Site icon Vistara News

Kambala | ಶ್ರೀನಿವಾಸ ಗೌಡನನ್ನು ಉಸೇನ್ ಬೋಲ್ಟ್‌ಗೆ ನಾವು ಹೋಲಿಸಿಲ್ಲ: ಕಂಬಳ ಅಕಾಡೆಮಿ ಅಧ್ಯಕ್ಷ ಗುಣಪಾಲ

kambala

ಮಂಗಳೂರು: ಕಂಬಳ (Kambala) ಸ್ಪರ್ಧೆಯಲ್ಲಿ 180 ಮೀಟರ್‌ ದೂರವನ್ನು ಕೇವಲ 13 ಸೆಕೆಂಡಿನಲ್ಲಿ ಪೂರ್ಣಗೊಳಿಸಿ ದಿಗ್ಗಜ ಉಸೇನ್‌ ಬೋಲ್ಟ್‌ ಅವರ ದಾಖಲೆಯನ್ನು ಹಿಮ್ಮೆಟ್ಟಿದ್ದಾರೆಂಬ ಶ್ರೀನಿವಾಸ್‌ ಗೌಡ ಎಂಬ ಯುವಕನ ಸುದ್ದಿ ದಿನೇದಿನೆ ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಈಗ ಸ್ಪಷ್ಟೀಕರಣ ನೀಡಿದ ಕಂಬಳ ಅಕಾಡೆಮಿ ಅಧ್ಯಕ್ಷ ಗುಣಪಾಲ ಕಡಂಬ, ನಾವು ಉಸೇನ್‌ ಬೋಲ್ಟ್‌ಗೆ ಹೋಲಿಸಿಲ್ಲ ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಲೋಕೇಶ್‌ ಗೌಡ ಮೂಡಬಿದರೆ ಅವರು ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಕೇಸ್‌ ದಾಖಲಿಸಿ, ಕಂಬಳ ಅಕಾಡೆಮಿ ಅಧ್ಯಕ್ಷ ಗುಣಪಾಲ ಕಡಂಬ ವಿರುದ್ಧ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಮಾಡಿದ್ದರು. ಈಗ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಗುಣಪಾಲ ಕಡಂಬ ಅವರು, ಶ್ರೀನಿವಾಸ ಗೌಡನನ್ನು ಉಸೇನ್ ಬೋಲ್ಟ್‌ಗೆ ನಾವು ಹೋಲಿಸಿಲ್ಲ. ಓಟ ನಡೆಯುವಾಗ ಅಲ್ಲಿದ್ದ ವೀಕ್ಷಕ ವಿವರಣಾಕಾರ ಹೇಳಿದ್ದಾರೆ. ಬಳಿಕ ಇದು ಮಾಧ್ಯಮಗಳಲ್ಲಿ ಪ್ರಚಾರ ಪಡೆದಿತ್ತು ಎಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ.

ನಮ್ಮ‌ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. 50 ವರ್ಷಗಳಿಂದ ಕಂಬಳ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದು, 2011ರಲ್ಲಿ ಕಂಬಳ ಅಕಾಡೆಮಿಯನ್ನು ಸ್ಥಾಪನೆ ಮಾಡಲಾಗಿದೆ. ಕಂಬಳ ಅಕಾಡೆಮಿಯ ಬಗ್ಗೆ ಕಂಬಳ ಸಮಿತಿಗೆ ಅಸಮಾಧಾನ ಇರುವುದರಿಂದ ತಪ್ಪು ಮಾಹಿತಿ ನೀಡಿದ್ದಾರೆ. ಸರ್ಕಾರವು ಕಂಬಳಕ್ಕೆ ನೀಡಿದ ಅನುದಾನವನ್ನು ಮುಟ್ಟಿಲ್ಲ. 1 ಕೋಟಿ ರೂಪಾಯಿ ಅನುದಾನವು ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿ ಮೀಸಲಿದೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ | Kissing competition | ಮಂಗಳೂರು ಕಾಲೇಜೊಂದರ ವಿದ್ಯಾರ್ಥಿಗಳ ಹುಚ್ಚಾಟ; ಸುಮೋಟೋ ಕೇಸ್‌ ದಾಖಲು!

ಏನಿದು ಪ್ರಕರಣ?

2019ರಲ್ಲಿ ಶ್ರೀನಿವಾಸ ಗೌಡ ಅವರು ಕಂಬಳ ಸ್ಪರ್ಧೆಯಲ್ಲಿ 180 ಮೀ. ದೂರ ಕೋಣಗಳೊಂದಿಗೆ ಓಡಿದ್ದರು. ಈ ಸ್ಪರ್ಧೆ ಭಾರಿ ಪ್ರಚಾರವನ್ನು ಪಡೆದುಕೊಂಡಿತ್ತು. ಕಾರಣ, ಪ್ರಸಿದ್ಧ ಚಾಂಪಿಯನ್‌ ಓಟಗಾರ ಉಸೇನ್‌ ಬೋಲ್ಟ್‌ ಅವರ ದಾಖಲೆಯನ್ನು ಮುರಿದಿರುವುದಾಗಿ ಹೇಳಲಾಗಿತ್ತು. ಅವರ ಈ ಸಾಧನೆ ಕೇವಲ ಕಂಬಳ ಅಭಿಮಾನಿಗಳಲ್ಲಷ್ಟೇ ಅಲ್ಲ, ದೇಶ-ವಿದೇಶದಲ್ಲೂ ಸಂಚಲನ ಸೃಷ್ಟಿಸಿತ್ತು.

ಕರ್ನಾಟಕ ಸರ್ಕಾರ, ಯುವಜನ ಕ್ರೀಡಾ ಇಲಾಖೆ ವತಿಯಿಂದ ಶ್ರೀನಿವಾಸ ಗೌಡ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನ ಮಾಡಿ ಬಹುಮಾನವನ್ನು ನೀಡಿ ಗೌರವಿಸಲಾಗಿತ್ತು. ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೂಡ ಶ್ರೀನಿವಾಸ ಗೌಡರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದರಿಂದ 2021ರಲ್ಲಿ ಹಮ್ಮಿಕೊಂಡಿದ್ದ ಕಂಬಳ ಸ್ಪರ್ಧೆಯಲ್ಲಿ ಶ್ರೀನಿವಾಸ ಗೌಡ ಮತ್ತೊಮ್ಮೆ ಸದ್ದು ಮಾಡಿದ್ದರು. ಅವರ ದಾಖಲೆಗಳಿಂದ ಸಾಕಷ್ಟು ಪ್ರಚಾರವನ್ನು ಪಡೆದಿದ್ದರು. ಈಗ ಈ ದಾಖಲೆಗಳೆಲ್ಲವೂ ಸುಳ್ಳು ಎಂದು ಹೇಳಲಾಗುತ್ತಿದೆ.

ಇದೆಲ್ಲವೂ ಕಂಬಳ ಸ್ಪರ್ಧೆಯ ತೀರ್ಪುಗಾರ ಡಾ.ಗುಣಪಾಲ ಕಡಂಬ ಎಂಬುವರು ಸೃಷ್ಟಿಸಿದ ಸುಳ್ಳು ದಾಖಲೆ ಎಂದು ಕಂಬಳ ಸಮಿತಿ ಆರೋಪಿಸಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಲೋಕೇಶ್‌ ಗೌಡ ಮೂಡಬಿದರೆ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಕೇಸ್‌ ದಾಖಲಿಸಿದ್ದಾರೆ. ಮೂವರ ವಿರುದ್ಧ ದೂರನ್ನು ಕೊಡಲಾಗಿದ್ದು, ದೂರಿಗೆ ಸಂಬಂಧಿಸಿದಂತೆ ವಿಚಾರಣೆ ‌ನಡೆಸಲು ಮೂಡಬಿದರೆ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ | Kambala | ಅಂದು ಹುಸೇನ್‌ ಬೋಲ್ಟ್‌ ರೆಕಾರ್ಡ್‌ ಮುರಿದ ಹೆಗ್ಗಳಿಕೆ; ಇಂದು ಮ್ಯಾಚ್‌ ಫಿಕ್ಸಿಂಗ್‌ ಆರೋಪ

Exit mobile version