ಬೆಂಗಳೂರು: ಖ್ಯಾತ ಮಹಿಳಾ ವೈದ್ಯರಾಗಿರುವ ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ದೂರು ದಾಖಲಾಗಿದೆ. ಡಾ. ಪದ್ಮಿನಿ ಪ್ರಸಾದ್ ಅವರೇ ಈ ಬಗ್ಗೆ ಉತ್ತರ ವಿಭಾಗ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪದ್ಮಿನಿ ಪ್ರಸಾದ್ ಅವರು ಖ್ಯಾತ ಮಹಿಳಾ ಮತ್ತು ಪ್ರಸೂತಿ ತಜ್ಞರು. ಗರ್ಭಧಾರಣೆ, ಸಂತಾನ ಸಮಸ್ಯೆ, ಕೃತಕ ಗರ್ಭಧಾರಣೆಯ ಆಧುನಿಕ ವಿಧಾನಗಳ ಬಗ್ಗೆ ಸಾಕಷ್ಟು ಜನರರಲ್ಲಿ ಅರಿವು ಮೂಡಿಸಿದವರು. ಲೈಂಗಿಕ ಸಮಸ್ಯೆಗಳಿಗೆ ಮುಕ್ತವಾದ ಸಲಹೆಗಳನ್ನು ನೀಡುವುದಕ್ಕೆ ಪ್ರಸಿದ್ಧರು.
ಯಾರೋ ಕಿಡಿಗೇಡಿಗಳು ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿ ಮಾಡಿದ್ದಲ್ಲದೆ, ಲೈಂಗಿಕ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಜತೆಗೆ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿರುವುದು ಡಾ. ಪದ್ಮಿನಿ ಪ್ರಸಾದ್ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಅವರು ದೂರು ನೀಡಿದ್ದಾರೆ.
ಈ ಹಿಂದೆಯೂ ಇದೇ ರೀತಿ ಆಗಿತ್ತು
೨೦೨೧ರ ಜನವರಿಯಲ್ಲೂ ಪದ್ಮಿನಿ ಪ್ರಸಾದ್ ಅವರು ಇದೇ ರೀತಿ ದೂರು ನೀಡಿದ್ದರು. ಆಗಲೂ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚನೆ ಮಾಡಿದ್ದಲ್ಲದೆ, ಮಹಿಳೆಯರ ಜತೆಗೆ ಅಸಭ್ಯವಾಗಿ ವರ್ತಿಸಲಾಗಿತ್ತು.
ಡಾ. ಪದ್ಮಿನಿ ಅವರ ನೈಜ ಖಾತೆಯಲ್ಲಿನ ಫೋಟೊಗಳನ್ನು ಎತ್ತಿಕೊಂಡ ಖದೀಮರು, ನಕಲಿ ಖಾತೆ ಸೃಷ್ಟಿ ಮಾಡಿದ್ದಲ್ಲದೆ ಸೈಕಾಲಜಿಸ್ಟ್ ಎಂದು ಬರೆದುಕೊಂಡಿದ್ದರು. ನಕಲಿ ಖಾತೆಯಿಂದ ನೂರಾರು ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ರಿಕ್ವೆಸ್ಟ್ ಸ್ವೀಕರಿಸಿದವರ ಜತೆ ಅಸಭ್ಯವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ.