Site icon Vistara News

ಕಾಂತಾರ ಎಫೆಕ್ಟ್‌ | ಭೂತಾರಾಧನೆ ಮಾಡುವ ದೈವನರ್ತಕರಿಗೆ ಸರ್ಕಾರದಿಂದ ಮಾಸಾಶನ

sunil kumar

ಬೆಂಗಳೂರು: ದಕ್ಷಿಣ ಕನ್ನಡದ ಪ್ರಮುಖ ಆಚರಣೆಗಳಲ್ಲೊಂದಾದ ಭೂತಾರಾಧನೆಯಲ್ಲಿ ದೈವ ನರ್ತನ ಮಾಡುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

ದೈವ ನರ್ತಕರಿಗೆ ಮಾಸಿಕ ಎರಡು ಸಾವಿರ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ವೈಯಾಲಿಕಾವಲ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ಎಂಟು ಮೋರ್ಚಾಗಳ ಕಾರ್ಯಾಗಾರ ಉದ್ಘಾಟನೆ ನಂತರ ಮಾತನಾಡಿದ ಸುನಿಲ್‌ ಕುಮಾರ್‌, ಭೂತಾರಾಧನೆ ಕುರಿತು ನಟ ಚೇತನ್‌ ಮಾತಿಗೆ ತಿರುಗೇಟು ನೀಡಿದರು.

ಸಂಸ್ಕೃತಿ‌ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತಾಡಬಾರದು. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ. ಯಾರೋ ಒಬ್ಬ ವ್ಯಕ್ತಿ ಹಾಗೆ ಹೇಳಿದರೆ ಆ ಸಂಸ್ಕೃತಿಯಿಂದ ಯಾರೂ ದೂರ ಹೋಗುವುದಿಲ್ಲ. ಭೂತಾರಾಧನೆ ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗ ಎಂದರು.

ಕಲಾವಿದರಿಗೆ ಮಾಸಾಶನ ನೀಡುತ್ತಿರುವಂತೆಯೇ ಭೂತಾರಾಧನೆಯಲ್ಲಿ ದೈವ ನರ್ತನ ಮಾಡುವವರಿಗೂ ನೀಡಲು ತೀರ್ಮಾನಿಸಲಾಗಿದೆ. 60 ವರ್ಷ ಮೀರಿದ ದೈವ ನರ್ತಕರಿಗೆ ಮಾಸಿಕ 2 ಸಾವಿರ ರೂ. ನೀಡಲಾಗುತ್ತದೆ ಎಂದರು.

ಇತ್ತೀಚೆಗೆ ಬಿಡುಗಡೆಯಾದ ಕಾಂತಾರ ಚಲನಚಿತ್ರದ ನಂತರ ಎಲ್ಲೆಡೆ ಭೂತಾರಾಧನೆಯ ಕುರಿತು ತಿಳಿಯುವ ಕುತೂಹಲ ಹೆಚ್ಚಾಗಿದೆ. ಇದೇ ವೇಳೆ, ಭೂತಾರಾಧನೆಯು ಹಿಂದು ಸಂಸ್ಕೃತಿಯ ಭಾಗವೇ ಅಲ್ಲ ಎಂದು ನಟ ಚೇತನ್‌ ಹೇಳಿರುವುದಕ್ಕೆ ನಾಡಿನಾದ್ಯಂತ ವಿರೋಧಕ್ಕೂ ಕಾರಣವಾಗಿದೆ.

ರಾಮಮಂದಿರ ಸ್ಫೋಟಕ್ಕೆ ಪಿಎಫ್‌ಐ ಸಂಚು ರೂಪಿಸಿದ್ದರ ಕುರಿತು ಪ್ರತಿಕ್ರಿಯಿಸಿದ ಸುನಿಲ್‌ ಕುಮಾರ್‌, ತುಷ್ಟೀಕರಣದ ರಾಜಕಾರಣಕ್ಕೆ ಪಿಎಫ್ಐ ಅನ್ನು ದೇಶದಲ್ಲಿ ಬೆಂಬಲಿಸಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಇಂತಹ ಸಂಘಟನೆಗಳನ್ನು ವಿರೋಧಿಸುವವರೆಗೂ ಇಂಥ ಶಕ್ತಿಗಳು ವಿಜೃಂಭಿಸುತ್ತಿರುತ್ತವೆ ಎಂದರು.

ಇದನ್ನೂ ಓದಿ | ಭೂತಾರಾಧನೆ ಹಿಂದು ಸಂಸ್ಕೃತಿಯ ಒಂದು ಭಾಗ, ಚೇತನ್‌ಗೆ ಸರಿಯಾಗಿ ಗೊತ್ತಿಲ್ಲ: ಕೋಟ ಶ್ರೀನಿವಾಸ ಪೂಜಾರಿ

Exit mobile version