ಮಂಗಳೂರು: ವಿದೇಶಿ ಕರೆನ್ಸಿ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ಐವರು ಯುವಕರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ಒಟ್ಟು 42 ಸಿಮ್ ಕಾರ್ಡ್ ಖರೀದಿ ಮಾಡಿದ್ದ ಇವರು, ನಿಗೂಢ ಕಾರ್ಯ ಸಾಧನೆಗೆ ಬಳಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರಿನ ಕಡೆ ಪ್ರಯಾಣ ಮಾಡುತ್ತಿದ್ದ ಐವರು ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೋಲಿಸರು ಬಂಧಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹಾಗೂ ತಂಡದಿಂದ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ: BDA Site: ಬಿಡಿಎ ಎಡವಟ್ಟಿಗೆ 700 ಸೈಟ್ ಅತಂತ್ರ! ಮುಚ್ಚಲಾಗುತ್ತಾ ಕೆಂಪೇಗೌಡ ಲೇಔಟ್?
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗುಂಪಕಲ್ಲು ನಿವಾಸಿ ರಫೀಕ್ ಮಗ ರಮೀಝ್ (20), ಬಂಟ್ವಾಳ ತಾಲೂಕಿನ ಬಡಗಕಜೆಕರ್ ಗ್ರಾಮದ ಪಾಂಡವಕಲ್ಲು ನಿವಾಸಿ ಇಬ್ರಾಹಿಂ ಮಗ ಅಕ್ಬರ್ ಆಲಿ (24), ಬೆಳ್ತಂಗಡಿ ನಗರದ ಸಂಜಯನಗರ ನಿವಾಸಿ ಹಸನಬ್ಬ ಮಗ ಮೊಹಮ್ಮದ್ ಮುಸ್ತಫಾ (22), ಬೆಳ್ತಂಗಡಿ ತಾಲೂಕಿನ ಪಡಂಗಡಿ ಬದ್ರಿಯಾ ಮನ್ಝೀಲ್ ನಿವಾಸಿ ಇಸ್ಮಾಯಿಲ್ ಮಗ ಮಹಮ್ಮದ್ ಸಾಧಿಕ್ (27), ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ನಿವಾಸಿ 17 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.
ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗುಂಪು ಸೇರಿಕೊಂಡಿದ್ದ ಯುವಕರು ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಶಂಕೆ ಬಂದಿದೆ. ಹೀಗಾಗಿ ಈ ಯುವಕರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಬ್ಯಾಗ್‌ನಲ್ಲಿ ಬೇರೆ ಬೇರೆ ವಿಳಾಸದ ಸಿಮ್ ಕಾರ್ಡ್ ಹಾಗೂ ಮೊಬೈಲ್ ಇರುವುದು ಬೆಳಕಿಗೆ ಬಂದಿದೆ. ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಿದೇಶಿ ಕರೆನ್ಸಿ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ವಿಚಾರಣೆಗೆ ಯುವಕರನ್ನು ಒಳಪಡಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Assault Case : ಸಂಬಳ ಕೇಳಿದ್ದಕ್ಕೆ ಮರಕ್ಕೆ ಕಟ್ಟಿ ಹಾಕಿ ಮನಸ್ಸೋ ಇಚ್ಛೆ ಹಲ್ಲೆ
ಚಿಕ್ಕಮಗಳೂರು: ಸಂಬಳ ಕೇಳಿದ್ದಕ್ಕೆ (Salary Issue) ಹೋಟೆಲ್ ಕಾರ್ಮಿಕನಿಗೆ ಮನಸ್ಸೋ ಇಚ್ಛೆ ಹಲ್ಲೆ (Assault Case) ನಡೆಸಿರುವ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಸೋಮಲಾಪುರ ನಿರ್ಜನ ಪ್ರದೇಶದಲ್ಲಿ (Chikkmagalur News) ನಡೆದಿದೆ. ಸತೀಶ್ ಹಲ್ಲೆಗೊಳಗಾದ ಹೋಟೆಲ್ ಕಾರ್ಮಿಕರಾಗಿದ್ದಾರೆ.
ಸತೀಶ್ ಬೆಂಗಳೂರಿನ ಕೊಪ್ಪ ಮೂಲದ ಮಂಜು ಎಂಬುವವರ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಸಂಬಳದ ವಿಚಾರವಾಗಿ ಗಲಾಟೆಯಾಗಿದ್ದರಿಂದ ಕೆಲಸ ಬಿಟ್ಟು ಸತೀಶ್ ವಾಪಸ್ ಊರಿಗೆ ಬಂದಿದ್ದ. ಈ ನಡುವೆ ಕೆಲಸ ಮಾಡಿದ ಹಣವನ್ನು ಕೇಳಲು ಹೋಟೆಲ್ ಮಾಲೀಕ ಮಂಜುಗೆ ಫೋನ್ ಮಾಡಿದ್ದ.
ಇದರಿಂದ ಸಿಟ್ಟಿಗೆದ್ದ ಮಂಜು ಸಹೋದರ ಹಾಗೂ ಆತನ ನಾಲ್ಕೈದು ಸ್ನೇಹಿತರು ಹಣ ಕೊಡುತ್ತೇನೆ ಎಂದು ಕರೆಸಿಕೊಂಡಿದ್ದಾರೆ. ನಂತರ ರೆಸ್ಟೋರೆಂಟ್‌ಗೆ ಕರೆದುಹೋಗಿ ಕಂಠಪೂರ್ತಿ ಕುಡಿಸಿದ್ದಾರೆ. ಹಣ ಕೊಡುತ್ತೇನೆ ಎಂದು ಹೇಳಿ ಬೈಕ್‌ನಲ್ಲಿ ಕೂರಿಸಿಕೊಂಡು ಸೋಮಲಾಪುರದ ಸಮೀಪದ ಕಾಡಿನ ಮಧ್ಯೆ ಕರೆದು ಹೋಗಿದ್ದಾರೆ. ಬೈಕ್‌ನಿಂದ ಇಳಿಯುತ್ತಿದ್ದಂತೆ ಹಗ್ಗದಿಂದ ಕಟ್ಟಿ ಹಾಕಿ, ಬಟ್ಟೆ ಬಿಚ್ಚಿಸಿ ಸತೀಶ್‌ನನ್ನು ಮರಕ್ಕೆ ಕಟ್ಟಲಾಗಿದೆ. ಕಬ್ಬಿಣದ ರಾಡ್, ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ.
ಅರ್ಧ ದಿನ ಪೂರ್ತಿ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಸತೀಶ್ ಆರೋಪಿಸಿದ್ದಾರೆ. ಮಾತ್ರವಲ್ಲದೆ ವಾಪಸ್ ಬೆಂಗಳೂರಿಗೆ ಹೋಗಿ ಮಂಜು ಹೋಟೆಲ್‌ನಲ್ಲಿ ಕೆಲಸ ಮಾಡಬೇಕು. ಹೋಗದಿದ್ದರೆ ಇದೇ ರೀತಿ ಹಿಂಸೆ ಕೊಟ್ಟು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸತೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮನಸೋ ಇಚ್ಛೆ ಹಲ್ಲೆ ನಡೆಸಿದ ನಂತರ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬಿಟ್ಟು, ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: MLC Election: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ; ಜೆಡಿಎಸ್ ರಣತಂತ್ರ, ಉಸ್ತುವಾರಿಗಳ ನೇಮಕ
ಸದ್ಯ ಗಂಭೀರ ಗಾಯಗೊಂಡಿರುವ ಸತೀಶ್ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ