ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ʻಸಿದ್ರಾಮುಲ್ಲಾ ಖಾನ್ʼ ಎಂದು ಟೀಕೆ ಮಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಯನ್ನು (CT Ravi vs Siddaramaiah) ಬಿಜೆಪಿ ಅಧಿಕೃತವಾಗಿ ಸಮರ್ಥಿಸಿಕೊಂಡಿದೆ. ಸಿದ್ರಾಮುಲ್ಲಾ ಖಾನ್ ಹೇಳಿಕೆಯನ್ನು ನೀಡಿದ ಸಿ.ಟಿ. ರವಿ ಅವರ ಮನೆಗೆ ಎದುರು ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಮತ್ತು ಕೆಲವು ಕಾಂಗ್ರೆಸ್ ನಾಯಕರು ಬೆದರಿಕೆ ಹಾಕಿದ ಬೆನ್ನಿಗೇ ಬಿಜೆಪಿ ಸಿ.ಟಿ. ರವಿ ಅವರನ್ನು ಅಧಿಕೃತವಾಗಿ ಬೆಂಬಲಿಸಿದೆ.
ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ, ಕನ್ನಡಿಗರು ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎಂದು ವಿನಾಕಾರಣ ಕರೆಯುತ್ತಿಲ್ಲ ಎಂದು ಹೇಳಿದ್ದಲ್ಲದೆ ಎಂಟು ಸರಣಿ ಟ್ವೀಟ್‌ಗಳ ಮೂಲಕ ಹಲವು ಕಾರಣಗಳನ್ನು ನೀಡಿದೆ.
ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತಾಂಧ ಟಿಪ್ಪುವನ್ನು ನುಗ್ಗಿಸಿದವರು ಸಿದ್ದರಾಮಯ್ಯ, ತಮ್ಮವರನ್ನೇ ತುಳಿಯುವ ಸಿದ್ದರಾಮಯ್ಯರ ಮನಸ್ಥಿತಿ ಕಂಡು ದೇವೇಗೌಡರು ಅಂದೇ ಅವರನ್ನು ಹೊರಹಾಕಿದರು ಎಂದೆಲ್ಲ ಟ್ವೀಟಿಸಲಾಗಿದೆ.
ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದುಳಿದವರು ಮತ್ತು ದಲಿತರನ್ನು ಹತ್ತಿದ ಏಣಿ ತುಳಿಯುವಂತೆ ಎಡಗಾಲಲ್ಲಿ ತುಳಿದದ್ದನ್ನು ಜನ ಮರೆತಿಲ್ಲ ಎಂದಿರುವ ಬಿಜೆಪಿ, ಸಿದ್ರಾಮುಲ್ಲಾ ಖಾನ್ ಎನ್ನದೇ ಮೋಸ ಮಾಡುವ ಮೀರ್ ಸಾದಿಕ್ ಎನ್ನಬಹುದೆ ಎಂದೂ ಪ್ರಶ್ನಿಸಿದೆ.
26/11 ಮುಂಬೈ ದಾಳಿಯಲ್ಲಿ ಸಾರ್ವಜನಿಕರ ಪ್ರಾಣ ಉಳಿಸಲು ಪ್ರಾಣಾರ್ಪಣೆ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್‌ರವರ ವೀರಗಾಥೆಯುಳ್ಳ “ಕರಾಳ ರಾತ್ರಿ” ಪಾಠವನ್ನು ಕೈಬಿಟ್ಟಿದ್ದನ್ನೂ ಬಿಜೆಪಿ ಪ್ರಸ್ತಾಪಿಸಿದೆ.
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮಾಡಿದ ಸರಣಿ ಟ್ವೀಟ್‌ಗಳಿವು
೧. ಕನ್ನಡಿಗರು ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎಂದು ವಿನಾಕಾರಣ ಕರೆಯುತ್ತಿಲ್ಲ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತಾಂಧ ಟಿಪ್ಪುವನ್ನು ನುಗ್ಗಿಸಿ, ನಮ್ಮ ನಾಡಿನ ಅಸ್ಮಿತೆಗೆ ಕೊಳ್ಳಿಯಿಟ್ಟ ಪೆಡಂಭೂತದ ಜಯಂತಿಯನ್ನು ಸರಕಾರಿ ಆಚರಣೆಯಾಗಿ ತಂದವರು ಅವರು. ಇಂಥವರು ಸಿದ್ರಾಮುಲ್ಲಾ ಖಾನ್ ಅಲ್ಲದೇ ಇನ್ಯಾರು?
೨. ತಮ್ಮವರನ್ನೇ ತುಳಿಯುವ ಸಿದ್ದರಾಮಯ್ಯರ ಮನಸ್ಥಿತಿ ಕಂಡು ದೇವೇಗೌಡರು ಅಂದೇ ಅವರನ್ನು ಹೊರಹಾಕಿದರು. ಆಗ ಕಾಂಗ್ರೆಸ್ ಸೇರಲು ಸೇರಲು ಬಲಪ್ರದರ್ಶನದ ಅಗತ್ಯ ಬಂತು. ಹಾಗಾಗಿ ಅಹಿಂದ ಎಂಬ ಏಣಿ ಕಟ್ಟಿ ನಂತರ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದುಳಿದವರು & ದಲಿತರನ್ನು ಹತ್ತಿದ ಏಣಿ ತುಳಿಯುವಂತೆ ಎಡಗಾಲಲ್ಲಿ ತುಳಿದದ್ದನ್ನು ಜನ ಮರೆತಿಲ್ಲ.
೩. ಕ್ಷಣವೂ ವಿವೇಚಿಸದೆ ತಲಾಖ್ ಎಂದು ಮಹಿಳೆಯರ ಬದುಕು ಬರ್ಬಾದ್ ಮಾಡುವ ಮನಸ್ಥಿತಿಯವರಿಗೆ ಬೆನ್ನುತಟ್ಟುವ ಶಾದಿ ಭಾಗ್ಯ ಕಲ್ಪಿಸಿದ್ದು ಸಿದ್ದರಾಮಯ್ಯ. ಕೇವಲ ಒಂದು ಸಮುದಾಯದ ಓಲೈಕೆ ಮಾಡಲು ಸೆಕ್ಯುಲರಿಸಂ ಹೆಸರಿನಲ್ಲೇ ತುಷ್ಟೀಕರಣಕ್ಕಿಳಿದಿರಿ. ಇಂಥವರನ್ನು ಸಿದ್ರಾಮುಲ್ಲಾ ಖಾನ್ ಎನ್ನದೆ ಮತ್ತೇನೆಂದು ಕರೆದಾರು?
೪. ದೇಶಾದ್ಯಂತ ಮತಾಂಧತೆಯನ್ನು ಪಸರಿಸುತ್ತಾ ಅಲ್ಲಲ್ಲಿ ಭಯೋತ್ಪಾದಕ ದಾಳಿ ನಡೆಸಲು ಹೊಂಚು ಹಾಕುತ್ತಿದ್ದ ಪಿಎಫ್‌ಐನ 175 ಗೂಂಡಾಗಳ ಮೇಲಿದ್ದ ಕೇಸುಗಳನ್ನು ವಿಚಾರಣೆಯಿಲ್ಲದೆ ಹಿಂಪಡೆದದ್ದಕ್ಕಾಗಿ ವಿಚಾರವಾದಿ ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಎಂಬ ಬಿರುದನ್ನು ನಾವಲ್ಲ, ಜನರೇ ನೀಡಿದ್ದಾರೆ.
೫. ಟಿಪ್ಪು ಎಕ್ಸ್‌ಪ್ರೆಸ್ ಎಂಬ ಹೆಸರನ್ನು ಬದಲಾಯಿಸಿ ಜನ ಇಂದಿಗೂ ಸ್ಮರಿಸುವ-ಆರಾಧಿಸುವ ‘ಒಡೆಯರ್’ ಎಕ್ಸ್‌ಪ್ರೆಸ್ ಎಂದು ಕರೆದಾಗ ನಿಮಗೆ ಆದ ಅಸಹನೆಯನ್ನು ನಾಡಿನ ಜನ ಕಂಡಿದ್ದಾರೆ ಸಿದ್ದರಾಮಯ್ಯ. ಟಿಪ್ಪುವಿನ ಆಸ್ಥಾನ ವಿದೂಷಕರಂತಾಗಿರುವ ತಮ್ಮನ್ನು ಸಿದ್ರಾಮುಲ್ಲಾ ಖಾನ್ ಎನ್ನದೇ ಮೋಸ ಮಾಡುವ ಮೀರ್ ಸಾದಿಕ್ ಎನ್ನಬಹುದೆ?
೬. ನಳಂದಾ ವಿಶ್ವವಿದ್ಯಾಲಯವನ್ನು ಸುಟ್ಟು ಸರ್ವನಾಶ ಮಾಡಿದ್ದು ಇಸ್ಲಾಮಿಕ್ ಭಯೋತ್ಪಾದನೆ ಎಂಬುದನ್ನು ಒಪ್ಪದ ಸಿದ್ದರಾಮಯ್ಯ ಆ ಇತಿಹಾಸವನ್ನು ಮರೆಮಾಚಲು ಯತ್ನಿಸಿದರು. ಇಂದಿಗೂ ಇಸ್ಲಾಮಿಕ್ ಭಯೋತ್ಪಾದನೆಯ ಕ್ರೌರ್ಯವನ್ನು ಒಪ್ಪದೇ ಮುಘಲ್ ಆಕ್ರಮಣಕಾರರ ಮಾನಸಿಕತೆಯಲ್ಲಿರುವ ಕಾರಣಕ್ಕೆ ಜನರೇ ಸಿದ್ರಾಮುಲ್ಲಾ ಖಾನ್ ಬ್ರಾಂಡ್ ಮಾಡಿರುವುದು.
೭. 26/11 ಮುಂಬೈ ದಾಳಿಯಲ್ಲಿ ಸಾರ್ವಜನಿಕರ ಪ್ರಾಣ ಉಳಿಸಲು ಪ್ರಾಣಾರ್ಪಣೆ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್‌ರವರ ವೀರಗಾಥೆಯುಳ್ಳ “ಕರಾಳ ರಾತ್ರಿ” ಪಾಠವನ್ನು ಕೈಬಿಟ್ಟವರು ತಾವು. ರಾಷ್ಟ್ರೀಯತೆಯ ಪರಮ ವಿರೋಧಿ ಸಿದ್ದರಾಮಯ್ಯ. ಹೀಗಿರುವಾಗ ತಮ್ಮನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆಯದೆ ಬೇರೆ ಬಿರುದು ಕೊಟ್ಟಾರೆಯೇ?
೮. ಹಿಜಾಬ್ ಸಮರ್ಥನೆಗೆ ಸ್ವಾಮೀಜಿಗಳು ಹಿಜಾಬ್ ಹಾಕಲ್ವಾ, ಹಿಂದೂ ಮಹಿಳೆಯರು ದುಪಟ್ಟಾ ಹಾಕಲ್ವಾ ಎಂದು ಎಲ್ಲದರಲ್ಲೂ ಹಿಜಾಬನ್ನೇ ಕಂಡ ಮೌಲ್ವಿ ನಮ್ಮ ಸಿದ್ರಾಮುಲ್ಲಾ ಖಾನ್. ಗೋ ಹತ್ಯೆಯಾದರೂ ಬೀಫ್ ಮಾರ್ಕೆಟ್ ನಿಲ್ಲಬಾರದೆಂದ ಹರಿಕಾರ ಸಿದ್ದರಾಮಯ್ಯ. ಇಂಥವರು ಖಾನ್ ಆಗದೇ ಕೇಶವ ಆಗಲು ಸಾಧ್ಯವೇ?
ಇದನ್ನೂ ಓದಿ | CT Ravi | ಸಿದ್ರಾಮುಲ್ಲಾ ಹೇಳಿಕೆಗೆ ಕಾಂಗ್ರೆಸ್ ಕೆಂಡ, ಸಿ.ಟಿ.ರವಿ ಮನೆಗೆ ಮುತ್ತಿಗೆ ಯತ್ನ; ತಾಕತ್ತಿದ್ದರೆ ರಸ್ತೆ ದಾಟಿ ಎಂದ ಬಿಜೆಪಿ