Site icon Vistara News

Panjurli Daiva: ಶರತ್‌ ಶೆಟ್ಟಿ ಕೊಲೆ ಆರೋಪಿ ಶರಣಾಗತಿ; ಎಳೆತಂದು ನಿಲ್ಲಿಸಿತೇ ಪಂಜುರ್ಲಿ ದೈವ?

panjurli daiva sharat shetty murder

ಉಡುಪಿ: ತುಳುನಾಡಿನ (Tulunadu) ಆರಾಧ್ಯ ದೈವವಾದ ಪಂಜುರ್ಲಿ ದೈವದ (Panjurli Daiva) ಕಾರಣಿಕ ಎಂದೇ ವ್ಯಾಖ್ಯಾನಿಸಲಾಗುತ್ತಿರುವ ಘಟನೆಯೊಂದು ಉಡುಪಿ (Udupi news) ಜಿಲ್ಲೆಯಲ್ಲಿ ನಡೆದಿದೆ. ಪಾಂಗಾಳದಲ್ಲಿ ನಡೆದಿದ್ದ ಶರತ್‌ ಶೆಟ್ಟಿ (Sharat Shetty murder) ಎಂಬಾತನ ಕೊಲೆಯ ಪ್ರಮುಖ ಆರೋಪಿಯೊಬ್ಬ ಶರಣಾಗತನಾಗಿದ್ದಾನೆ. ಇದಕ್ಕೂ ಮುನ್ನ ಕೊಲೆಯಾದಾತನ ಕುಟುಂಬಿಕರು ಪಂಜುರ್ಲಿ ದೈವ ಮೊರೆ ಹೋಗಿದ್ದರು.

2023ರ ಫೆಬ್ರವರಿ 5ರಂದು ಉಡುಪಿಯ ಪಾಂಗಾಳ ಎಂಬಲ್ಲಿ ಬಬ್ಬು ಸ್ವಾಮಿ ದೈವಸ್ಥಾನದ ನೇಮದಲ್ಲಿ ಭಾಗವಹಿಸಿದ್ದ ಶರತ್ ಶೆಟ್ಟಿ (42) ಅವರು ದುಷ್ಕರ್ಮಿಗಳಿಗೆ ಬಲಿಯಾಗಿದ್ದರು. ಮಾತುಕತೆಗೆ ಎಂದು ಕರೆದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಪತ್ತೆಯಾಗಿರಲಿಲ್ಲ.

ಬಳಿಕ ಕುಟುಂಬಸ್ಥರು ಮಾರ್ಚ್ 24, 2023ರಂದು ಪಾಂಗಾಳದ ಮನೆಯಲ್ಲಿ ವರ್ತೆ ಪಂಜುರ್ಲಿಗೆ ನೇಮೋತ್ಸವವನ್ನು ಆಯೋಜಿಸಿ, ದೈವದ ಮೊರೆ ಹೋಗಿದ್ದರು. ಈ ಸಂದರ್ಭದಲ್ಲಿ ಪಂಜುರ್ಲಿ ದೈವ (Panjurli Daiva) , “ಆರೋಪಿಯನ್ನು ಪಾತಾಳದಲ್ಲಿದ್ದರೂ ಹುಡುಕಿ ಮುಂದೆ ನಿಲ್ಲಿಸುತ್ತೇನೆ” ಎಂದು ಅಭಯ ನೀಡಿತ್ತು.

ಅಚ್ಚರಿ ಎಂಬಂತೆ, ಮೇ.23ರಂದು ಪ್ರಕರಣ ಎ1 ಆರೋಪಿ ಯೋಗೀಶ್ ಆಚಾರ್ಯ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಒಂದು ವರ್ಷ ಮೂರು ತಿಂಗಳು ತಲೆಮರೆಸಿಕೊಂಡಿದ್ದ ಈತ ಉಡುಪಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿದ್ದಾನೆ. ಯೋಗೀಶ್ ಆಚಾರ್ಯನನ್ನು ಮೇ 30ರ ವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.

ಒಂದು ವರ್ಷಕ್ಕೂ ಅಧಿಕ ಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಕೋರ್ಟ್‌ಗೆ ಶರಣಾಗಿರುವುದರ ಹಿಂದೆ ಪಂಜುರ್ಲಿ ದೈವದ ಮಹಿಮೆ ಇದೆ ಎಂದು ಸ್ಥಳೀಯರು ನಂಬಿದ್ದಾರೆ. ಪ್ರಕರಣದ ಸಂಬಂಧ ಈಗಾಗಲೇ ಹಲವರ ಬಂಧನ ನಡೆದಿದೆ.

ತುಳುನಾಡಿನ ಪಂಜುರ್ಲಿ ದೈವದ ಬಗ್ಗೆ ರಿಷಭ್‌ ಶೆಟ್ಟಿ ನಟನೆಯ ʼಕಾಂತಾರʼ ಚಿತ್ರದ ಬಳಿಕ ಹೊರಗಡೆಯೂ ಹೆಚ್ಚು ಅರಿವು ಮೂಡಿತ್ತು. ದಕ್ಷಿಣ ಕನ್ನಡ ಹಾಗೂ ಉಡುಪಿಯ ಕರಾವಳಿಯಲ್ಲಿ ನ್ಯಾಯನಿರ್ಣಯಗಳಿಗೆ ದೈವದ ಕೋಲದಲ್ಲಿ ಪ್ರಶ್ನೆ ಹಾಕುವುದು ಹಾಗೂ ದೈವದಿಂದ ʼಅಭಯʼ ಪಡೆಯುವುದು ಸಾಮಾನ್ಯವಾಗಿ ಕಂಡುಬರುತ್ತದೆ.

ಇದನ್ನೂ ಓದಿ: Glenn Maxwell: ಕಾಂತಾರದ ‘ಪಂಜುರ್ಲಿ’ ಬಲದಿಂದ ಮ್ಯಾಕ್ಸ್‌ವೆಲ್‌ 201 ರನ್ ಚಚ್ಚಿದರೇ?

Exit mobile version