ಬೆಂಗಳೂರು: ಭಾರತೀಯ ಸೇನೆಗೆ ಸೇರಬೇಕು ಎನ್ನುವವರು ಯಾರೂ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ ಎಂದು ಅಗ್ನಿಪಥ ಪ್ರತಿಭಟನೆ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ನಗರ ಹೊರವಲಯದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಪ್ರಶಿಕ್ಷಣ ವರ್ಗದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಬೆಂಕಿ ಹಾಕಿದ ಹಿಂದೆ ಷಡ್ಯಂತ್ರ ಇದೆ. ಇದರ ಸಂಪೂರ್ಣ ತನಿಖೆ ಆಗಬೇಕು. ಈ ಬಗ್ಗೆ ವಾಟ್ಸ್‌ಅಪ್‌ನಲ್ಲಿ ಏನೇನು ಸಂದೇಶ ಹರಿದಿದ್ಯೋ ಯಾರಿಗೆ ಗೊತ್ತು? ಹಿಂಸಾಚಾರದ ಹಿಂದೆ ಪೂರ್ವ ಯೋಜಿತ ಪ್ಲಾನ್ ಇದೆ. ಎಲ್ಲ ತಯಾರಿ ಮಾಡಿಕೊಂಡೇ ಬಂದು ಬೆಂಕಿ ಹಾಕಿದ್ದಾರೆ. ಬೆಂಕಿ ಹಾಕಿರುವವರು ಸೈನ್ಯಕ್ಕೆ ಸೇರುವವರಲ್ಲ. ಹಲವಾರು ಕಾರಣಗಳಿಗೆ ದೇಶ ವಿರೋಧಿಸುವವರು ಇದರ ಹಿಂದೆ ಇದ್ದಾರೆ. ಇವರ‍್ಯಾರೂ ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಎಂದಿದ್ದಾರೆ ಎಂದರು.
ಇದನ್ನೂ ಓದಿ | ಅಗ್ನಿಪಥ್‌ಗೆ ಕಾಡಿತೇ ಪೂರ್ವಸಿದ್ಧತೆ ಕೊರತೆ, ಕೃಷಿ ಕಾಯಿದೆಯಂತೆಯೇ ಹಿನ್ನಡೆ ಆದೀತೆ?
ಕೆಲವರಿಗೆ ದೇಶಸೇವೆ ಬೇಕಾಗಿಲ್ಲ ಎಂದ ಸಿ.ಟಿ. ರವಿ, ಕೆಲವರಿಗೆ ಇದು ರಾಜಕಾರಣ. ಹೀಗಾಗಿ ಅರಾಜಕತೆ ಸೃಷ್ಟಿಸುತ್ತಾರೆ. ಪೌರತ್ವ ಕಾಯ್ದೆ ತಂದಾಗಲೂ ಏನೇನೋ ಗುಲ್ಲು ಹಬ್ಬಿಸಲಾಗಿತ್ತು. ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುತ್ತಾರೆ, ಪಾಕಿಸ್ತಾನಕ್ಕೆ ಕಳಿಸುತ್ತಾರೆ ಎಂದು ಸುಳ್ಳು ಹೇಳಲಾಗಿತ್ತು. ದೇಶಭಕ್ತಿ ಇರುವವರು ಸೇನೆ ಸೇರುತ್ತಾರೆ. ದೇಶಭಕ್ತಿ ಇಲ್ಲದಿರುವವರು ಸಿದ್ದರಾಮಯ್ಯ ಥರ ಮಾತಾಡುತ್ತಾರೆ. ಸಿದ್ಧಾಂತ ಇಲ್ಲದಿರುವವರು ಸಿದ್ದರಾಮಯ್ಯ ಥರ ಮಾತನಾಡುತ್ತಾರೆ. ಸೈನ್ಯಕ್ಕೆ ಸೇರುವುದು ಜಾಬ್ ಗ್ಯಾರಂಟಿ ಸ್ಕೀಮ್ ಅಲ್ಲ. ಇದು ಭಾರತ ಮಾತೆಯ ಸೇವೆ. ಅಲ್ಲಿ ಹೋಗುವುದು ಬೆಂಕಿ ಹಾಕುವುದಕ್ಕಲ್ಲ. ಬೆಂಕಿ ಹಾಕುವವರು ಸೈನ್ಯಕ್ಕೆ ಹೋದರೆ ಇನ್ನೂ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಗ್ನಿಪಥ ಪ್ರತಿಭಟನೆ ಮಾಡುತ್ತಿರುವವರು ಎಲಿಜೆಬಲ್ ಅಲ್ಲ
ವಿಜಯಪುರ: ಪ್ರತಿಭಟನೆ ಮಾಡುತ್ತಿರುವವರು ಅಗ್ನಿಪಥ ಯೋಜನೆಗೆ ಆಯ್ಕೆಯೇ ಆಗುವುದಿಲ್ಲ. ಅವರ‍್ಯಾರೂ ಆ ವಯಸ್ಸಿನವರೇ ಅಲ್ಲ ಎಂದು ಸಚಿವ ಸಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಇದು ಮೋದಿ ಸರ್ಕಾರದ ಮೇಲೆ ಗೂಬೆಕೂರಿಸಲು ನಡೆಯುತ್ತಿರುವ ಕೃತ್ಯ. 45 ವಯಸ್ಸಿನವ ಪ್ರತಿಭಟನೆ ಮಾಡಿದರೆ ಅವನೇನು ಅಗ್ನಿಪಥಕ್ಕೆ ಆಯ್ಕೆಯಾಗುತ್ತಾನ? ಅವರೆಲ್ಲ ಯಾರು ಎನ್ನುವುದು ಮಾಧ್ಯಮಗಳಲ್ಲೆ ಕಾಣಿಸುತ್ತಿದೆ. ಮೋದಿ ಸರ್ಕಾರದ ಈ ಹೊಸ ಯೋಜನೆಗೆ ಬಿಜೆಪಿಯೇತರ ಸರ್ಕಾರ ಇರುವಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ. ನಮ್ಮಲ್ಲಿಯೂ ಕೆಲವರಿಗೆ ಬ್ಯಾರಿಕೇಡ್ ಹಾರುವುದು ರೂಢಿಯಾಗಿದೆ. ನಾ ಮುಂದು, ತಾ ಮುಂದು ಎಂದು ಬ್ಯಾರಿಕೇಡ್ ಹಾರುತ್ತಿದ್ದಾರೆ. ಅವರಿಗೆಲ್ಲ ಅಗ್ನಿಪಥ ಯೋಜನೆಯ ಸಾಧಕ-ಬಾಧಕವೇ ಗೊತ್ತಿಲ್ಲ. ಶಾಲಾ ಬಸ್‌ಗೂ ಅಗ್ನಿಪಥಕ್ಕೂ ಸಂಬಂಧ ಏನಿದೆ? ಆ ಮಗು ಅಳುತ್ತಾ ಬಂದಿದೆ. ಪ್ರತಿಭಟನೆಗೆ ಇತಿಮಿತಿ ಇರಲಿ ಎಂದಿದ್ದಾರೆ.
ಇದನ್ನೂ ಓದಿ | ಅಗ್ನಿಪಥ ಯೋಜನೆ ಸ್ಥಗಿತಗೊಳಿಸಿ, ಚರ್ಚೆ ನಡೆಸಿ ಎಂದ ಸಿದ್ದರಾಮಯ್ಯ