ಮಂಗಳೂರು: ಮಂಗಳೂರು ಏರ್‌ಪೋರ್ಟ್ (Mangaluru Airport) ಕಚೇರಿಗೆ ಬಾಂಬ್ ಬೆದರಿಕೆ (Bomb Threat) ಬಂದಿದೆ. ಏರ್‌ಪೋರ್ಟ್ ಆವರಣದಲ್ಲಿ ಹಾಗೂ ಮೂರು ವಿಮಾನಗಳಲ್ಲಿಯೂ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇಮೇಲ್ (threat Email) ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅನುಮಾನ ಬಂದ ಕಡೆಗಳಲ್ಲಿ ತಪಾಸಣೆ ಕೂಡ ನಡೆಸಲಾಗಿದೆ.
ಉಗ್ರರ ಹೆಸರಲ್ಲಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕಳಿಸಲಾಗಿದೆ. “ಏರ್‌ಪೋರ್ಟ್ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಮೂರು ವಿಮಾನದಲ್ಲಿಯೂ ಬಾಂಬ್ ಇಟ್ಟಿದ್ದೇವೆ. ಇನ್ನು ಕೆಲವೇ ಗಂಟೆಗಳಲ್ಲಿ ದೊಡ್ಡ ಮಟ್ಟದ ರಕ್ತಪಾತ ಆಗಲಿದೆ” ಎಂದು ಬೆದರಿಕೆ ಒಡ್ಡಲಾಗಿತ್ತು. “ಟೆರರೈಸರ್ಸ್ 111” ಸಂಘಟನೆ ಈ ಕೃತ್ಯದ ಹಿಂದೆ ಇದೆ ಎಂದು ಬೆದರಿಕೆ ಇಮೇಲ್ ತಿಳಿಸಿತ್ತು.
ಎಪ್ರಿಲ್ 29ರಂದೇ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆ ಇಮೇಲ್ ಬಂದಿದ್ದು, ಅಂದೇ ತಪಾಸಣೆ ನಡೆದು ಇದೊಂದು ಹುಸಿ ಬೆದರಿಕೆ ಎಂಬುದು ರುಜುವಾತಾಗಿದೆ. ಇಮೇಲ್ ಸಂದೇಶದ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಂಬ್ ಬೆದರಿಕೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಬಾಂಬ್ ಬೆದರಿಕೆ ವಿಷಯವನ್ನು ಗೌಪ್ಯವಾಗಿಟ್ಟು ಪೊಲೀಸರು ಭದ್ರತೆ ಹೆಚ್ಚಿಸಿದ್ದರು.
ಎರಡು ದಿನಗಳ ಹಿಂದೆ ದಿಲ್ಲಿಯ ಶಾಲೆಗಳಿಗೆ ಇದೇ ರೀತಿಯ ಬಾಂಬ್ ಸ್ಫೋಟದ ಇಮೇಲ್ ಬೆದರಿಕೆ ಬಂದಿತ್ತು. ನೂರಾರು ಶಾಲೆಗಳಿಗೆ ಈ ಇಮೇಲ್ ಬಂದಿದ್ದು, ಇದರ ಮೂಲವನ್ನು ಪೊಲೀಸರು ಟ್ರೇಸ್ ಮಾಡಿದ್ದಾರೆ. ಬೆಂಗಳೂರಿನಲ್ಲಿಯೂ ಹಲವು ಶಾಲೆಗಳಿಗೆ ಇದೇ ರೀತಿಯ ಬೆದರಿಕೆ ಮೇಲ್ ಬಂದಿದ್ದುದನ್ನು ನೆನಪಿಸಿಕೊಳ್ಳಬಹುದು. ಇದುವರೆಗೂ ಇಂಥ ಬೆದರಿಕೆ ಮೇಲ್‌ಗಳು ನಿಜವಾದ ಉದಾಹರಣೆ ಇಲ್ಲ.
ಆದರೆ, ಭದ್ರತಾ ಪಡೆಗಳು ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದೆ ತೀವ್ರ ತಪಾಸಣೆ ನಡೆಸುತ್ತವೆ ಹಾಗೂ ಸೈಬರ್ ಪೊಲೀಸರು ಇಂಥ ಇಮೇಲ್‌ಗಳ ಮೂಲದ ಬೆನ್ನು ಬೀಳುತ್ತಾರೆ. ಆದರೆ ಹೆಚ್ಚಾಗಿ ಇಂಥ ಇಮೇಲ್‌ಗಳ ಮೂಲ ಪತ್ತೆಯಾಗದಂತೆ ವಿಪಿಎನ್ ಮೂಲಕ ಕಾರ್ಯಾಚರಿಸಿ, ಯಾವುದೋ ವಿದೇಶದ ಸರ್ವರ್‌ನಿಂದ ಬಂದದ್ದು ಎಂದು ಕಾಣಿಸುವಂತೆ ಮಾಡಲಾಗುತ್ತಿದೆ.
ಇದನ್ನೂ ಓದಿ: Bomb Threat: ದೆಹಲಿ ಶಾಲೆಗಳಿಗೆ ಬಾಂಬ್ ಬೆದರಿಕೆ; ಇ-ಮೇಲ್ ಮಾಡಿದವ 16 ವರ್ಷದ ಪೋರ?