Site icon Vistara News

Cyber Fraud: 6 ವರ್ಷದಲ್ಲಿ ಸೈಬರ್‌ ಅಪರಾಧ 450% ಜಾಸ್ತಿ; ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ದಾರರೇ ಟಾರ್ಗೆಟ್

Cyber Fraud

ಬೆಂಗಳೂರು: ತಂತ್ರಜ್ಞಾನವನ್ನು ಜೀವನದ ಭಾಗವಾಗಿ ಅಳವಡಿಸಿಕೊಂಡಷ್ಟೇ ವೇಗವಾಗಿ ಸೈಬರ್‌ ಸಂಬಂಧಿತ ಅಪರಾಧಗಳು (Cyber Fraud) ಏರಿಕೆ ಆಗುತ್ತಿವೆ. ಕಳೆದ 6 ವರ್ಷದಲ್ಲಿ ಬೆಂಗಳೂರಿನಲ್ಲಿ ಸೈಬರ್‌ ಅಪರಾಧಗಳ ಪ್ರಮಾಣ ಬರೊಬ್ಬರಿ ಶೇ.450ರಷ್ಟು ಏರಿಕೆ ಕಂಡಿದೆ. ಆದರೆ ಸೈಬರ್‌ ಅಪರಾಧಿಗಳ ಚಾಕಚಕ್ಯತೆ ಎಷ್ಟಿದೆಯೆಂದರೆ ಪ್ರಕರಣವನ್ನು ಭೇದಿಸುವ ಪ್ರಮಾಣ ಬಹುತೇಕ ಶೂನ್ಯವಾಗಿದೆ.

ಈ ಕುರಿತು ರಾಜಾಜಿನಗರದ ಶಾಸಕ ಎಸ್‌. ಸುರೇಶ್‌ ಕುಮಾರ್‌ ಅವರ ಪ್ರಶ್ನೆಗೆ ಗೃಹಸಚಿವ ಡಾ. ಜಿ. ಪರಮೇಶ್ವರ್‌ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ. 2017ರಲ್ಲಿ ಬೆಂಗಳೂರಿನಲ್ಲಿ 2,742 ಪ್ರಕರಣಗಳು ದಾಖಲಾಗಿದ್ದವು. 2018ರಲ್ಲಿ 5,252, 2019ರಲ್ಲಿ 10,553, 2020ರಲ್ಲಿ 8892, 2021ರಲ್ಲಿ 6422 ಹಾಗೂ 2022ರಲ್ಲಿ 9940 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಅದಾಗಲೇ 6,226 ಪ್ರಕರಣಗಳು ದಾಖಲಾಗಿದ್ದು, ವರ್ಷ ಮುಗಿಯುವ ವೇಳೆಗೆ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯುವ ಅಂದಾಜಿದೆ.‌

ಇದನ್ನೂ ಓದಿ: Cyber Crime: ಇವಳೇ ನನ್ನ ಹೆಂಡತಿ ಎಂದು ನಂಬಿ 91 ಲಕ್ಷ ರೂ. ಕಳೆದುಕೊಂಡ ಟೆಕ್ಕಿ

ಒಟ್ಟು ದಾಖಲಾಗಿರುವ ಪ್ರಕರಣಗಳ ಸರಾಸರಿ ನೋಡಿದರೆ 2017ರಲ್ಲಿ ಪ್ರತಿ ದಿನಕ್ಕೆ ಸರಾಸರಿ 7.5 ಪ್ರಕರಣಗಳು ದಾಖಲಾಗುತ್ತಿದ್ದವು. ನಂತರ ಪ್ರತಿ ವರ್ಷ ಕ್ರಮವಾಗಿ ಪ್ರತಿದಿನ 14.3, 28.92, 24.36, 17.59 ಹಾಗೂ 27.23 ಪ್ರಕರಣಗಳು ದಾಖಲಾಗಿವೆ. 2023 ರ ಐದು ತಿಂಗಳ ಲೆಕ್ಕವನ್ನು ನೋಡಿದರೆ ಪ್ರತಿದಿನ ಸರಾಸರಿ 41.56 ಪ್ರಕರಣಗಳು ದಾಖಲಾಗುತ್ತಿವೆ. 2017ರ ಹೋಲಿಕೆಯಲ್ಲಿ ಶೇ.450 ಹೆಚ್ಚಿಗೆಯಾಗಿದೆ ಎಂದು ಗೃಹಸಚಿವರು ಮಾಹಿತಿ ನೀಡಿದ್ದಾರೆ.

ಪ್ರಕರಣಗಳು ಇಷ್ಟು ದಾಖಲಾಗುತ್ತಿವೆಯಾದರೂ ಅದರಲ್ಲಿ ಅಪರಾಧಿಗಳನ್ನು ಗುರುತಿಸಲು ಬಹುತೇಕ ಸಾಧ್ಯವಾಗುತ್ತಿಲ್ಲ. 2017ರಿಂದ ಕ್ರಮವಾಗಿ ಪ್ರತಿ ವರ್ಷ 895, 1393, 2,602, 3,308, 2,145, 1,536 ಹಾಗೂ 16 ಪ್ರಕರಣಗಳನ್ನು ಭೇದಿಸಲಾಗಿದೆ. ಅಂದರೆ ಅದರಲ್ಲಿ ಸಿಕ್ಕಿಹಾಕಿಕೊಂಡಿರುವ ಹಣವನ್ನು ಸಾಕಷ್ಟು ಪ್ರಮಾಣದಲ್ಲಿ ಹಿಂದಿರುಗಿಸಿಕೊಡುವ ಅಥವಾ ಮೋಸದ ಮೂಲವನ್ನು ಪತ್ತೆ ಹಚ್ಚುವ ಕೆಲಸ ಆಗಿದೆ. ಆದರೆ ಅಪರಾಧಿಗಳನ್ನು ಹಿಡಿಯುವಲ್ಲಿ ಸಾಧ್ಯವಾಗಿಲ್ಲ. 2017ರಲ್ಲಿ 2 ಆರೋಪಿಗಳು ತಪ್ಪಿತಸ್ಥರು ಎಂದು ಸಾಬೀತಾಗಿದೆ. ನಂತರದಲ್ಲಿ ಪ್ರತಿ ವರ್ಷ ಕ್ರಮವಾಗಿ 7,7, 2, 3, 5 ಹಾಗೂ 0 ಅಪರಾಧಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಇಂಟಲಿಜೆನ್ಸ್ ಬಳಸಿ ಇಂಟಲಿಜೆಂಟ್ ಆಗೋಣ

ಸೈಬರ್‌ ಅಪರಾಧಗಳಲ್ಲಿ ಹೆಚ್ಚಿನ ಪ್ರಮಾಣ ಡೆಬಿಟ್‌ ಕಾರ್ಡ್‌ ಹಾಗೂ ಕ್ರೆಡಿಟ್‌ ಕಾರ್ಡ್, ಆನ್‌ಲೈನ್‌ ಹಣ ವರ್ಗಾವಣೆಗೆ ಸಂಬಂಧಿಸಿದ್ದಾಗಿದೆ. ನಂತರದಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ, ಉದ್ಯಮ ಅವಕಾಶದ ವಂಚನೆ, ಉಡುಗೊರೆ ಕೊಡುವುದಾಗಿ ನಂಬಿಸಿ ವಂಚನೆ, ಕಾರ್ಡ್‌ ಸ್ಕಿಮ್ಮಿಂಗ್‌, ಮದುವೆಯಾಗುವುದಾಗಿ ನಂಬಿಸಿ ಹಣ ಕೀಳುವುದು ಹಾಗೂ ವಂಚನೆ, ಸಿಮ್‌ ಕ್ಲೋನಿಂಘ್‌, ಲಾಟರಿ ವಂಚನೆಗಳು ಸೇರಿವೆ.

ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿ National Cyber Crime Reporting Portal ಅನ್ನು ತೆರೆಯಲಾಗಿದೆ. 1930 ಹಾಗೂ 112 ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಇಲಾಖೆ ತಿಳಿಸಿದೆ.

Exit mobile version