ಬೆಂಗಳೂರು: ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ಪ್ರಕರಣಗಳಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಮಾತ್ರ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ ಎಂಬುದರ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಎನ್. ರವಿಕುಮಾರ್, ಮಸೂದ್ ಹಾಗೂ ಫಾಜಿಲ್ ಮನೆಗೂ ಸಿಎಂ ಭೇಟಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ದಕ್ಷಿಣ ಕನ್ನಡದಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೊಲೆಗಡುಕರ ಬಂಧನ ಶೀಘ್ರದಲ್ಲೇ ಆಗಲಿದೆ. ಅಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಫಾಜಿಲ್ ಮನೆಗೆ ಹೋಗಲಾಗದ ಸಂದರ್ಭ ಇತ್ತು. ನಾವು ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ. ಸಂದರ್ಭ ಬಂದಾಗ ಫಾಜಿಲ್, ಮಸೂದ್ ಮನೆಗೂ ಹೋಗುತ್ತಾರೆ ಎಂದು ತಿಳಿಸಿದರು.
ಸಂವಿಧಾನಾತ್ಮಕವಾಗಿ ಎಲ್ಲರೂ ಒಂದೇ ಎಂಬಂತೆ ನೋಡಬೇಕು. ಮನುಷ್ಯನಾಗಿ ಎಲ್ಲರನ್ನೂ ನೋಡಬೇಕು. ನಾನು ನನ್ನ ಅಭಿಪ್ರಾಯ ಮಾತ್ರ ಹೇಳುತ್ತೇನೆ, ಉಳಿದದ್ದನ್ನು ಅವರನ್ನೇ ಕೇಳಿ. ಈಗ ಪ್ರಶ್ನೆ ಮಾಡುತ್ತಿರುವವರು, ಅವರ ಕಾಲದಲ್ಲಿ ಹತ್ಯೆಗಳು ನಡೆದಾಗ ಏನಾದವು ಎಂದು ನೋಡಿಕೊಳ್ಳಲಿ. ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಯಾರಿಗೂ ಭೇದಭಾವ ಇಲ್ಲ
ಈ ಕುರಿತು ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯತೆಯೇ ನಮ್ಮ ನಿಲುವು. ಯಾರಿಗೂ ಬೇಧ-ಭಾವ ಮಾಡುವ ಪ್ರಶ್ನೆಯಿಲ್ಲ. ಇಂತಹ ವಿಚಾರಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಾಗ ಅವರು ಏನೇನು ಮಾಡಿದ್ದಾರೆ ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ | ಸುರತ್ಕಲ್ ಫಾಜಿಲ್ ಹತ್ಯೆ: ಮೊದಲ ಆರೋಪಿ ಅರೆಸ್ಟ್, ಇವನು ಹಂತಕರು ಬಂದ ಕಾರಿನ ಚಾಲಕ