ಮಂಗಳೂರು: ಹಿಜಾಬ್ ಬೇಕೇಬೇಕೆಂದು ಹಟ ಹಿಡಿದಿರುವ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಂಗ್ರೆಸ್ ಶಾಸಕ ಯು ಟಿ ಖಾದರ್ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಪಾಕಿಸ್ತಾನ ಅಥವಾ ಸೌದಿಗೆ ಹೋಗಿ ನೋಡಿ. ಆಗ ನಿಮಗೆ ಗೊತ್ತಾಗುತ್ತದೆ ಎಂದು ಖಾದರ್ ಹೇಳಿದ್ದಾರೆ. ಹಿಜಾಬ್ ವಿಷಯದಲ್ಲಿ ಸಮಸ್ಯೆ ಇದ್ರೆ ವಿದ್ಯಾರ್ಥಿನಿಯರು ಕೋರ್ಟ್‌ಗೆ ಹೋಗಲಿ. ಡಿಸಿ, ವಿಸಿ ಬಳಿ ಸಮಸ್ಯೆ ಬಗೆಹರಿಯದೆ ಹೋದರೆ ಕಾನೂನು ಹೋರಾಟ ಮಾಡಲಿ ಎಂದು ಖಾದರ್ ಹೇಳಿದ್ದಾರೆ.
ಸಮಾಜದಲ್ಲಿ ಗೊಂದಲ ಸೃಷ್ಟಿಸಬಾರದು. ಈ ದೇಶದ ಕಾನೂನನ್ನು ಗೌರವಿಸಬೇಕು. ಇವರಿಗೆಲ್ಲ ಈ ದೇಶದಲ್ಲಿ ಇದ್ದು ಮುಕ್ತವಾಗಿ ಮಾತನಾಡುವ ಅವಕಾಶ ಇದೆ. ಇವರೆಲ್ಲ ವಿದೇಶಕ್ಕೆ ಹೋಗಿ ನೋಡಲಿ. ಪಾಕಿಸ್ತಾನ, ಸೌದಿಗೆ ಹೋಗಿ ಮಾತನಾಡಲಿ ನೋಡೋಣ ಎಂದು ಖಾದರ್ ಹಿಜಾಬ್ ಪ್ರತಿಪಾದಿಸುವ ವಿದ್ಯಾರ್ಥಿನಿಯರಿಗೆ ಸವಾಲು ಹಾಕಿದರು.
ಹಿಜಾಬ್ ವಿಚಾರದಲ್ಲಿ ಹಟ ಸಲ್ಲದು. ದೇಶದ ಕಾನೂನು ಸುವ್ಯವಸ್ಥೆ ನಮಗೆ ಅಗತ್ಯ. ಅದರ ಜೊತೆಗೆ ಹೆಣ್ಮಕ್ಕಳಿಗೆ ಶಿಕ್ಷಣದ ಅಗತ್ಯ ಇದೆ. ಅದಕ್ಕೆ ಕೊರತೆ ಆಗಬಾರದು. ಹಿಜಾಬ್ ವಿಚಾರದಲ್ಲಿ ಕಾನೂನು ವ್ಯಾಪ್ತಿಯಲ್ಲೇ ನಾವು ಅವರಿಗೆ ನೆರವು ನೀಡಬಹುದು. ಅದು ಬಿಟ್ಟು ಕಾನೂನಿನ ಹೊರಗೆ ಬಂದರೆ ಈ ಸಮಸ್ಯೆಗೆ ಪರಿಹಾರ ಸಿಗದು ಎಂದು ಖಾದರ್ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಜಿಲ್ಲೆಯ ಸಂವಿಧಾನಿಕ ಮುಖ್ಯಸ್ಥರು. ಹೀಗಾಗಿ ಅವರು ವಿದ್ಯಾರ್ಥಿಗಳ ಮತ್ತು ಎಲ್ಲರ ಅಭಿಪ್ರಾಯ ಪಡೆದು ಆದೇಶ ಮಾಡಲಿ. ಇಲಾಖೆ ಮತ್ತು ವಿದ್ಯಾರ್ಥಿಗಳ ಮಧ್ಯೆ ಸಮಸ್ಯೆ ಆದಾಗ ಡಿಸಿ ಸಮಸ್ಯೆ ಬಗೆಹರಿಸಲಿ. ಮಂಗಳೂರು ವಿವಿ ಕ್ಯಾಲೆಂಡರ್‌ನಲ್ಲಿ ಶಿರವಸ್ತ್ರ ಹಾಕಲು ಅವಕಾಶ ಇತ್ತು. ಆದರೆ ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಸಿಂಡಿಕೇಟ್ ಸಭೆ ಮಾಡಿ ನಿಯಮ ಬದಲಿಸಲಾಗಿದೆ. ಈ ವರ್ಷದ ಮಧ್ಯೆ ಸಿಂಡಿಕೇಟ್ ಈ ನಿರ್ಧಾರ ಮಾಡಿದ್ದು ತಪ್ಪಾ ಸರಿಯಾ ಅನ್ನೋದು ಪ್ರಶ್ನೆ. ಇದೊಂದು ತಾಂತ್ರಿಕ ಸಮಸ್ಯೆ. ಇದನ್ನ ಡಿಸಿ ಕೂತು ಪರಿಹರಿಸಲಿ ಎಂದು ಖಾದರ್ ಹೇಳಿದರು.
ವಿದ್ಯಾರ್ಥಿನಿಯರಲ್ಲಿ ದ್ವಂದ್ವ ಇದ್ದರೆ ಪೋಷಕರು ನಿರ್ಧಾರ ತೆಗೆದುಕೊಳ್ಳಲಿ. ರಾಜಕೀಯವಾಗಿ ಈ ಮಕ್ಕಳು ದಾರಿ ತಪ್ಪುತ್ತಿದ್ದಾರಾ ಅಂತ ಹೆತ್ತವರು ನೋಡಲಿ. ಆ ವಿದ್ಯಾರ್ಥಿನಿಯರು ಮೊದಲು ನನ್ನ ಜೊತೆ ಫೋನ್ ನಲ್ಲಿ ಮಾತನಾಡಿದರು. ಆ ಮೇಲೆ ನಾನೇ ಕರೆ ಮಾಡಿದಾಗ ಅವರು ಕಾಲ್ ತೆಗೆದಿಲ್ಲ. ಉಪ್ಪಿನಂಗಡಿ ಹಿಜಾಬ್ ಕೇಸಲ್ಲಿ ಅಲ್ಲಿನ ಶಾಸಕರ ಜೊತೆ ಮಾತನಾಡಿದ್ದೇನೆ. ವಿವಿ ಸಿಂಡಿಕೇಟ್ ನಿರ್ಣಯ ಕಾನೂನು ವ್ಯಾಪ್ತಿಯಲ್ಲಿ ಇದೆಯಾ ನೋಡಲಿ. ಇಲ್ಲದೇ ಇದ್ರೆ ನ್ಯಾಯಾಲಯಕ್ಕೆ ಹೋಗಿ ಬಗೆಹರಿಸಿಕೊಳ್ಳಲಿ ಎಂದು ಖಾದರ್ ಸಲಹೆ ನೀಡಿದರು.
ಇದನ್ನೂ ಓದಿ: ಹಿಜಾಬ್ ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದ ನೋಟಿಸ್ ಜಾರಿ: ಅಮಾನತು ಸಾಧ್ಯತೆ