ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇಶದಲ್ಲೇ ಶ್ರೀಮಂತ ಶಾಸಕ (Richest MLA In India) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ (NEW) ವರದಿ ತಯಾರಿಸಿದ್ದು, 1,413 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಡಿಕೆಶಿ ಅವರು ದೇಶದಲ್ಲೇ ಅತಿ ಶ್ರೀಮಂತ ಶಾಸಕ ಎನಿಸಿದ್ದಾರೆ.
ದೇಶದ ಶಾಸಕರ ಆಸ್ತಿ ಕುರಿತು ವರದಿ ತಯಾರಿಸಿದ್ದು, ದೇಶಾದ್ಯಂತ ಅತಿ ಶ್ರೀಮಂತ ಶಾಸಕರ ಟಾಪ್ 20ರ ಪಟ್ಟಿಯಲ್ಲಿ ಕರ್ನಾಟಕದವರೇ 12 ಶಾಸಕರಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಅಷ್ಟೇ ಅಲ್ಲ, ಸಿರಿವಂತ ಶಾಸಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಕೂಡ ಕರ್ನಾಟಕದ ಶಾಸಕರದ್ದೇ ಎಂಬುದು ಮತ್ತೊಂದು ವೈಶಿಷ್ಟ್ಯವಾಗಿದೆ. ಮೊದಲ ಸ್ಥಾನದಲ್ಲಿ ಡಿಕೆಶಿ ಇದ್ದರೆ, ಗೌರಿಬಿದನೂರು ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ (1,267 ಕೋಟಿ ರೂ.) ದ್ವಿತೀಯ ಹಾಗೂ ಬೆಂಗಳೂರಿನ ಗೋವಿಂದರಾಜ ನಗರ ಕಾಂಗ್ರೆಸ್ ಶಾಸಕ ಪ್ರಿಯಾ ಕೃಷ್ಣ (1,156 ಕೋಟಿ ರೂ.) ಅವರು ತೃತೀಯ ಸ್ಥಾನದಲ್ಲಿದ್ದಾರೆ.
ಟಾಪ್ 20ರಲ್ಲಿ ಇರುವ ಕರ್ನಾಟಕ ಶಾಸಕರು ಯಾರು?
ದೇಶದ 20 ಅಗ್ರ ಸಿರಿವಂತ ಶಾಸಕರ ಪಟ್ಟಿಯಲ್ಲಿ ಡಿ.ಕೆ.ಶಿವಕುಮಾರ್, ಕೆ.ಎಚ್.ಪುಟ್ಟಸ್ವಾಮಿ ಗೌಡ ಹಾಗೂ ಪ್ರಿಯಾ ಕೃಷ್ಣ ಜತೆಗೆ ಇನ್ನೂ 9 ಶಾಸಕರಿದ್ದಾರೆ. ಹೆಬ್ಬಾಳ ಕಾಂಗ್ರೆಸ್ ಶಾಸಕ ಬಿ.ಎಸ್.ಸುರೇಶ್ (648 ಕೋಟಿ ರೂ.), ಶಾಂತಿ ನಗರ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ (439 ಕೋಟಿ ರೂ.), ಬೇಲೂರು ಬಿಜೆಪಿ ಶಾಸಕ ಎಚ್.ಕೆ.ಸುರೇಶ್ (435 ಕೋಟಿ ರೂ.), ಹಳಿಯಾಳ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ (363 ಕೋಟಿ ರೂ.), ಹನೂರು ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್ (316 ಕೋಟಿ ರೂ.), ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (313 ಕೋಟಿ ರೂ.), ದಾವಣಗೆರೆ ದಕ್ಷಿಣ ಕಾಂಗ್ರೆಸ್ ಶಾಸಕ ಶ್ಯಾಮನೂರು ಶಿವಶಂಕರಪ್ಪ (312 ಕೋಟಿ ರೂ.), ಬೆಂಗಳೂರಿನ ವಿಜಯ ನಗರ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ (296 ಕೋಟಿ ರೂ.) ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಅವರು (293 ಕೋಟಿ ರೂ.) ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ: Top 8 Richest States: ದೇಶದ ಟಾಪ್ 8 ಶ್ರೀಮಂತ ರಾಜ್ಯಗಳು! ಕರ್ನಾಟಕಕ್ಕೆ ಯಾವ ಸ್ಥಾನ?
ಅತಿ ಬಡವ ಶಾಸಕ ಯಾರು?
ಪಶ್ಚಿಮ ಬಂಗಾಳದ ಇಂಡಸ್ ವಿಧಾನಸಭೆ ಕ್ಷೇತ್ರದ ಶಾಸಕ ನಿರ್ಮಲ್ ಕುಮಾರ್ ಧಾರಾ ಅವರು ದೇಶದ ಅತಿ ಬಡವ ಶಾಸಕ ಎನಿಸಿದ್ದಾರೆ. ಇವರ ಆಸ್ತಿಯ ಮೌಲ್ಯ ಕೇವಲ 1,700 ರೂ. ಆಗಿದೆ. ಕರ್ನಾಟಕದಲ್ಲಿ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಅತಿ ಕಡಿಮೆ ಆಸ್ತಿ ಹೊಂದಿರುವ ಶಾಸಕಿ ಎನಿಸಿದ್ದಾರೆ. ಇವರ ಆಸ್ತಿ ಮೌಲ್ಯ 30 ಲಕ್ಷ ರೂ. ಆಗಿದೆ. ಆಯಾ ಶಾಸಕರು ಚುನಾವಣೆ ಆಯೋಗಕ್ಕೆ ನೀಡಿದ ಮಾಹಿತಿ ಆಧರಿಸಿ ವರದಿ ತಯಾರಿಸಲಾಗಿದೆ. ದೇಶದಲ್ಲಿ ಒಬ್ಬ ಶಾಸಕನ ಸರಾಸರಿ ಆಸ್ತಿ 64.3 ಕೋಟಿ ರೂ. ಆಗಿದೆ. ದೇಶದಲ್ಲಿ 100 ಕೋಟಿ ರೂ. ಆಸ್ತಿ ಹೊಂದಿರುವ ಶಾಸಕರ ಪೈಕಿ ಶೇ.14ರಷ್ಟು ಶಾಸಕರು ಕರ್ನಾಟಕದವರೇ ಆಗಿದ್ದಾರೆ ಎಂದು ವರದಿ ತಿಳಿಸಿದೆ.