿ.

ಇದೇ ವೇಳೆ ಸಿದ್ದರಾಮಯ್ಯ ಅವರು ಕೂಡಾ ತಪ್ಪು ಮಾಡುತ್ತಾರೆ. ಮಾತನಾಡುವ ಭರದಲ್ಲಿ ಸಚಿವ ಶಿವರಾಜ್ ತಂಗಡಗಿಯವರು ನಾಯಿಗೆ ಹೋಲಿಸಿರುವುದು ಕೂಡಾ ತಪ್ಪೇ ಎಂದು ಸಿ.ಟಿ ರವಿ ವಿವರಿಸಿದರು.

ʻʻಅವ್ನು ಹೋಗಿದ್ನಾ ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ಅಂತ ಪ್ರಧಾನಿಯನ್ನು ಸಿದ್ದರಾಮಯ್ಯ ಕೇಳಿದ್ದಾರೆ. ಹಿರಿಯರಾಗಿ, ಹೇಳುವಂತವರಾಗಿ ಪ್ರಧಾನಿಗೆ ಏಕವಚನದಲ್ಲಿ ಮಾತನಾಡೋದು ನೀವೆಷ್ಟು ಸರಿ? ಹಿರಿಯರು ದೊಡ್ಡತನದಲ್ಲಿ ನಡೆದುಕೊಳ್ಳಬೇಕು, ಆಗ ಉಳಿದವರಿಗೆ ಮಾದರಿಯಾಗುತ್ತದೆʼʼ ಎಂದು ಸಿ.ಟಿ ರವಿ ಅವರು ಸಿದ್ದರಾಮಯ್ಯ ಅವರನ್ನು ತಿವಿದರು.

ಘೋರಿ, ಖಿಲ್ಜಿ ಮಾನಸಿಕತೆಯಿಂದ ಹೊರಗೆ ಬನ್ನಿ ಎಂದ ಸಿ.ಟಿ. ರವಿ

ಇದೇ ವೇಳೆ ಭಾರತೀಯ ಮುಸ್ಲಿಮರು ಘಜನಿ, ಖಿಲ್ಜಿ, ಘೋರಿ ಮಹಮ್ಮದ್‌ ಮಾನಸಿಕತೆಯಿಂದ ಹೊರಗೆ ಬರಬೇಕು ಎಂದು ಮನವಿ ಮಾಡಿದ್ದಾರೆ. ಮುಸ್ಲಿಂ ದಾಳಿಕೋರರು, ಟಿಪ್ಪು ಕಾಲದಲ್ಲಿ 42 ಸಾವಿರ ದೇಗುಲ ಧ್ವಂಸ ಮಾಡಲಾಗಿದೆ. ಭಾರತೀಯ ಮುಸಲ್ಮಾನರು ಆ ದಾಳಿಕೋರರ ಜೊತೆ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳುವುದಿಲ್ಲ, ಕಂಡುಕೊಳ್ಳಬಾರದು. ಮುಸ್ಲಿಮರು ಭಾರತೀಯ ಸನಾತನ ಪರಂಪರೆಗೆ ವಿಶ್ವಾಸವಿಟ್ಟು ಭಾರತದಲ್ಲಿ ಉಳಿದುಕೊಂಡಿದ್ದಾರೆ. ಅವರಿಗೂ ಮನಪರಿವರ್ತನೆಯ ದಿನ ಬರಬಹುದು ಎಂದು ಹೇಳಿದರು.

ಮಂದಿರ ಕೆಡವಿ ಕಟ್ಟಿದ ಮಸೀದಿಯಲ್ಲಿ ನಮಾಜ್ ಮಾಡಿದರೆ ಅದು ಹರಾಮ್ ಆಗುತ್ತದೆ ಎನ್ನುವುದು ಅವರ ನಿಯಮ. ಅದು ಮುಂದೆ ಅರ್ಥವಾಗಬಹುದು. ಹರಾಮ್ ಆಗುತ್ತದೆ ಅಂತ ಅನಿಸಿದ ದಿನ ಅವರು ಉದಾರತೆಯನ್ನು ಪ್ರದರ್ಶನ ಮಾಡಬಹುದು ಎಂದು ಹೇಳಿದ ರವಿ, ಮಸೀದಿಗಳಾಗಿ ಪರಿವರ್ತನೆಯಾಗಿರುವ ಕಟ್ಟಡಗಳು ಮರಳಿ ದೇಗುಲಗಳಾಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ʻʻನಾವು ಎಲ್ಲಾ ಮುಸ್ಲಿಮರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದಿಲ್ಲ. ಇಲ್ಲಿನ ಮುಸ್ಲಿಮರು ಘಜನಿ, ಘೋರಿ, ಬಾಬರ್ ಮಾನಸೀಕತೆಯಿಂದ ಹೊರಬರಬೇಕು. ಅವರಿಗೆ ಶಿಶುನಾಳ ಷರೀಫ್, ಅಬ್ದುಲ್ ಕಲಾಂ ಅವರು ಆದರ್ಶವಾಗಬೇಕು. ಆಗ ನಮ್ಮಲ್ಲಿ ಸಹೋದರತ್ವ ಭಾವನೆ ಗಟ್ಟಿಯಾಗುತ್ತದೆʼʼ ಎಂದು ಸಿ.ಟಿ ರವಿ ಹೇಳಿದರು.

Exit mobile version