ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರಕಾರಿ ಕಾಲೇಜಿನಲ್ಲಿ ಮೂವರು ಹೆಣ್ಮಕ್ಕಳ ಮೇಲೆ ದುಷ್ಟನೊಬ್ಬ ಆ್ಯಸಿಡ್ (Acid attack) ಎರಚಿದ್ದಾನೆ. ಅಲೀನಾ ಸಿಬಿ, ಅರ್ಚನಾ, ಅಮೃತ ಎಂಬ ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡಿದ್ದಾನೆ.
ಈ ಮೂವರು ವಿದ್ಯಾರ್ಥಿನಿಯರು ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಹ್ಯಾಟ್ ಹಾಕಿದ್ದ ಕಿರಾತಕ ಏಕಾಏಕಿ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಹಾಕಿದ್ದಾನೆ. ಆ್ಯಸಿಡ್ ಮುಖಕ್ಕೆ ಬೀಳುತ್ತಿದ್ದ ವಿದ್ಯಾರ್ಥಿನಿಯರು ಕಿರುಚಾಡಿದ್ದಾರೆ.
ಆ್ಯಸಿಡ್ ದಾಳಿಗೆ ಒಳಗಾದ ವಿದ್ಯಾರ್ಥಿನಿಯರನ್ನು ಸ್ಥಳೀಯರು ಕಡಬ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಮೂವರು ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆಗೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕಾಲೇಜು ವರಾಂಡದಲ್ಲಿ ಪರೀಕ್ಷಾ ತಯಾರಿ ನಡೆಸುವ ವೇಳೆ ಈ ದುರ್ಘಟನೆ ನಡೆದಿದೆ.
ಪ್ರೇಮ ವೈಫಲ್ಯ
ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮ ವೈಫಲ್ಯವೇ ಕಾರಣ ಎನ್ನಲಾಗಿದೆ. ಆರೋಪಿ ಅಬೀನ್ ಅಲಿನಾಳನ್ನು ಟಾರ್ಗೆಟ್ ಮಾಡಿ ಬಂದಿದ್ದ. ಅಲಿನಾ ಹಾಗೂ ಅಬೀನ್ ಇಬ್ಬರು ಒಂದೇ ಕೋಮಿಗೆ ಸೇರಿದ್ದರು. ಕೇರಳ ಮಲಪುರಂ ಜಿಲ್ಲೆಯ ನೆಲಂಬೂರು ನಿವಾಸಿ ಅಬೀನ್ ಅಲಿನಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಅಲೀನಾ ಆತನ ಪ್ರೇಮವನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ಈ ಸಿಟ್ಟಿಗೆ ಪರೀಕ್ಷೆ ಟೈಂ ನೋಡಿಕೊಂಡು ಆ್ಯಸಿಡ್ ಹಾಕಿದ್ದಾನೆ.
ಆ್ಯಸಿಡ್ ಹಾಕಿ ಆರೋಪಿ ಅಬೀನ್ ಪರಾರಿ ಆಗಲು ಯತ್ನಿಸಿದ್ದ. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರ ಪೋಷಕರು ಈ ಘಟನೆಯಿಂದ ಕಂಗಲಾಗಿದ್ದು, ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ. ಕಾಲೇಜು ಆವರಣದಲ್ಲೇ ಆ್ಯಸಿಡ್ ದಾಳಿ ನಡೆದಿರುವುದನ್ನು ಕಂಡ ಇತರೆ ವಿದ್ಯಾರ್ಥಿನಿಯರು ಆತಂಕಕ್ಕೊಳಗಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ