Site icon Vistara News

ಫಾಜಿಲ್‌ ಕುಟುಂಬಕ್ಕೂ ₹25 ಲಕ್ಷ ನೀಡಲು ಯು.ಟಿ. ಖಾದರ್‌ ಆಗ್ರಹ: ಪ್ರಮೋದ್‌ ಮುತಾಲಿಕ್‌ಗೆ ನಿರ್ಬಂಧ

UT Khader MLA

ಬೆಂಗಳೂರು: ಸುರತ್ಕಲ್‌ನಲ್ಲಿ ಗುರುವಾರ ರಾತ್ರಿ ಹತ್ಯೆಗೀಡಾದ ಯುವ ಫಾಜಿಲ್‌ ಪ್ರಕರಣವನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಅವರ ಕುಟುಂಬದವರಿಗೂ 25 ಲಕ್ಷ ರೂ. ನೀಡಬೇಕು ಎಂದು ಶಾಸಕ ಯು.ಟಿ. ಖಾದರ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಖಾದರ್‌, ಮುಖ್ಯಮಂತ್ರಿಗಳು ಬಂದು ಹೋದ ಬೆನ್ನಲ್ಲೇ ಘಟನೆ ನಡೆದಿದೆ. ದಕ್ಷಿಣ ಕನ್ನಡದಲ್ಲಿ 10 ದಿನಗಳಲ್ಲಿ ಮೂವರ ಮೇಲೆ ಹಲ್ಲೆ ನಡೆದುಬಿಟ್ಟಿದೆ. ಪ್ರವೀಣ್ ಕೊಲೆಯ ಬಗ್ಗೆಯೂ ನಮ್ಮ ಸಂತಾಪವಿದೆ. ಸರ್ಕಾರ ಮೂರು ಪ್ರಕರಣಗಳನ್ನು ಒಂದೇ ರೀತಿಯಾಗಿ ಪರಿಗಣಿಸಬೇಕು. ಸರ್ಕಾರ ಈ ವಿಚಾರದಲ್ಲಿ ತಾರತಮ್ಯ ಮಾಡಬಾರದು. ಫಾಜಿಲ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದರು.

ಮುಖ್ಯಮಂತ್ರಿಗಳು ಗುರುವಾರ ಬೆಳ್ಳಾರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಸೂದ್ ಮನೆಗೂ ಭೇಟಿ ನೀಡಬೇಕಿತ್ತು. ಜಿಲ್ಲೆಯಲ್ಲಿ ಇಂತಹ ಪರಿಸ್ಥಿತಿ ಇರುವಾಗ ಸರ್ಕಾರ ಜವಾಬ್ದಾರಿಯಿಂದ ವರ್ತಿಸಬೇಕು. ಜನರಿಗೆ ಸರ್ಕಾರದ ಮೇಲೆ, ಸಿಎಂ ಮೇಲೆ ನಂಬಿಕೆ ಹೋಗಿದೆ. ಹೀಗಾಗಿ ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ಆಪಾದಿಸಿದರು.

ಪ್ರಮೋದ್‌ ಮುತಾಲಿಕ್‌ಗೆ ನಿರ್ಬಂಧ

ಸುರತ್ಕಲ್‌ನಲ್ಲಿ ಮುಸ್ಲಿಂ ಯುವಕ ಫಾಜಿಲ್‌ ಹತ್ಯೆ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆ ಕೆಲವು ಪ್ರದೇಶಗಳಿಗೆ ಆಗಮಿಸುವುದರಿಂದ ನಿಷೇಧ ವಿಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಹಿನ್ನೆಲೆಯಲ್ಲಿ ಮುತಾಲಿಕ್ ಭೇಟಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಿಗೆ ಪ್ರಮೋದ್ ಮುತಾಲಿಕ್ ಅವರ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ.

ಈ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಪ್ರಮೋದ್‌ ಮುತಾಲಿಕ್‌, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರವೀಣ್‌ ಹತ್ಯೆ ಖಂಡಿಸುತ್ತೇನೆ. ಮುಖ್ಯಮಂತ್ರಿಗಳು ಮನೆಗೆ ಬಂದು ೨೫ ಲಕ್ಷ ರೂ. ಕೊಟ್ಟಿರುವುದನ್ನು ಒಪ್ಪಲಾರದು. ಮೊದಲೇ ಕಾರ್ಯಕರ್ತರ ಕಷ್ಟ ಸುಖಕ್ಕೆ ಸ್ಪಂದಿಸಿದ್ದರೆ ಪ್ರವೀಣ್‌ ಕೊಲೆಯಾಗುತ್ತಿರಲಿಲ್ಲ. ಮನೆ ಮೇಲೆ ಮನೆ ಕಟ್ಟಿ ಮೂರು ಪೀಳಿಗೆಯಷ್ಡು ಆಸ್ತಿ ಮಾಡಿರುವ ಬಿಜೆಪಿ ನಾಯಕರಿಗೆ ಧಿಕ್ಕಾರ. ಈ ಆಕ್ರೋಶ ಪ್ರವೀಣ್ ಶವಯಾತ್ರೆಯಲ್ಲಿ ಹೊರಬಿದ್ದಿದೆ. ಇಂತಹ ಘಟನೆ ಇನ್ನುಮುಂದೆ ನಡೆಯದಿರಲಿ. ಸುರತ್ಕಲ್‌ನಲ್ಲಿ‌ ನಡೆದಿರುವ ಕೊಲೆ, ಕ್ರಿಯೆಗೆ ಪ್ರತಿಕ್ರಿಯೆ ಆಗಿರದಿರಲಿ. ರಾಜಕೀಯೇತರ ಹಿಂದೂ ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರು ಇದನ್ನು ಪರಿಹಾರ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ |Surathkal Murder | ಫಾಜಿಲ್‌ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ; ಮಸೀದಿಯಲ್ಲಿ ಅಂತಿಮ ದರ್ಶನ

Exit mobile version