Site icon Vistara News

MonkeyPox | ಈ ಸೋಂಕಿನ ಬಗ್ಗೆ ಅತಂಕಪಡಬೇಕೆ? ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳ್ತಾರೆ ಕೇಳಿ

ಮಂಗಳೂರು: ಭಾರತೀಯರು ಮಂಕಿಪಾಕ್ಸ್‌ (MonkeyPox) ಕಾಯಿಲೆಗೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ದೇಶದಲ್ಲಿ ಕಂಡುಬಂದ ಮಂಕಿಪಾಕ್ಸ್‌ ಪ್ರಕರಣಗಳ ಸಂಖ್ಯೆ ನಾಲ್ಕಕ್ಕೆ ಏರಿತ್ತು. ಈ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುತ್ತಿರುವುದು ಕಂಡು ಬಂದಿದ್ದು, ಇದು ಕೊರೊನಾ ರೀತಿಯ ಸಾಂಕ್ರಾಮಿಕ ಕಾಯಿಲೆ ಆಗಬಹುದೇ ಎಂಬ ಆತಂಕ ಮೂಡಿತ್ತು. ಈ ಹಿನ್ನೆಲೆಯಲ್ಲಿ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಾತನಾಡಿ ಮಂಕಿಪಾಕ್ಸ್‌ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.

ಮಂಕಿಪಾಕ್ಸ್‌ ಮೊದಲು ಕಂಡಿದ್ದು ಆಫ್ರಿಕಾದಲ್ಲಿ

ಕಳೆದ ಆರೇಳು ತಿಂಗಳುಗಳಿಂದ ವಿಶ್ವದ ಅನೇಕ ಭಾಗಗಳಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು ಕಂಡುಬರುತ್ತಿವೆ. ಈ ಸೋಂಕು ಮೊದಲು ಕಾಣಿಸಿಕೊಂಡಿದ್ದು ಆಫ್ರಿಕಾ ದೇಶಗಳಲ್ಲಿ. ಅಲ್ಲಿನ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಹಾಗೂ ಕಾಡುಗಳಿಗೆ ಹೋಗಿ ಬರುತ್ತಿದ್ದ ಜನರಿಗೆ ಮಂಗಗಳಿಂದ ಹರಡುತ್ತಿದ್ದ ಸೋಂಕು ಇದು. ನಂತರ ಇದು ನೈಜೀರಿಯಾ ದೇಶಕ್ಕೆ ಹಬ್ಬಿತು. ಈಗ ಅದು ನೈಜೀರಿಯಾ ದೇಶದೊಂದಿಗೆ ಸಂಪರ್ಕವನ್ನು ಹೊಂದಿರುವ ಅಮೆರಿಕಾ, ಯೂರೋಪ್‌, ಸಿಂಗಾಪುರ ಸೇರಿದಂತೆ ಅನೇಕ ದೇಶಗಳಿಗೆ ಹಬ್ಬಿದೆ. ಈವರೆಗೆ ವಿಶ್ವಾದ್ಯಂತ ಸುಮಾರು 11 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಈ ಸೋಂಕು ಇತ್ತೀಚೆಗೆ ಗಲ್ಫ್‌ ದೇಶಗಳಲ್ಲಿ ಕಂಡಿದ್ದೂ ವರದಿಯಾಗಿದ್ದು, ಅಲ್ಲಿಂದ ಭಾರತಕ್ಕೆ ಆಗಮಿಸಿದ ಕೆಲವರಲ್ಲಿ ಕಾಣಿಸಿಕೊಂಡಿದೆ. ಅವರ ಮೂಲಕ ಮಂಕಿಪಾಕ್ಸ್‌ ಭಾರತಕ್ಕೆ ಕಾಲಿಟ್ಟಿದೆ.

ಮಂಗಗಳಿಂದ ಮನುಷ್ಯರಿಗೆ ಹರಡುವ ಸಿಡುಬು!

ಈ ಹಿಂದೆ 50ರ ದಶಕದಲ್ಲಿ ಸಿಡುಬು ಎಂಬ ರೋಗ ವಿಶ್ವವನ್ನು ಕಾಡಿತ್ತು. ಇದು ಕೂಡ ಅದೇ ಜಾತಿಗೆ ಸೇರಿದ್ದು. ಆದರೆ, ಇದು ಮಂಗಗಳಿಂದ ಹರಡುವ ರೋಗವಾಗಿದೆ. ಈಗ ಕಾಣಿಸಿಕೊಂಡಿರುವ ರೋಗ ಈ ಹಿಂದೆ ಜಗತ್ತನ್ನು ಕಾಡಿದ ಸಿಡುಬಿನಷ್ಟು ಗಂಭೀರ ಕಾಯಿಲೆಯಲ್ಲ. ಆಗ ಸುಮಾರು 30%ರಷ್ಟು ಮಂದಿ ಸಿಡುಬು ಕಾಯಿಲೆಗೆ ಬಲಿಯಾಗಿದ್ದರು. ಆ ಬಳಿಕ ಈ ಕಾಯಿಲೆಗೆ ಲಸಿಕೆಯನ್ನು ಕಂಡುಹಿಡಿಯಲಾಗಿತ್ತು. ಈ ಮೂಲಕವೇ ಮನುಷ್ಯರಿಗೆ ಲಸಿಕೆ ನೀಡಲು ಆರಂಭಿಸಿದ್ದು.

ಮಂಕಿಪಾಕ್ಸ್‌ನ ರೋಗ ಲಕ್ಷಣಗಳು

ಈ ಹಿಂದೆ ಕಾಣಿಸಿಕೊಂಡ ಸಿಡುಬಿಗೂ ಈಗಿನ ಮಂಕಿಪಾಕ್ಸ್‌ಗೂ ಲಕ್ಷಣಗಳಲ್ಲಿ ಸಾಮ್ಯ ಕಾಣಿಸುತ್ತದೆ. ಮಂಕಿಪಾಕ್ಸ್‌ ವೈರಾಣು ದೇಹವನ್ನು ಪ್ರವೇಶಿಸಿದ ಎರಡು ವಾರದೊಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೈ-ಕೈ ನೋವು, ತಲೆನೋವು, ಜ್ವರ ಎಲ್ಲವೂ ಈ ಸೋಂಕಿನ ಲಕ್ಷಣಗಳು. ನಂತರ ದೇಹದ ಕೆಲವು ಭಾಗಗಳಲ್ಲಿ ಸಣ್ಣದಾಗಿ ಕೆಂಪಗಿನ ದಡಿಕೆಗಳು ಕಂಡು ಬರುತ್ತವೆ. ಅವುಗಳು ನೀರಿನ ಗುಳ್ಳೆಗಳಂತೆ ಬೆಳೆಯುತ್ತವೆ. ಈ ಗುಳ್ಳೆಗಳು ಎರಡರಿಂದ ನಾಲ್ಕು ವಾರಗಳ ಕಾಲ ದೇಹದ ಮೇಲೆ ಉಳಿದಿರುತ್ತವೆ. ಆಮೇಲೆ ಅದು ಒಣಗಿದ ಬಳಿಕ ಸಿಪ್ಪೆಗಳಂತೆ ಬಿದ್ದು ಹೋಗುತ್ತದೆ. ಆದರೆ ಈ ಗುಳ್ಳೆಗಳ ಕೆಲವು ಕಲೆಗಳು ಶಾಶ್ವತವಾಗಿ ಉಳಿಯಬಹದು. ಚಿಕನ್‌ ಪಾಕ್ಸ್‌ ಅಥವಾ ಸರ್ಪ ಸುತ್ತುಗಳಲ್ಲಿ ಕಾಣಿಸಿಕೊಳ್ಳುವಂಥ ಕಲೆಗಳು ಇಲ್ಲಿ ಉಂಟಾಗಬಹುದು. ಈ ಕಾಯಿಲೆ ಒಟ್ಟು ಒಂದು ತಿಂಗಳ ಕಾಲ ಮನುಷ್ಯನನ್ನು ಕಾಡಬಹುದು ಎಂದು ವೈದ್ಯರು ತಿಳಿಸಿದರು.

ಇದು ಕೋವಿಡ್‌ ಮಾದರಿಯಲ್ಲಿ ಹರಡುವುದಿಲ್ಲ

ಈ ಸೋಂಕು ಕೋವಿಡ್‌ ರೀತಿ ವೇಗವಾಗಿ ಹರಡುವುದಿಲ್ಲ. ಈ ಸೋಂಕಿಗೆ ಗುರಿಯಾದವರೊಂದಿಗೆ ಸಮೀಪದ ಸಂಪರ್ಕ ಹೊಂದಿದ್ದರೆ ಮಾತ್ರ ಈ ರೋಗ ಹರಡುತ್ತದೆ. ಸೋಂಕಿತರನ್ನು ನಾಲ್ಕು ವಾರ ಕಾಲ ಪ್ರತ್ಯೇಕವಾಗಿ ಇಟ್ಟರೆ (ಐಸೋಲೇಷನ್)‌ ಸೋಂಕಿನ ಹರಡುವಿಕೆಯನ್ನು ನಿಲ್ಲಿಸಬಹುದು.

ಮಂಕಿಪಾಕ್ಸ್‌ ಕುರಿತು ಆತಂಕ ಪಡುವ ಅಗತ್ಯವಿಲ್ಲ

ಮಂಕಿಪಾಕ್ಸ್ ಬಗ್ಗೆ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಈ ಸೋಂಕಿಗೆ ಸದ್ಯ ಯಾವುದೇ ಔಷಧಿ ಲಭ್ಯ ಇಲ್ಲ, ಆದರೆ ಇದಕ್ಕೆ ಯಾವುದೇ ಔಷಧಿಯ ಅಗತ್ಯವೂ ಇಲ್ಲ. ಇದು ಎರಡರಿಂದ ನಾಲ್ಕು ವಾರಗಳಲ್ಲಿ ತಾನಾಗಿಯೇ ವಾಸಿಯಾಗುವ ಕಾಯಿಲೆ. ಮಂಕಿಪಾಕ್ಸ್‌ ಪೀಡಿತರಿಗೆ ಜ್ವರ ಹೆಚ್ಚಾದಲ್ಲಿ ಪ್ಯಾರಸಿಟಮಾಲ್‌ ಸ್ವೀಕರಿಸಿದರೆ ಸಾಕು. ರೋಗ ಲಕ್ಷಣ ಇದ್ದವರು ಹತ್ತಿರದ ಆಸ್ಪತ್ರೆಗೆ ಹೋಗಿ ಮಾಹಿತಿ ನೀಡಿ ಪರೀಕ್ಷೆ ಮಾಡಿಕೊಂಡು ಸರ್ಕಾರಕ್ಕೆ ಮಾಹಿತಿ ನೀಡುವುದು ಉತ್ತಮ.

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಎಂದು ಹೇಳುವ ಜಾಹಿರಾತುಗಳಿಗೆ ಯಾರೂ ಕಿವಿ ಕೊಡಬೇಕಾಗಿರುವ ಅವಶ್ಯಕತೆಯಿಲ್ಲ. ಈ ಹಿಂದೆ ಸಿಡುಬು ಎಂಬ ರೋಗದ ವಿರುದ್ಧ ಲಸಿಕೆಯನ್ನು ಪಡೆದವರು ಚಿಂತಿಸುವ ಅಗತ್ಯವಿಲ್ಲ. ಆ ಲಸಿಕೆ ಮಂಕಿಪಾಕ್ಸ್‌ ವಿರುದ್ಧವೂ ಕೆಲಸ ಮಾಡುತ್ತದೆ. ಎಂದರೆ 42 ವರ್ಷಕ್ಕೆ ಮೇಲ್ಪಟ್ಟವರು ಚಿಂತಿಸುವ ಅವಶ್ಯಕತೆಯಿಲ್ಲ ಎಂದು ಕಕ್ಕಿಲಾಯ ಹೇಳಿದರು.

ಈ ಸೋಂಕು ಹರಡದಂತೆ ನಿಯಂತ್ರಿಸುವುದು ಹೇಗೆ?

ಹೊರ ದೇಶದಿಂದ ಭಾರತಕ್ಕೆ ಬರುವ ಭಾರತೀಯರಿಂದ ಮಾಹಿತಿ ಪಡೆಯಬೇಕು. ಆ ದೇಶದ ಸೋಂಕಿತರ ಜತೆ ಸಂಪರ್ಕದಲ್ಲಿದ್ದರೇ ಎಂಬ ಖಚಿತ ಮಾಹಿತಿಯನ್ನು ಪಡೆಯಬೇಕು. ಭಾರತದ ವಿಮಾನ ನಿಲ್ದಾಣಗಳಲ್ಲಿ ಈ ಬಗ್ಗೆ ಎಚ್ಚರ ವಹಿಸಬೇಕು. ಇದರ ಹೊರತಾಗಿ ಹೆಚ್ಚಿನ ತಪಾಸಣೆಗಳನ್ನು ನಡೆಸುವುದು ಬೇಡ. ರಾಜ್ಯಗಳ ಗಡಿಗಳಲ್ಲಿ, ಮಾಲ್‌ಗಳಲ್ಲಿ ಸೇರಿದಂತೆ ಉಳಿದೆಡೆ ತಪಾಸಣೆ ನಡೆಸಬೇಕಿಲ್ಲ. ಈ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾದರೆ ಸಾಕು ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಭರವಸೆ ನೀಡಿದರು.

ಇದನ್ನೂ ಓದಿ: Monkeypox | ಆತಂಕ ಬೇಕಿಲ್ಲ, ಕಟ್ಟೆಚ್ಚರ ವಹಿಸಿ; ಸಚಿವ ಸುಧಾಕರ್‌ ಸೂಚನೆ

Exit mobile version