ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ʼಬಿಪರ್‌ಜಾಯ್ʼ ಚಂಡಮಾರುತ (Cyclone Biporjoy) ಸೃಷ್ಟಿಯಾಗಿದ್ದು, ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ.
ಮೋಚಾ ಸೈಕ್ಲೋನ್ ನಂತರ ಸೃಷ್ಟಿಯಾಗಿರುವ ಬಿಪರ್‌ಜಾಯ್ ಚಂಡಮಾರುತದ ಪರಿಣಾಮ ಕರ್ನಾಟಕದ ವಿವಿಧೆಡೆ ನಾಳೆಯಿಂದ ಜೂನ್ 10ರವರೆಗೆ ಮೂರು ದಿನ ಜೋರು ಮಳೆಯಾಗಬಹುದು. ಈ ಸೈಕ್ಲೋನ್ ವೇಗ ಆರಂಭದಲ್ಲಿ ಪ್ರತಿ ಗಂಟೆಗೆ 45-55 ಕಿಲೋ ಮೀಟರ್ ಇರಲಿದ್ದು, ಗರಿಷ್ಠ 145-155 ಕಿಲೋಮೀಟರ್‌ವರೆಗಿನ ವೇಗದಿಂದ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕದ ದಕ್ಷಿಣ ಒಳನಾಡ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ 2-3 ದಿನ ಮಳೆ ಜೊತೆಗೆ ಸಮುದ್ರದಲ್ಲಿ ಭಾರಿ ಅಲೆಗಳ ಎಚ್ಚರಿಕೆ ನೀಡಲಾಗಿದೆ. 4 ದಿನ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಚಂಡಮಾರುತದ ಪರಿಣಾಮದಿಂದ ಮುಂಗಾರು ತಡವಾಗಲಿದೆ. ಮುಂಗಾರು 4 ದಿನ ತಡವಾಗಿ ಕೇರಳ ಪ್ರವೇಶ ಮಾಡಲಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶ ಮಾಡುತ್ತಿತ್ತು. ಈ ಬಾರಿ ಅದೂ ತಡವಾಗಿದೆ. ಚಂಡಮಾರುತ ಸೃಷ್ಟಿಸಿರುವ ಗಾಳಿಯು ತೇವಾಂಶವನ್ನು ಚದುರಿಸುವುದರಿಂದ ಈಗಾಗಲೇ ರೂಪುಗೊಂಡಿರುವ ಮೋಡಗಳು ಕೂಡ ಚದುರಲಿವೆ. ಇದರ ಪ್ರಭಾವದಿಂದ ಮುಂಗಾರು ಕೂಡ ಪ್ರಬಲವಾಗಿರದೇ ದುರ್ಬಲವಾಗುವ ಸಾಧ್ಯತೆ ಇದೆ.
ಬಿಪರ್‌ಜಾಯ್ ಚಂಡಮಾರುತ ನೇರವಾಗಿ ಕರಾವಳಿಯನ್ನು ಅಪ್ಪಳಿಸುವುದಿಲ್ಲ. ಸಮುದ್ರ ತೀರದಿಂದ ಸ್ವಲ್ಪ ದೂರದಲ್ಲಿರಲಿದೆ. ಆದ್ದರಿಂದ ಹೆಚ್ಚಿನ ಅಪಾಯವಿಲ್ಲ. ಆದರೆ ಇದು ನೈರುತ್ಯ ಅರಬಿ ಸಮುದ್ರದಲ್ಲಿ ಸೃಷ್ಟಿಯಾಗಿದ್ದು, ಮಳೆಮಾರುತಗಳನ್ನು ಭಾರತದ ತೀರದಿಂದ ಆಚೆಗೆ ಹಾರಿಸಲಿದೆ. ಹೀಗಾಗಿ ಮಳೆ ಕೊರತೆಯಾಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ: Monsoon Forecast 2023 : ಮುಂಗಾರು ಮಳೆಯನ್ನು ಹವಾಮಾನ ಇಲಾಖೆ ಹೇಗೆ ನಿರ್ಧರಿಸುತ್ತದೆ?