ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಪುತ್ರ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆಯ್ಕೆ ಬಗ್ಗೆ ಮಾಜಿ ಸಚಿವ ಸಿ.ಟಿ. ರವಿ (CT Ravi) ಮೌನ ಮುರಿದಿದ್ದಾರೆ. ವಿಜಯೇಂದ್ರಗೆ ಅಭಿನಂದನೆ ಸಲ್ಲಿಸಿರುವುದಾಗಿ ತಿಳಿಸಿದ್ದಲ್ಲದೆ, ಲೋಕಸಭಾ ಚುನಾವಣೆಗೆ ಒಟ್ಟಾಗಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ, ಪ್ರತಿ ಸಂದರ್ಭದಲ್ಲಿಯೂ ತಮಗೆ ಯಾವುದೇ ರೀತಿಯ ಅಸಮಾಧಾನಗಳು ಇಲ್ಲ. ತಾವೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳುತ್ತಲೇ ಆಗಾಗ ತಮ್ಮ ಅಸಮಾಧಾನವನ್ನು ಹರಿತ ಮಾತಿನ ಮೂಲಕ ಹೊರಹಾಕಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ. ರವಿ, ಈಗಾಗಲೇ ನಾನು ವಿಜಯೇಂದ್ರಗೆ ಅಭಿನಂದನೆ ಸಲ್ಲಿಸಿದ್ದೇನೆ. ಇದು ಅಧಿಕಾರ ಅಲ್ಲ, ಒಂದು ಜವಾಬ್ದಾರಿಯಾಗಿದೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಎರಡೂವರೆ ದಶಕದಿಂದ ನಾನು ಯಾವುದೇ ಜವಾಬ್ದಾರಿಯನ್ನು ಕೇಳಿ ಪಡೆದಿಲ್ಲ. ಬೂತ್ ಅಧ್ಯಕ್ಷನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆವರೆಗೆ ಪಕ್ಷ ನನಗೆ ಅವಕಾಶ ಕೊಟ್ಟಿದೆ. ಮುಂದಿನ ಲೋಕಸಭೆಯಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಹಾಗಾಗಿ ಅಸಮಾಧಾನ ಅನ್ನೋದು ಬರುವುದಿಲ್ಲ. ನಾವೆಲ್ಲ ರಾಜಕಾರಣಕ್ಕೆ ಬಂದಿದ್ದು ಸೈದ್ಧಾಂತಿಕ ಕಾರಣಕ್ಕೆ ಎಂಬುದು ಮುಖ್ಯ ಎಂದು ಸಿ.ಟಿ. ರವಿ ಹೇಳಿದರು.
ಇದನ್ನೂ ಓದಿ: Ration Card : ಹೀಗಿದ್ದರೆ 3.47 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದು? ಸರ್ಕಾರದ ಗ್ಯಾರಂಟಿಗೂ ಕೊಕ್ಕೆ?
ಆರ್ಟಿಕಲ್ 370 ರದ್ದು ಮಾಡಿರುವ ನಮ್ಮ ಪಕ್ಷದ ಕ್ರಮಕ್ಕೆ ಎಲ್ಲರೂ ಹೆಮ್ಮೆ ಪಡುವಂತೆ ಆಗಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಆರ್ಟಿಕಲ್ 370 ಅನುಭವವನ್ನು ಪಡೆದುಕೊಂಡು ಬಂದರು. ಮಂದಿರ್ ವಹೀ ಬನೇಗಾ ಅಂತ ಘೋಷಣೆ ಕೂಗುತ್ತಿದ್ದೆವು. 2024ರ ಜನವರಿ 22ರಂದು ಅಲ್ಲಿ ರಾಮ್ ಲಾಲ್ ಪ್ರತಿಷ್ಠಾಪನೆ ಆಗುತ್ತಲಿದ್ದಾನೆ. ನಾವು ಬಿಜೆಪಿಗೆ ಬಂದಿದ್ದು ಈ ಎಲ್ಲ ಕಾರಣಕ್ಕೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ನಮ್ಮ ಕನಸುಗಲನ್ನು ನನಸು ಮಾಡಿಕೊಂಡು ಬರುತ್ತಿದೆ ಎಂದು ಸಿ.ಟಿ. ರವಿ ತಿಳಿಸಿದರು.
ನಮ್ಮ ಹಿರಿಯರು ಹೇಳಿದ್ದನ್ನು ನಮ್ಮ ಕಿರಿಯರಿಗೆ ಹೇಳುತ್ತಾ ಬಂದಿದ್ದೇನೆ. ಬಿ.ವೈ. ವಿಜಯೇಂದ್ರ ನನ್ನ ಜತೆ ವೈಯಕ್ತಿಕವಾಗಿ ಚೆನ್ನಾಗಿದ್ದಾರೆ. ಶುಕ್ರವಾರ (ನ. 10) ಕರೆ ಮಾಡಿ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಸಿ.ಟಿ. ರವಿ ಹೇಳಿದರು.
ಸ್ವಜನಪಕ್ಷಪಾತದ ಬಗ್ಗೆ ನನಗೂ ಗೊಂದಲ ಇದೆ!
ಸ್ವಜನಪಕ್ಷಪಾತ ವಿರೋಧಿಸಿದ್ದ ಬಿಜೆಪಿ ಈಗ ಅದನ್ನೇ ಬೆಂಬಲಿಕೊಂಡು ಬಂದಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ನಾನು ಈಗ ಏನಾದರೂ ಮಾತನಾಡಿದರೆ ಅದರ ಹಿಂದಿನ ವಿಡಿಯೊವನ್ನು ತೋರಿಸುತ್ತೀರಿ. ವಿಚಾರ ಎಲ್ಲೆಲ್ಲಿಯೋ ಹೋಗುತ್ತದೆ. ನನಗೂ ಈ ವಿಚಾರದಲ್ಲಿ ಗೊಂದಲ ಇದೆ. ನನಗೂ ನಿಮ್ಮ ಹಾಗೆಯೇ ಇದು ಪ್ರಶ್ನೆಯೇ! ಪಾರ್ಟಿ ಒಮ್ಮೆ ನಿರ್ಣಯ ತೆಗೆದುಕೊಂಡಿದ್ದನ್ನು ನಾನು ಹೊರಗೆ ಪ್ರಶ್ನೆ ಮಾಡಲ್ಲ. ನಾನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ ಆಗಿರಲಿಲ್ಲ. ನಾನು ಈಗ ಹೇಳಿದರೆ ಕೈಗೆ ಸಿಗದ ದ್ರಾಕ್ಷಿ ಅನ್ನಬಹುದು. ನಾನು ಐದು ತಿಂಗಳ ಹಿಂದೆಯೂ ಹೇಳಿದ್ದೇನೆ. ಮೂರು ತಿಂಗಳ ಹಿಂದೆಯೂ ಹೇಳಿದ್ದೇನೆ ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದರು.
ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು. ಸಾಮಾನ್ಯ ಕಾರ್ಯಕರ್ತನಾಗಿ 2024ರಲ್ಲಿ ಕೆಲಸ ಮಾಡುತ್ತೇನೆ. ಯಾವ ಸಂದರ್ಭಕ್ಕೆ ಯಾರು ಸೂಕ್ತ ಅನ್ನೋದನ್ನು ಪಕ್ಷ ನಿರ್ಧಾರ ಮಾಡುತ್ತದೆ. ಬಿ.ವೈ. ವಿಜಯೇಂದ್ರ ಅವರಿಗಿಂತ ಅನುಭವದಲ್ಲಿ ಹಿರಿಯರು ಇದ್ದಾರೆ ನಿಜ. ಆದ್ರೆ ಅದನ್ನು ನಾನು ನಿಮ್ಮ ನಡುವೆ ಡಿಸ್ಕಸ್ ಮಾಡಲ್ಲ. ನಾನು ಒಬ್ಬನೇ ಇರೋದು ನನ್ನ ಗುರಿ ಒಂದೇ. ಭಾರತ ವಿಶ್ವಗುರು ಆಗಬೇಕು, ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. 2047ರಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಬೇಕು. ರಾಜಕಾರಣ ಚೆಸ್ ಗೇಮ್ ಅಲ್ಲ. ಫುಟ್ಬಾಲ್ ತರಾ ಎರಡು ತಂಡಗಳು ಆಡೋ ಆಟ. ಎಲ್ಲರ ಪಾತ್ರ ಇದ್ದಾಗ ಮಾತ್ರ ತಂಡ ಗೆಲ್ಲತ್ತದೆ ಎಂದು ಸಿ.ಟಿ. ರವಿ ಹೇಳಿದರು.
ಜಾತಿ ಮೇಲಿನ ಆಯ್ಕೆ ತಾತ್ಕಾಲಿಕ ಗೆಲುವು
ವಿಪಕ್ಷ ನಾಯಕ ಸ್ಥಾನ ಒಕ್ಕಲಿಗರಿಗೆ ಸಿಗುವ ವಿಚಾರದ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಕ್ಕೆ, ಕಾಂಗ್ರೆಸ್ ಅನ್ನು ಕಟ್ಟಿ ಹಾಕುವ ನಾಯಕ ಬೇಕು. ಜಾತಿ ಮೇಲೆ ಆಯ್ಕೆ ಮಾಡೋದು ತಾತ್ಕಾಲಿಕ ಗೆಲುವನ್ನು ತಂದು ಕೊಡಬಹುದು. ಆದರೆ, ಸೈದ್ಧಾಂತಿಕ ವಿಚಾರಕ್ಕೆ ಪೆಟ್ಟು ಆಗಬಹುದು. ಜಾತಿ ಮೇಲೆ ಯಾವುದೇ ಹುದ್ದೆ ಕೊಡಬಾರದು. ಪಕ್ಷದ ಸಿದ್ಧಾಂತ, ಬದುಕಿನ ಸಿದ್ಧಾಂತವಾದರೆ ಜಾತಿವಾದ ಕೆಟ್ಟದಾಗುತ್ತದೆ ಎಂದು ಸಿ.ಟಿ. ರವಿ ಹೇಳಿದರು.
ಜಾತಿಗೆ ಸೀಮಿತ ಮಾಡೋದು ಸರಿಯಲ್ಲ
ಬಿ.ಎಸ್. ಯಡಿಯೂರಪ್ಪಗೆ ದೊಡ್ಡ ಅನುಭವ ಇದೆ. ನಾವು ಸೈದ್ಧಾಂತಿಕವಾಗಿರಬೇಕು. ಇದನ್ನು ನಾವು ಮುಂದುವರಿಸುತ್ತೇವೆ. ವಿಜಯೇಂದ್ರ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ ಎಂಬ ವಿಶ್ವಾಸ ಇದೆ. ಜಾತಿ ರಣನೀತಿಯ ಭಾಗವಾಗಬಹುದು. ಆದರೆ, ಪಕ್ಷದ ಸಿದ್ಧಾಂತದ ವಿಚಾರದಲ್ಲಿ ಆಗಬಾರದು. ಜಾತಿಗೆ ಸೀಮಿತ ಮಾಡೋದು ಸರಿಯಲ್ಲ. ಭಾರತೀಯ ಪರಂಪರೆಯು ಯೋಗ್ಯತೆಗೆ ಅವಕಾಶ ಕೊಟ್ಟ ಪರಂಪರೆಯಾಗಿದೆ. ಜಾತಿಗೆ ಅವಕಾಶ ಕೊಟ್ಟ ಪರಂಪರೆ ನಮ್ಮದಲ್ಲ ಎಂದು ಸಿ.ಟಿ. ರವಿ ಹೇಳಿದರು.
35 ವರ್ಷದ ಸಾರ್ವಜನಿಕ ಜೀವನದಲ್ಲಿ ನಾನು ಯಾರಿಗಾದರೂ ನೋವು ಮಾಡಿದರೆ ಕ್ಷಮೆ ಕೇಳುತ್ತೇನೆ. ಎಲ್ಲರಿಗೂ ದೀಪಾವಳಿ ಶುಭಾಶಯ ಎಂದು ಸಿ.ಟಿ. ರವಿ ಹೇಳಿದರು.
ಇದನ್ನೂ ಓದಿ : BY Vijayendra : ನನ್ನ ಆಯ್ಕೆ ಕುಟುಂಬ ರಾಜಕಾರಣವಲ್ಲ; ಯುವ ಕೋಟದಲ್ಲಿ ಮನ್ನಣೆ ಸಿಕ್ಕಿದೆ ಎಂದ ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ ಆಯ್ಕೆ ಜಾತಿ ಮೇಲೋ, ಯೋಗ್ಯತೆ ಮೇಲೂ, ಸಿದ್ಧಾಂತದ ಮೇಲೋ ಎಂಬ ಪ್ರಶ್ನೆಗೆ ಸಿ.ಟಿ. ರವಿ ಸಮರ್ಪಕವಾಗಿ ಉತ್ತರ ನೀಡಲಿಲ್ಲ.