ಮಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ (Road Accident) ನವ ವಿವಾಹಿತೆ ಮೃತಪಟ್ಟಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ತಲಪಾಡಿ ಎಂಬಲ್ಲಿ ಘಟನೆ ನಡೆದಿದೆ. ಕಾರು ಅಪಘಾತದಲ್ಲಿ ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬುವವರ ಪತ್ನಿ ಮಾನಸ ಮೃತ ದುರ್ದೈವಿ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನವ ದಂಪತಿ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ ಹಾರಿ ಕೆ.ಎಸ್.ಆರ್‌ಟಿ.ಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಮಾನಸ ತೀವ್ರ ರಕ್ತಸ್ರಾವವಾಗಿ ಮೃತಪಟ್ಟರೆ, ಅನಿಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸೆ.5 ರಂದು ದೇಂತಡ್ಕ ದೇವಸ್ಥಾನದಲ್ಲಿ ಇವರಿಬ್ಬರ ಮದುವೆ ನಡೆದಿತ್ತು. ಮದುವೆ ಕಾರ್ಯಕ್ರಮದ ವಿಚಾರವಾಗಿ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ಬಂದಿದ್ದರು. ವಾಪಸು ಮನೆಗೆ ಹೋಗುವ ವೇಳೆ ಘಟನೆ ನಡೆದಿದೆ.
ಇಬ್ಬರು ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Morarji Desai School : ವಸತಿ ಶಾಲಾ ಶಿಕ್ಷಕನ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ 5 ಸಾವಿರ ನಗ್ನ ವಿಡಿಯೊ, ಫೋಟೊಗಳು ಪತ್ತೆ!
ಆಯಿಲ್ ಲೀಕ್‌ನಿಂದ ಸರಣಿ ಅಪಘಾತ
ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆಯಿಲ್ ಲೀಕ್‌ನಿಂದ ಸರಣಿ ಅಪಘಾತ ಸಂಭವಿಸಿದೆ. ತೆಕ್ಕಟ್ಟೆಯಿಂದ ಮರವಂತೆವರೆಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದ್ದು, ಏಕಮುಖ ಸಂಚಾರವನ್ನು ಬಂದ್ ಮಾಡಿ ಪೂರ್ವ ಭಾಗದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಯಾವುದೋ ವಾಹನದಿಂದ ಆಯಿಲ್ ಲೀಕಾದ ಹಿನ್ನೆಲೆಯಲ್ಲಿ ರಸ್ತೆ ಜಾರುತ್ತಿದೆ. ಬೈಕ್ ಟೈಯರ್‌ಗೆ ಆಯಿಲ್ ತಗುಲಿ ಜಾರಿ ಬೀಳುತ್ತಿರುವ ಹಿನ್ನೆಲೆ ರೋಡ್ ಬಂದ್ ಮಾಡಲಾಗಿದೆ. ಶನಿವಾರ ಮುಂಜಾನೆ 7:30 ಸುಮಾರಿಗೆ ಟ್ಯಾಂಕರ್ ಒಂದರಿಂದ ಆಯಿಲ್ ಲೀಕ್ ಆಗಿರುವ ಶಂಕೆ ಇದೆ.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆಗೆ ಬಿದ್ದ ಆಯಿಲ್ ಸಂಪೂರ್ಣ ತೆರವಾಗುವವರೆಗೂ ಸಂಚಾರ ಕಷ್ಟವಾಗಿತ್ತು. ಹೀಗಾಗಿ ಕೋಟೇಶ್ವರದ ಬಳಿ ಅಗ್ನಿಶಾಮಕ ದಳದವರಿಂದ ರೋಡ್ ಸ್ವಚ್ಛತೆ ಕಾರ್ಯ ನಡೆದಿದೆ. ಆಯಿಲ್ ಲೀಕ್ ಆದ ಹಿನ್ನೆಲೆ ಹಲವು ದ್ವಿಚಕ್ರ ವಾಹನ ಸವಾರರಿಗೆ ಗಾಯವಾಗಿದೆ. ತೆಕ್ಕಟ್ಟೆಯಿಂದ ಮರವಂತೆ ವರೆಗೂ ಆಯಿಲ್ ಸೋರಿಕೆಯಿಂದಾಗಿ ಜಾರಿ ಬಿದ್ದ ಹಲವು 10ಕ್ಕೂ ಹೆಚ್ಚು ವಾಹನ ಸವಾರರಿಗೆ ಗಾಯವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ