ಹಾಸನ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹುರುಪು ತುಂಬುವ ಸಾಮರ್ಥ್ಯ ಇಲ್ಲಿನ ನಾಯಕರಿಗೆ ಇಲ್ಲ. ಹೀಗಾಗಿ ರಾಹುಲ್ ಗಾಂಧಿ ಬಂದಿದ್ದಾರೆ. ಅವರು ಯಾವ ರೀತಿ ಹುರುಪು ತುಂಬುತ್ತಾರೋ ನೋಡೋಣ ಎಂದು ಲೇವಡಿ ಮಾಡಿದ್ದಾರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶುಕ್ರವಾರ ರಾಜ್ಯ ಪ್ರವೇಶಿಸುತ್ತಿದ್ದು, ಈ ವಿಚಾರವಾಗಿ ಹಾಸನದ ಬೇಲೂರಿನಲ್ಲಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ರಾಜ್ಯದ ಕಾಂಗ್ರೆಸ್ ನಾಯಕರಿಗೆ ಹುರುಪು ತುಂಬುವ ಸಾಮರ್ಥ್ಯ ಇಲ್ಲ. ಇವರಿಗೆ ರಾಹುಲ್ ಗಾಂಧಿನೇ ಬಂದು ಹುರುಪು ತುಂಬಬೇಕು ಎಂದು ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿಯವರ ಹುರುಪು ತುಂಬುವ ಸಾಮರ್ಥ್ಯ ಏನು ಎಂಬುದನ್ನು, ಅವರ ನಾಯಕತ್ವದ ಸುಮಾರು 48 ಚುನಾವಣೆಗಳಲ್ಲಿ, 42 ಚುನಾವಣೆಗಳಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ. ಈ ಮೂಲಕವೇ ರಾಹುಲ್ ನಾಯಕತ್ವದ ಹುರುಪು ಏನು ಎಂದು ತೋರಿಸಿದೆ ಎಂದು ಗೇಲಿ ಮಾಡಿದರು.
ʻʻರಾಹುಲ್ ಗಾಂಧಿ ಅವರ ತಾತ, ಮುತ್ತಾತ, ಅಜ್ಜಿ, ಅಮ್ಮ ಎಲ್ಲರೂ ರಾಜಕಾರಣ ಮಾಡಿದಂತಹ ರಾಜ್ಯ ಉತ್ತರ ಪ್ರದೇಶ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿ 399 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ ಎರಡು ಸ್ಥಾನ ಗೆದ್ದಿದ್ದಾರೆ. 387ರಲ್ಲಿ ಠೇವಣಿ ಕಳೆದುಕೊಂಡು ಮಕಾಡೆ ಮಲಗಿದ್ದರು. ಅದೇ ಸಾಮರ್ಥ್ಯವನ್ನು ಕರ್ನಾಟಕದಲ್ಲಿಯೂ ರಾಹುಲ್ ತೋರಿಸಲಿʼʼ ಎಂದರು ಸಿ.ಟಿ. ರವಿ. 224 ಕ್ಷೇತ್ರಗಳಲ್ಲಿಯೂ ಯುಪಿಯನ್ನು ಮೀರಿಸಿದ ಸಾಧನೆ ಮಾಡಲಿ. 200 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡು, ಕಾಂಗ್ರೆಸ್ ವೈಭವ ಹಾಗೂ ರಾಹುಲ್ ಗಾಂಧಿ ಸಾಮರ್ಥ್ಯ ಪ್ರದರ್ಶಿಸಲಿ ಎಂದು ಕಾಲೆಳೆದರು.
ರಾಜ್ಯದ ಪ್ರಾಮಾಣಿಕ ರಾಜಕಾರಣಿ ಡಿ.ಕೆ.ಶಿವಕುಮಾರ್!
ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಈ ರಾಜ್ಯದಲ್ಲಿ ಅತ್ಯಂತ ಪ್ರಾಮಾಣಿಕ ರಾಜಕಾರಣಿ ಎಂದರೆ ಡಿ.ಕೆ. ಶಿವಕುಮಾರ್. ಅವರಷ್ಟು ಪ್ರಾಮಾಣಿಕರು ಬೇರೆ ಯಾರೂ ಇಲ್ಲ. ಹಾಗಾಗಿ ಅವರ ಮನೆಗೆ ಇ.ಡಿ, ಸಿಬಿಐ ತಂಡ ಹೋಗಿದೆ. ಇವರನ್ನು ಬಿಟ್ಟರೆ ಅಧಿಕಾರಿಗಳು ಬೇರೆ ಯಾರ ಮನೆಗೆ ಹೋಗಲು ಸಾಧ್ಯ ಎಂದು ಕೆಣಕಿದರು ರವಿ. ʻʻಶಿವಕುಮಾರ್ ತುಂಬಾ ಪ್ರಾಮಾಣಿಕರು. ಅವರು ಯಾಕೆ ಹೆದರಬೇಕು? ಮಹಾತ್ಮಾಗಾಂಧಿ ಹೆಂಗೆ ಅರೆಬೆತ್ತಲೆ ಫಕೀರರೋ ಇವರೂ ಕೂಡಾ ಅರೆಬೆತ್ತಲೆ ಫಕೀರರು ಎಂದು ತಿಳಿದು ಸಿಬಿಐ, ಇ.ಡಿ ಹೋಗಿದೆ. ಫಕೀರರ ಮನೆಯಲ್ಲಿ ಏನು ಸಿಗುತ್ತದೆ?ʼʼ ಎಂದು ಗೇಲಿ ಮಾಡಿದರು.
ಇದನ್ನೂ ಓದಿ | ವೋಟ್ ಸಿಗುತ್ತದೆಂದರೆ ಸಿದ್ದರಾಮಯ್ಯ ಸುನ್ನತ್‌ಗೂ ರೆಡಿ: ಸಿ.ಟಿ ರವಿ ಗೇಲಿ