ರಾಜೇಶ್ ಪುತ್ತೂರು, ಮಂಗಳೂರು
ಉಳ್ಳಾಲ ಕ್ಷೇತ್ರವಾಗಿದ್ದ ಈ ಕ್ಷೇತ್ರ ಕ್ಷೇತ್ರ ಪುನರ್‌ವಿಂಗಡಣೆಯ ಬಳಿಕ ವಿಟ್ಲ ಹಾಗೂ ಸುರತ್ಕಲ್ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ಒಳಗೊಂಡ ಮಂಗಳೂರು ವಿಧಾನಸಭಾ ಕ್ಷೇತ್ರವಾಗಿ ನಾಮಕರಣಗೊಂಡಿದೆ. ಮಂಗಳೂರು ನಗರದಿಂದ ಹತ್ತು ಕಿಲೋ ಮೀಟರ್ ದೂರದಲ್ಲಿ ಇರುವ ಕ್ಷೇತ್ರ. ಒಂದು ಕಡೆ ನೇತ್ರಾವತಿ ನದಿ ಮತ್ತೊಂದು ಕಡೆ ಅರಬ್ಬೀ ಸಮುದ್ರದ ಅಲೆಗಳ ಮೂಲಕ ಪ್ರವಾಸಿಗರನ್ನು ಆಕರ್ಶಿಸುವ ಪ್ರವಾಸಿ ತಾಣ ಕೂಡಾ ಹೌದು.
ರಾಣಿ ಅಬ್ಬಕ್ಕನ ರಾಜಧಾನಿಯಾಗಿದ್ದ ಈ ಉಳ್ಳಾಲದ ಸೋಮನಾಥೇಶ್ವರ ದೇವಾಲಯ ಹಾಗೂ ದೇವಾಲಯಕ್ಕೆ ತಾಗಿಕೊಂಡು ಇರುವ ಬಂಡೆಗಳಿಗೆ ಅಪ್ಪಳಿಸುವ ಸಮುದ್ರದ ಅಲೆಗಳ ಮೂಲಕ ಸೋಮೇಶ್ವರ ಬೀಚ್ ಇಂದು ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಸ್ಥಳ.
ಮುಸ್ಲಿಂ ಸಮುದಾಯದ ಪ್ರಾಬಲ್ಯ
ಉಳ್ಳಾಲದಲ್ಲಿ ಇರುವ 400 ವರ್ಷಗಳ ಇತಿಹಾಸವಿರುವ ಸಯ್ಯದ್ ಮಹಮ್ಮದ್ ಷರೀಫ್ ಮದನಿ ದರ್ಗಾ ಸರ್ವಧರ್ಮದ ಜನರ ಆರಾಧನಾ ಸ್ಥಳ. ಐದು ವರ್ಷಗಳಿಗೊಮ್ಮೆ ಇಲ್ಲಿ ನಡೆಯುವ ಉರೂಸ್‌ನಲ್ಲಿ ಎಲ್ಲ ಜಾತಿ, ಧರ್ಮದ ಜನರು ಭಾಗವಹಿಸುವ ಮೂಲಕ ಇಂದಿಗೂ ಸೌಹಾರ್ದ ಕೇಂದ್ರ ಎನ್ನುವುದನ್ನು ಸಾಬೀತು ಮಾಡಿದೆ. ಉಳ್ಳಾಲದಲ್ಲಿ ಇವಿಷ್ಟಿದ್ದರೆ, ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಐಟಿ ಪಾರ್ಕ್, ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳು ಇರುವ ಕಾರಣ ಇಲ್ಲಿ ಹಲವು ರಾಜ್ಯಗಳ ಹಲವು ಭಾಷೆಗಳ ಜನ ವಾಸವಾಗಿದ್ದಾರೆ. ಕೇರಳದ ಗಡಿಗೆ ತಾಗಿಕೊಂಡೇ ಇರುವ ಈ ಕ್ಷೇತ್ರದಲ್ಲಿ ಮಲೆಯಾಳಂ ಭಾಷೆಯ ಪ್ರಾಬಲ್ಯದ ಜತೆಗೆ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಯು.ಟಿ. ಖಾದರ್ ಸೋಲಿಲ್ಲದ ಸರದಾರ
ಈ ಕ್ಷೇತ್ರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಇರುವ ಏಕೈಕ ಭದ್ರ ಕೋಟೆ. ಮುಸ್ಲಿಮ್ ಮತಗಳೇ ಇಲ್ಲಿ ನಿರ್ಣಾಯಕವಾಗಿರುವ ಕಾರಣ ಕಳೆದ 14 ಚುನಾವಣೆಯಲ್ಲಿ 10 ಬಾರಿ ಮುಸ್ಲಿಂ ಅಭ್ಯರ್ಥಿಗೇ ಜಯವಾಗಿದೆ. ಒಮ್ಮೆ ಬಿಜೆಪಿ ಒಂದು ಬಾರಿ ಗೆದ್ದಿರುವುದನ್ನು ಹೊರತು ಪಡಿಸಿದರೆ ಬಳಿಕ ನಿರಂತರವಾಗಿ ಈಗಿನ ಶಾಸಕ ಯು.ಟಿ. ಖಾದರ್ ಹಾಗೂ ಅದಕ್ಕೂ ಮೊದಲು ಅವರ ತಂದೆ ಯು.ಟಿ. ಫರೀದ್ ಶಾಸಕರಾಗಿ ಕಾಂಗ್ರೆಸ್‌ಗೆ ಇಲ್ಲಿ ಸೋಲಿಲ್ಲದಂತೆ ನೋಡಿಕೊಂಡಿದ್ದಾರೆ. ಬಿಜೆಪಿಯ ಯಾವುದೇ ತಂತ್ರಗಾರಿಕೆ ಇಲ್ಲಿ ವರ್ಕೌಟ್ ಆಗಿಲ್ಲ.
ಶಾಸಕ ಯು.ಟಿ. ಫರೀದ್ ಅವರ ನಿಧನದ ಕಾರಣಕ್ಕೆ 2006ರಲ್ಲಿ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಯಿತು. ಯು.ಟಿ. ಫರೀದ್ ಅವರ ಪುತ್ರ ಯು.ಟಿ. ಖಾದರ್ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ಜೆಡಿಎಸ್‌ನ ಮುಸ್ಲಿಂ ಅಭ್ಯರ್ಥಿ ಪರ ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಸಾಕಷ್ಟು ಪ್ರಚಾರ ನಡೆಸಿದರೂ ಕಾಂಗ್ರೆಸಿನ ಮುಸ್ಲಿಂ ಮತ ಸೆಳೆಯುವಲ್ಲಿ ವಿಫಲರಾಗಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಚಂದ್ರಶೇಖರ್ ಉಚ್ಚಿಲ್ ಕೂಡಾ ಪೈಪೋಟಿ ನೀಡಲು ಸಾಧ್ಯವಾಗಿರಲಿಲ್ಲ.
2008 ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾದಾಗ ವಿಟ್ಲ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳು ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದವು. ತಂದೆ ಯು.ಟಿ.ಫರೀದ್ ಅವರಂತೆ ಶಾಸಕ ಯು.ಟಿ. ಖಾದರ್ ತನ್ನ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಓಡಾಡಿ ಜನರ ಜತೆ ಉತ್ತಮ ಸಂಪರ್ಕ ಬೆಳೆಸಿಕೊಂಡಿರುವ ಯು.ಟಿ. ಖಾದರ್, ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ, ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಹಿಂದುತ್ವದ ಹಲವು ಕಾರ್ಡ್ ಬಳಸಿತ್ತಾದರೂ ಕೊನೆಗೂ ಖಾದರ್ ಎದುರು ಸೋಲೊಪ್ಪಿಕೊಂಡಿತ್ತು.
ಗೆಲುವು-ಸೋಲಿಗೆ ಕಾರಣ
ಕೇವಲ ಒಂದು ಬಾರಿಯಷ್ಟೇ ಇಲ್ಲಿ ಗೆದ್ದು ಬೀಗಿದ್ದ ಬಿಜೆಪಿಗೆ ಪೂರ್ಣ ಪ್ರಮಾಣದಲ್ಲಿ ಹಿಂದು ಮತಗಳನ್ನು ಸೆಳೆಯಲು ಅಸಾದ್ಯವಾಗಿರುವುದು ಸೋಲಿಗೆ ಕಾರಣ. ಮುಸ್ಲಿಂ ಮತಗಳು ಇಲ್ಲಿ ನಿರ್ಣಾಯಕವಾಗಿದ್ದರೂ ಎಸ್‌ಡಿಪಿಐ ಪಕ್ಷ ಇಲ್ಲಿ ಮುಸ್ಲಿಂ ಮತವನ್ನು ಒಡೆಯಲು ವಿಫಲವಾಗಿತ್ತು. ಯು.ಟಿ. ಖಾದರ್ ಎಲ್ಲ ಧರ್ಮ ಹಾಗೂ ಸಮುದಾಯದ ಜನರ ಜತೆ ಉತ್ತಮ ಬಾಂಧವ್ಯ ಹೊಂದಿರುವುದು ಖಾದರ್ ಗೆಲುವಿಗೆ ಕಾರಣ. ಬಿಜೆಪಿಗೆ ಖಾದರ್ ಎದುರು ಸಮರ್ಥ ಅಭ್ಯರ್ಥಿಯ ಕೊರತೆ ಇಲ್ಲಿ ಕಾಣುತ್ತಿದೆ.
2023ರ ಚುನಾವಣೆಗೆ ಹಣಾಹಣಿ
ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಯು.ಟಿ. ಖಾದರ್ ಹೊರತುಪಡಿಸಿದರೆ ಬೇರೆ ಪರ್ಯಾಯ ನಾಯಕ ಇಲ್ಲ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಾಲು ದೊಡ್ಡದಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಸಂತೋಷ್ ಕುಮಾರ್ ಬೋಳಿಯಾರು ಈ ಭಾರಿಯೂ ಸ್ಪರ್ಧೆಗೆ ಇಳಿಯುವ ಇಂಗಿತ ಹೊಂದಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಈಗಾಗಲೇ ಓಡಾಟ ನಡೆಸುವ ಮೂಲಕ, ನಾನೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದಾರೆ. ಈ ಬಾರಿ ಹೇಗಾದರೂ ಮಾಡಿ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿರುವ ಬಿಜೆಪಿ, ಸಂಘ ಪರಿವಾರದ ನಾಯಕನಿಗೆ ಮಣೆ ಹಾಕುವ ಸಾದ್ಯತೆ ದಟ್ಟವಾಗಿದೆ.
ಸಾಕಷ್ಟು ವರ್ಷಗಳಿಂದ ಬಜರಂಗದಳದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಶರಣ್ ಪಂಪ್‌ವೆಲ್‌ಗೆ ಮಣೆ ಹಾಕುವ ಸಾದ್ಯತೆ ಇದೆ. ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಸತೀಶ್ ಕುಂಪಲ, ಹರೀಶ್ ಕುತ್ತಾರು ಹಾಗೂ ಚಂದ್ರಹಾಸ್ ಪಂಡಿತ್ ಹೌಸ್ ಈ ಬಾರಿ ತಮಗೆ ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೊನೆಯ ಕ್ಷಣದಲ್ಲಿ ಯಾವ ಬದಲಾವಣೆ ಆದರೂ ಸಂತೋಷ್ ಕುಮಾರ್ ಬೋಳಿಯಾರು ಅಥವಾ ಶರಣ್ ಪಂಪ್‌ವೆಲ್‌ಗೆ ಟಿಕೆಟ್ ಒಲಿಯೋ ಸಾದ್ಯತೆ ಹೆಚ್ಚು.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಯು.ಟಿ.ಖಾದರ್ (ಕಾಂಗ್ರೆಸ್)
2. ಸಂತೋಷ್ ಕುಮಾರ್ ರೈ ಬೋಳಿಯಾರ್, ಶರಣ್ ಪಂಪ್‌ವೆಲ್, ಸತೀಶ್ ಕುಂಪಲ, ಹರೀಶ್ ಕುತ್ತಾರು, ಚಂದ್ರಹಾಸ್ ಪಂಡಿತ್ ಹೌಸ್ (ಬಿಜೆಪಿ)
ಇದನ್ನೂ ಓದಿ | ಎಲೆಕ್ಷನ್ ಹವಾ | ಶಿವಮೊಗ್ಗ ಗ್ರಾಮಾಂತರ | ಹೆಚ್ಚುತ್ತಲೇ ಇದೆ BJP ಗೆಲುವಿನ ಅಂತರ, ಅವಕಾಶಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಕಾತರ