ಬೆಂಗಳೂರು: ಜಿಎಸ್‌ಟಿ ದರ ಪರಿಷ್ಕಾರ ಇದೀಗ ದೇಶಾದ್ಯಂತ ಮಧ್ಯಮ ವರ್ಗದ ನಿದ್ದೆಗೆಡಿಸಿದ್ದು, ಸ್ಪಷ್ಟೀಕರಣ ನೀಡಲು ಕೇಂದ್ರ ಸರ್ಕಾರ ಹೆಣಗಾಡುತ್ತಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಪೈಪೋಟಿ ನಿರ್ಣಾಯಕ ಘಟ್ಟ ತಲುಪಿದೆ, ಆದೇಶಗಳನ್ನು ಹೊರಡಿಸಿ ಯು-ಟರ್ನ್ ಹೊಡೆಯುವ ರಾಜ್ಯ ಸರ್ಕಾರಕ್ಕೆ ಬಿಜೆಪಿ ವರಿಷ್ಠರು ಬಿಸಿ ಮುಟ್ಟಿಸಿದ್ದಾರೆ, ರವಿಚಂದ್ರನ್ ನಟನೆಯ ಯುಗಪುರುಷ ಚಲನಚಿತ್ರವನ್ನು ಹೋಲುವಂತೆ ಬಾಗಲಕೋಟೆಯಲ್ಲಿ ನಡೆದ ಕೊಲೆ ಮನಕಲಕುವಂತಿದೆ ಎಂಬುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ನಾನೂ CM ಆಗುವ ಅವಕಾಶವಿದೆ: ಸಿದ್ದರಾಮಯ್ಯ ತವರಲ್ಲೆ ಡಿ.ಕೆ. ಶಿವಕುಮಾರ್ ಹೇಳಿಕೆ
ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರಲು ತಾವು ಪ್ರಬಲ ಆಕಾಂಕ್ಷಿ ಎಂಬುದನ್ನು ಸ್ಪಷ್ಟವಾಗಿ ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದಲ್ಲಿ ಒಬ್ಬಿಬ್ಬರು ಮಾತ್ರವಲ್ಲ ಅನೇಕ ನಾಯಕರಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದ್ದಾರೆ. ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಡಿ.ಕೆ. ಶಿವಕುಮಾರ್ ಅನೇಕ ವಿಚಾರಗಳ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಸಹ ಈ ಕುರಿತು ಖಾಸಗಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿ, ಮುಖ್ಯಮಂತ್ರಿ ಆಗಬೇಕು ಎಂದು ಆಸೆ ಪಡುವುದು ತಪ್ಪಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜುಲೈ 21ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಬೇಡ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಚಾಟಿ ಬೀಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೨. ಯು-ಟರ್ನ್ ಆದೇಶಗಳಿಗೆ ಬಿಜೆಪಿ ವರಿಷ್ಠರ ಚಾಟಿ: ಆಡಳಿತ ಹಳಿಗೆ ತರಲು ಸಿಎಂ ಬೊಮ್ಮಾಯಿಗೆ ಸೂಚನೆ
ಇನ್ನೇನು ವಿಧಾನಸಭೆ ಚುನಾವಣೆಗಳು ಹತ್ತಿರ ಬರುತ್ತಿರುವಂತೆ, ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಭಾರತೀಯ ಜನತಾ ಪಾರ್ಟಿ(ಬಿಜೆಪಿ) ವರಿಷ್ಠರು ಚಿಂತಿತರಾಗಿದ್ದಾರೆ. ಸಚಿವರಷ್ಟೆ ಅಲ್ಲದೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಕ್ಕೂ ಬಾರದೆ ಆದೇಶಗಳು ಹೊರಡುತ್ತಿವೆ. ಮೂರು ದಿನದಲ್ಲಿ ಎರಡು ಆದೇಶಗಳನ್ನು 12ಗಂಟೆಗೂ ಕಡಿಮೆ ಅವಧಿಯಲ್ಲಿ ಹಿಂಪಡೆಯುವುದರಿಂದ ಸರ್ಕಾರದ ಮೇಲೆ ಜನಾಕ್ರೋಶ ಹೆಚ್ಚುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
3. GST rate hike | ದೇಶಾದ್ಯಂತ ಭುಗಿಲೆದ್ದಿರುವ ಜಿಎಸ್‌ಟಿ ಹೊರೆ ಚರ್ಚೆಗೆ ಉತ್ತರ ನೀಡುವಲ್ಲಿ ನಿರತ ಕೇಂದ್ರ ಸರ್ಕಾರ
ಜನಸಾಮಾನ್ಯರು ದಿನನಿತ್ಯ ಬಳಸುವ ವಸ್ತುಗಳ ಮೇಲೆ ಜಿಎಸ್‌ಟಿ ದರ ಹೆಚ್ಚಳದಿಂದ ಭುಗಿಲೆದ್ದಿರುವ ಆಕ್ರೋಶಕ್ಕೆ ಉತ್ತರ ನೀಡುವಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ. ಈ ಕುರಿತು ಸ್ಪಷ್ಟನೆಗಳನ್ನು ನೀಡಿರುವ ಸರ್ಕಾರ, ಅಕ್ಕಿ, ಗೋಧಿ, ಮೈದಾ ಇತ್ಯಾದಿ ಆಹಾರ ಧಾನ್ಯ ಅಥವಾ ಹಿಟ್ಟುಗಳನ್ನು ೨೫ ಕೆ.ಜಿ ಅಥವಾ ೨೫ ಲೀಟರ್‌ಗಿಂತ ಹೆಚ್ಚಿನ ತೂಕದ ಪ್ಯಾಕೇಟ್‌ನಲ್ಲಿ ಇಟ್ಟು ಮಾರಾಟ ಮಾಡುವುದಿದ್ದರೆ, ಅದಕ್ಕೆ ಜಿಎಸ್‌ಟಿ ಇರುವುದಿಲ್ಲ. ಏಕೆಂದರೆ ಅದು ಪ್ರಿ-ಪ್ಯಾಕೇಜ್ಡ್ ಮತ್ತು ಲೇಬಲ್ಡ್ ಸರಕಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಕ್ಕಿ, ಗೋಧಿ, ಬೇಳೆಕಾಳುಗಳು, ಮೊಸರು, ಲಸ್ಸಿ ಇತ್ಯಾದಿಗಳ ಚಿಲ್ಲರೆ ಮಾರಾಟಕ್ಕೆ (loose sale) ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. “ಜಿಎಸ್‌ಟಿ ಜಾರಿಯಾಗುವುದಕ್ಕೆ ಮೊದಲು ಅಕ್ಕಿ, ಗೋಧಿ ಇತರ ಆಹಾರ ಧಾನ್ಯಗಳ ಚಿಲ್ಲರೆ ಮಾರಾಟಕ್ಕೆ ಹಲವು ರಾಜ್ಯಗಳಲ್ಲಿ ತೆರಿಗೆ ಇತ್ತು. ಪಂಜಾಬ್ ಒಂದರಲ್ಲಿಯೇ ಈ ಮೂಲಕ ೨,೦೦೦ ಕೋಟಿ ರೂ.ಗೂ ಹೆಚ್ಚು ತೆರಿಗೆಯನ್ನು ಸಂಗ್ರಹಿಸಲಾಗುತ್ತಿತ್ತು. ಉತ್ತರ ಪ್ರದೇಶದಲ್ಲಿ ೭೦೦ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿತ್ತುʼʼ ಎಂದು ಅವರು ವಿವರಿಸಿದ್ದಾರೆ.
4. Rupee Falls| ಡಾಲರ್ ಎದುರು ರೂಪಾಯಿ ಮೌಲ್ಯ ಮೊದಲ ಬಾರಿಗೆ 80 ರೂ.ಗೆ ಕುಸಿತ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮೊಟ್ಟ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ ೮೦ ರೂ.ಗೆ ಮಂಗಳವಾರ ಕುಸಿತಕ್ಕೀಡಾಗಿದೆ. ಕಳೆದ ಕೆಲ ದಿನಗಳಿಂದ ೮೦ ರೂ.ಗಳ ಅಂಚಿನಲ್ಲಿದ್ದ ರೂಪಾಯಿ ಮೌಲ್ಯ ಇಂದು ಬೆಳಗ್ಗೆ ೮೦.೦೧ಕ್ಕೆ ಕುಸಿಯಿತು. ಸೋಮವಾರ ೭೯.೯೭ಕ್ಕೆ ಸ್ಥಿರವಾಗಿತ್ತು. ಇಂದು ೭೯.೮೫-೮೦-೧೫ ರೇಂಜಿನಲ್ಲಿ ರೂಪಾಯಿ ವಹಿವಾಟು ನಡೆಸುವ ನಿರೀಕ್ಷೆ ಇದೆ. ಡಾಲರ್ ಎದುರು ರೂಪಾಯಿ ಕುಸಿತದಿಂದ ಆಮದು ದುಬಾರಿಯಾಗುತ್ತದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
ವಿಸ್ತಾರ Explainer | ಡಾಲರ್ ಎದುರು ರೂಪಾಯಿ 80ಕ್ಕೆ ಕುಸಿದಿದ್ದೇಕೆ? ಇದರ ಪರಿಣಾಮವೇನು?
5. ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ತ್ರಿವಿಧ ಹೋರಾಟ: ಜುಲೈ 21ರಿಂದ ಚಾಲನೆ
ರಾಜ್ಯ ಹಾಗೂ ಕೇಂದ್ರಸರ್ಕಾರದ ವಿರುದ್ಧ ಈಗಾಗಲೆ ಕೆಲವು ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಮೂರು ವಿಧದಲ್ಲಿ ಹೋರಾಟಗಳನ್ನು ರೂಪಿಸಿದೆ. ಹಾಲಿನ ಉತ್ಪನ್ನಗಳ ದರವನ್ನು ಕೆಎಂಎಫ್ ಹೆಚ್ಚಳ ಮಾಡಿದ ನಂತರ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆಸಿದ ದಿಢೀರ್ ಸಭೆಯಲ್ಲಿ ಈ ಕುರಿತು ತೀರ್ಮಾನ ಮಾಡಲಾಗಿದೆ. ಬಿಜೆಪಿ ವಿರುದ್ಧ ಹೋರಾಟ ರೂಪಿಸಲು ಈಗಾಗಲೆ ಅನೇಕ ವಿಚಾರಗಳಿವೆ. ಇವುಗಳನ್ನು ಒಂದೊಂದಾಗಿ ಕೈಗೆತ್ತಿಕೊಂಡು ಜಾರಿ ಮಾಡಬೇಕಿದೆ. ರಾಜ್ಯದ ಜನರಿಗೆ ಸರ್ಕಾರದ ನಿಜಬಣ್ಣ ಬಯಲು ಮಾಡಬೇಕಿದೆ ಎಂದು ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
6. ಡಿಕೆಶಿ ಪುತ್ರಿ ಐಶ್ವರ್ಯಾ ಇ-ಮೇಲ್‌ಗೆ ಬಾಂಬ್ ಬೆದರಿಕೆ ಹಾಕಿದ್ದು 10ನೇ ತರಗತಿ ವಿದ್ಯಾರ್ಥಿ!
ಹುಚ್ಚ ವೆಂಕಟ್ ಹೆಸರಿನಲ್ಲಿ ಭಾನುವಾರ ಸಂಜೆ 6.30ಕ್ಕೆ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯರ ಇಮೇಲ್ ವಿಳಾಸಕ್ಕೆ ಬಂದಿದ್ದ ಬಾಂಬ್ ಬೆದರಿಕೆ ಮಸೇಜ್ ಮಾಡಿರುವುದು ಯಾರು ಎಂಬ ವಿಷಯ ಕೊನೆಗೂ ಬೆಳಕಿಗೆ ಬಂದಿದೆ. ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಮಾಡಿರುವುದು ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
7. ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್‌ನಿಂದ ರಿಲೀಫ್; ಆಗಸ್ಟ್ 10ರವರೆಗೆ ಇಲ್ಲ ಬಂಧನ ಭೀತಿ
ಬಿಜೆಪಿ ಮಾಜಿ ವಕ್ತಾರೆ, ಪ್ರವಾದಿ ವಿವಾದ ಹುಟ್ಟುಹಾಕಿದ್ದ ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್ ಸದ್ಯ ರಿಲೀಫ್ ನೀಡಿದೆ. ನೂಪುರ್ ಶರ್ಮಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಸಂಬಂಧಪಟ್ಟಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ. ಮುಂದಿನ ವಿಚಾರಣೆಯವರೆಗೆ ಅವರನ್ನು ಬಂಧಿಸುವಂತೆಯೂ ಇಲ್ಲ ಎಂದು ಮಧ್ಯಂತರ ಆದೇಶ ನೀಡಿದೆ. ಹಾಗೇ, ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿದೆ. ಹೀಗಾಗಿ ಅಲ್ಲಿಯವರೆಗೂ ನೂಪುರ್ ಶರ್ಮಾಗೆ ತಾವು ಅರೆಸ್ಟ್ ಆಗುವ ಭಯ ಇಲ್ಲದಂತಾಗಿದೆ. ಇದೇ ವೇಳೆ ನೂಪುರ್ ಶರ್ಮಾ ಅವರ ಹತ್ಯೆಗೆ ಸಂಚು ನಡೆಸಿ ಅಂತಾರಾಷ್ಟ್ರೀಯ ಗಡಿಯನ್ನು ನುಸುಳಿದ್ದ ಪಾಕಿಸ್ತಾನ ಮೂಲದ ವ್ಯಕ್ತಿಯನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
8. ಆನೆ ಹಂತಕರ ರಕ್ಷಣೆಗೆ ಸಂಸದ ಪ್ರಜ್ವಲ್ ರೇವಣ್ಣ ಒತ್ತಡ: ಸಂಸದೆ ಮೇನಕಾ ಗಾಂಧಿ ಆರೋಪ
ಆನೆಯನ್ನು ಕೊಂದ ತಮ್ಮ ಪಕ್ಷದ ಕಾರ್ಯಕರ್ತರನ್ನು ರಕ್ಷಿಸಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಬಿಜೆಪಿ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಆರೋಪಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೇನಕಾ ಗಾಂಧಿ ಎರಡು ಪುಟಗಳ ಪತ್ರ ಬರೆದಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥರಾದ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣವನ್ನು ಜಾಗೃತ ಸಮಿತಿಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರಜ್ವಲ್ ರೇವಣ್ಣ ತಮ್ಮ ಮೇಲಿನ ಆರೋಪನ್ನು ನಿರಾಕರಿಸಿದ್ದು, ಸಾಕ್ಷಿಯಿದ್ದರೆ ನೀಡಲಿ ಎಂದು ಸವಾಲೆಸೆದಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
9. Murder Case | ಪ್ರೀತಿ ಕೊಂದ ಕೊಲೆಗಾತಿ ಈಗ ಹೇಳೋ ಕತೆಗೆ ಸ್ಫೂರ್ತಿ; ಸುಂದರಿ ಹೆಂಡತಿಯ ಮರ್ಡರ್ ಕಹಾನಿ!
ಇದೊಂದು ನಂಬಿಕೆ ದ್ರೋಹದ ಪ್ರಕರಣ. ಅರ್ಧಾಂಗಿಯೇ ಪತಿಯ ಕೊಂದ ಮೋಸದ ಕತೆ. ಹೆಂಡತಿಯೇ ಸರ್ವಸ್ವ ಎಂದು ತಿಳಿದವನು, ಆಕೆಯಿಂದಲೇ ಮೋಸ ಹೋಗಿ ಪ್ರಾಣ ತೆತ್ತ ವ್ಯಥೆ. ಬಾಗಲಕೋಟೆಯಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದ ಪ್ರಕರಣವನ್ನು (Murder Case) ಪೊಲೀಸರು ಭೇದಿಸಿದ್ದು, ಹೆಂಡತಿಯೇ ಹಂತಕಿ ಎಂಬುದು ಬಯಲಾಗಿದೆ. ನೋಡಲು ಇದು ಅಪಘಾತ ಎಂದು ಅನ್ನಿಸಿದರೂ ಪೊಲೀಸರು ತನಿಖೆ ನಡೆಸಿದಾಗ ಕೊಲೆ ಎಂಬ ಸ್ಫೋಟಕ ಮಾಹಿತಿಯೊಂದು ಹೊರಗೆ ಬಂದಿದೆ. ಈಗ ಪ್ರವೀಣ್ ಪತ್ನಿ ಹಾಗೂ ಆಕೆಯ ಪ್ರಿಯಕರ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
10. ಸಾವಿರ ವರ್ಷಗಳ ಹಳೇ ದೇಗುಲ ಕಾಣೆ; ಕುಣಿಗಲ್‌ನಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ಹುಡುಕಾಟ!
ಚೋಳರ ಕಾಲದ ದೇಗುಲ ಕಾಣೆ ಆಗಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಕುಣಿಗಲ್‌ನ ವಿವಿಧ ಭಾಗಗಳಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಮಿಳುನಾಡಿನ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎ.ಟಿ.ಪೊನ್ ಮಾಣಿಕ್ಯವೇಲ್ ಎಂಬುವವರು ಕುಣಿಗಲ್‌ನ ಕೊತ್ತಗಿರಿ ಗ್ರಾಮದಲ್ಲಿ ರಾಜ ರಾಜ ಚೋಳ-1ನೇ ವಂಶಸ್ಥರು 949 ವರ್ಷಗಳ ಹಿಂದೆ ನಿರ್ಮಿಸಿದ್ದ ದೇವಸ್ಥಾನದ ಕುರುಹುಗಳು ಹಾಗೂ ದೇಗುಲದಲ್ಲಿದ್ದ ವಿಗ್ರಹವೂ ನಾಪತ್ತೆಯಾಗಿದೆ ಎಂದು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದರಿಂದ, ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್.ಗೋಪಾಲ್, ಡಾ.ಎಚ್.ಎಸ್.ಗೋಪಾಲರಾವ್ ಅವರು, ಕೊತ್ತಗೆರೆ ಗ್ರಾಮದ ಹಳ್ಳಿಮರ, ಗಂಗೇನಹಳ್ಳಿ, ದೊಡ್ಡಕೆರೆ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)