ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಪೂರ್ಣಗೊಂಡ ನಂತರದಲ್ಲಿ ಇದೀಗ ಮತ್ತೆ ನಾಯಕತ್ವದ ಚರ್ಚೆಗಳು ಆರಂಭವಾಗಿವೆ. 21 ದಿನ ಕರ್ನಾಟಕದಲ್ಲಿ ಸಾಗಿದ ಯಾತ್ರೆಯ ಕುರಿತು ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಡಿರುವ ಮಾತುಗಳು ಅನೇಕ ಚರ್ಚೆಗೆ ಕಾರಣವಾಗಿವೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, ಈ ಯಾತ್ರೆ ಒಂದು ಆಂದೋಲನವಾಗಿತ್ತು. ಇದು ಜನ ಸಂಪರ್ಕ ಯಾತ್ರೆ ಮಾತ್ರವಲ್ಲ, ದೇಶಕ್ಕೆ ಒಂದು ಹೋರಾಟ ಆಗಿತ್ತು. ಇಡೀ ದೇಶ ಕೋಮು ಸಾಮರಸ್ಯ ಬೆಸೆಯುವತ್ತ ಗಮನಹರಿಸುವಂತೆ ಮಾಡಿದೆ ಎಂದರು.
ಭಾರತ್ ಜೋಡೋ ಯಾತ್ರೆಗೆ ಅನೇಕ ಕಾಂಗ್ರೆಸ್ ನಾಯಕರು ಸರಿಯಾದ ಸಹಕಾರ ನೀಡಿಲ್ಲ ಎಂಬ ವರದಿಗಳು ಇವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಎಲ್ಲರೂ ಸಹಕಾರ ಕೊಟ್ಟ ಕಾರಣದಿಂದ ಈ ಯಾತ್ರೆ ಆಗಿದೆ. ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡಿದ್ದಾರೆ. ಒಬ್ಬರು 10 ಗಾಡಿ ಜನ ತಂದರೆ, ಮತ್ತೊಬ್ಬರು 300 ಗಾಡಿ ಜನ ಕರೆತಂದಿದ್ದರು. ಕೆಲವರು 10 ಕಿ.ಮೀ ನಡೆದರೆ ಮತ್ತೊಬ್ಬರು 500 ಕಿ.ಮೀ ನಡೆದಿದ್ದಾರೆ. ಎಲ್ಲರ ಕೆಲಸದ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಯಾರು ಯಾವ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಸಂಪೂರ್ಣ ಇದೆ. ಪ್ರತಿ ಶಾಸಕ, ಮಾಜಿ ಶಾಸಕ ಹಾಗೂ ಪರಿಷತ್ ಸದಸ್ಯರು ಜನರನ್ನು ಕರೆತರುವಂತೆ ಮಾಡಿದ್ದೇವೆ ನಾನು ಅಧ್ಯಕ್ಷನಾಗಿದ್ದ ಕಾರಣ ನನ್ನ ಮೇಲೆ ಹೆಚ್ಚು ಜವಾಬ್ದಾರಿ ಇತ್ತು’ ಎಂದಿದ್ದಾರೆ.
ಯಾತ್ರೆಗೂ ಮುನ್ನ ಇದೇ ರೀತಿಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದ ಮಾತು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಯಾತ್ರೆಗೆ ಯಾರ‍್ಯಾರು ಶ್ರಮಿಸುತ್ತಾರೆ ಎನ್ನುವುದನ್ನು ಕ್ಷೇತ್ರವಾರು ಸಮೀಕ್ಷೆ ಮಾಡಲಾಗುತ್ತದೆ. ಅದರ ಆಧಾರದಲ್ಲಿ ಭವಿಷ್ಯದಲ್ಲಿ ಟಿಕೆಟ್ ಹಂಚಿಕೆ ನಡೆಯುತ್ತದೆ ಎಂಬ ಅರ್ಥದಲ್ಲಿ ಶಿವಕುಮಾರ್ ಹೇಳಿದ್ದರು.
ಆದರೆ, ಕಾಂಗ್ರೆಸ್‌ನಲ್ಲಿ ಈ ಮಾತು ಸಂಚಲನ ಸೃಷ್ಟಿಸಿತ್ತು. ಒಬ್ಬರಿಂದಲೇ ಟಿಕೆಟ್ ಅಂತಿಮ ಆಗುವುದಿಲ್ಲ. ಕಾಂಗ್ರೆಸ್‌ನಲ್ಲಿ ಇದೆಲ್ಲ ನಡೆಯುವುದಿಲ್ಲ ಎಂಬಂತಹ ಮಾತುಗಳು ಬಿರುಸುಗೊಂಡು, ಡಿ.ಕೆ. ಶಿವಕುಮಾರ್ ಅವರ ನಾಯಕತ್ವವನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿದ್ದವು. ಯಾತ್ರೆಯ ನಂತರ ಇದೀಗ, ಎಲ್ಲರ ದಾಖಲೆಗಳು ತಮ್ಮ ಬಳಿ ಇದೆ ಎಂದು ಹೇಳಿರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಭಾರತ್ ಜೋಡೋ ನಂತರ ಬಸ್ ಯಾತ್ರೆಗೆ ಸಿದ್ಧವಾಗಿರುವುದರ ಕುರಿತು ಮಾತನಾಡಿದ ಶಿವಕುಮಾರ್, ಈ ಕುರಿತು ಮುಂದೆ ಮಾತನಾಡುತ್ತೇನೆ. ದೆಹಲಿಯಲ್ಲಿ ಈ ಕುರಿತು ಸಭೆ ಇದೆ. ಅಲ್ಲಿ ತೀರ್ಮಾನ ಮಾಡಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ರಾಜ್ಯದ ನಾಯಕರನ್ನು ತೊಡಗಿಸಿಕೊಳ್ಳುವ ಸಲುವಾಗಿ ಕೇಂದ್ರದಿಂದಲೇ ಸೂಚನೆ ಕೊಡಿಸುವ ಪ್ರಯತ್ನವನ್ನು ಶಿವಕುಮಾರ್ ಮಾಡಿದರು. ಈ ಉಪಾಯ ಸಾಕಷ್ಟು ಪ್ರಮಾಣದಲ್ಲಿ ಸಫಲವೂ ಆಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಯೋಜನೆಗಳನ್ನೂ ಕೇಂದ್ರ ನಾಯಕತ್ವದ ನಿರ್ಧಾರ ಎಂದೇ ಬಿಂಬಿಸುವ ಮಾರ್ಗವನ್ನು ಶಿವಕುಮಾರ್ ಅನುಸರಿಸುತ್ತಾರೆ ಎಂಬ ಮಾತುಗಳು ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿವೆ.
ಭಾರತ್ ಜೋಡೋ ಯಾತ್ರೆ ಕುರಿತು ಛಾಯಾಚಿತ್ರ ಪ್ರದರ್ಶನ ಯಾವಾಗ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉಯತ್ತರಿಸಿದ ಶಿವಕುಮಾರ್, ‘ ಇದಕ್ಕಾಗಿ ಒಂದು ಸಮಿತಿ ರಚಿಸಿ, ಯಾವ ಯಾವ ಘಟನೆಗಳು ಮುಖ್ಯ ಎಂದು ಆಯ್ಕೆ ಮಾಡಿ, ನಂತರ ಎಲ್ಲಾ ಜಿಲ್ಲೆಗಳಲ್ಲಿ ಛಾಯಾಚಿತ್ರ ಪ್ರದರ್ಶನ ಮಾಡಲಾಗುವುದು’ ಎಂದು ತಿಳಿಸಿದರು.
ಖರ್ಗೆ ಅವರು ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಐಸಿಸಿ ಮಹಾಧಿವೇಶನ ಮಾಡುವ ಕುರಿತು ಮಾತನಾಡಿ, ‘ ಖರ್ಗೆ ಅವರು ನಾಳೆ ಅಧಿಕಾರ ಸ್ವೀಕಾರ ಮಾಡಲಿ. ನಂತರ ನಾವು ಚರ್ಚೆ ಮಾಡಿ ನಿಮಗೆ ಮಾಹಿತಿ ನೀಡುತ್ತೇವೆ ‘ ಎಂದು ಹೇಳಿದರು.
ಇದನ್ನೂ ಓದಿ | ರಾಹುಲ್ ಗಾಂಧಿ ಫಿಟ್‌ನೆಸ್ ಬಗ್ಗೆ ಮಾತಾಡೋ ಹಾಗೇ ಇಲ್ಲ: ಡಿ.ಕೆ. ಶಿವಕುಮಾರ್ ಶ್ಲಾಘನೆ