Site icon Vistara News

ಅಲುಗಾಡಿದ್ದು ಕಟೀಲ್‌ ಕಾರಲ್ಲ, BJP ರಾಜ್ಯಾಧ್ಯಕ್ಷರ ಸೀಟು: ಸಮಸ್ಯೆ ಪರಿಹಾರಕ್ಕೆ 3 ಆಯ್ಕೆಗಳು

Nalin kumar kateel car shaking bjp

ರಮೇಶ ದೊಡ್ಡಪುರ, ಬೆಂಗಳೂರು
ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ನಡೆದ ಜುಲೈ 26ರಂದು ಎಂದಿನಂತೆ ರಾಜ್ಯಾದ್ಯಂತ ಸುದ್ದಿ ಹರಿದಾಡಿತು. ಸಾಮಾನ್ಯವಾಗಿ ಕಾರ್ಯಕರ್ತರ ಹತ್ಯೆಯಾದಾಗ ಬಿಜೆಪಿ ನಾಯಕರ ಹೇಳಿಕೆಗಳು ತಾರಕಕ್ಕೇರುತ್ತವೆ. ಇದು ಜಿಹಾದಿಗಳ ಕೃತ್ಯ, ಕಾಂಗ್ರೆಸ್‌ನ ತುಷ್ಟೀಕರಣ ನೀತಿಯ ಪರಿಣಾಮ, ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಪಿಎಫ್‌ಐ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದರಿಂದ ಹೀಗೆ ಆಗುತ್ತಿದೆ ಎಂಬಂತಹ ಮಾತುಗಳು ಹೊರಬರುತ್ತವೆ. ಆದರೆ ಪ್ರವೀಣ್‌ ಹತ್ಯೆ ನಂತರ ಬಿಜೆಪಿ ನಾಯಕರಿಗಷ್ಟೇ ಅಲ್ಲದೆ, ಇಡೀ ಸಂಘಟನೆಗೇ ಕಾರ್ಯಕರ್ತರು ಶಾಕ್‌ ನೀಡಿದ್ದರು.

ಶಿಸ್ತಿನ ಪಕ್ಷ ಎಂದೇ ಕರೆಸಿಕೊಳ್ಳುವ ಬಿಜೆಪಿಯಲ್ಲಿ ಕಾರ್ಯಕರ್ತರ ಸಹನೆಯ ಕಟ್ಟೆ ಒಡೆದು, ಸ್ವತಃ BJP ರಾಜ್ಯಾಧ್ಯಕ್ಷರ ಕಾರನ್ನೇ ಅಲುಗಾಡಿಸಿ ಆಕ್ರೋಶ ಹೊರಹಾಕಿದರು. ಅಂದು ಕೆಲ ನಿಮಿಷ ನಡೆದ ಈ ಅಲುಗಾಟ ಅಂದಿಗೇ ಮುಕ್ತಾಯವಾಗಬಹುದು ಎಂದುಕೊಂಡಿದ್ದ ಬಿಜೆಪಿ ನಾಯಕರು, ಇದರ ಆಳ ಅಗಲ ನೋಡಿ ಬೆಚ್ಚಿಬಿದ್ದಿದ್ದಾರೆ. ಅಸಲಿಗೆ ಅಲುಗಾಡಿದ್ದು ನಳಿನ್‌ಕುಮಾರ್‌ ಕಟೀಲ್‌ ಕಾರಲ್ಲ, ರಾಜ್ಯ ಬಿಜೆಪಿಯ ಸಂಘಟನೆ ಎಂಬುದು ಅರಿವಿಗೆ ಬಂದಿದೆ. ಇದೆಲ್ಲದರಿಂದ ಈಗ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಬಹುತೇಕ ನಿಶ್ಚಿತ ಎನ್ನುವ ಮಾತುಗಳು ಬಲವಾಗಿವೆ.

ಎರಡನೇ ಅವಧಿಗೆ ಮುಂದುವರಿಯಬಹುದು

ಬಿಜೆಪಿ ಅಧ್ಯಕ್ಷರ ಅವಧಿ ಮೂರು ವರ್ಷವಿರುತ್ತದೆ. ಅದು ರಾಷ್ಟ್ರೀಯ ಅಧ್ಯಕ್ಷರಿಂದ ಜಿಲ್ಲಾ ಅಧ್ಯಕ್ಷರವರೆಗೆ ಸಮಾನವಾಗಿರುತ್ತದೆ. ಒಮ್ಮೆ ಅಧ್ಯಕ್ಷರಾದವರು ಎರಡನೇ ಅವಧಿಗೆ ಮುಂದುವರಿಯುವಂತಿಲ್ಲ ಎಂದು ಈ ಹಿಂದಿನ ಬಿಜೆಪಿ ಸಂವಿಧಾನದಲ್ಲಿತ್ತು. ಆದರೆ 2012ರಲ್ಲಿ ನಿತಿನ್‌ ಗಡ್ಕರಿ ಅವರ ಅವಧಿ ಮುಕ್ತಾಯವಾಗುವುದಕ್ಕೂ ಮುನ್ನ, ಅವರೇ ಮುಂದುವರಿಯಬೇಕು ಎಂದು ಆರ್‌ಎಸ್‌ಎಸ್‌ನಿಂದ ಒತ್ತಾಯ ಕೇಳಿಬಂದಿತ್ತು. ಈ ಕಾರಣಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಿ, ನಿರಂತರ ಎರಡನೇ ಅವಧಿಗೆ ಮುಂದುವರಿಯಬಹುದು ಎಂದು ಬದಲಾವಣೆ ಮಾಡಲಾಯಿತು. ಆದರೆ ನಂತರ ಪಕ್ಷದ ತೀರ್ಮಾನದಲ್ಲಿ ಬದಲಾವಣೆಯಾಗಿ, ಗಡ್ಕರಿ ಎರಡನೇ ಅವಧಿಗೆ ಮುಂದುವರಿಯಲಿಲ್ಲ, ರಾಜನಾಥ ಸಿಂಗ್‌ ಚುಕ್ಕಾಣಿ ಹಿಡಿದರು.

ಅಂದರೆ ಒಟ್ಟು ಆರು ವರ್ಷದವರೆಗೆ ಅಧ್ಯಕ್ಷರಾಗಿ ಇರಬಹುದು. ಮತ್ತೂ ಮುಂದುವರಿಯಬೇಕು ಎಂದರೆ ನಡುವೆ ಒಬ್ಬ ಅಧ್ಯಕ್ಷರು ಬದಲಾಗಬೇಕು. ಇದೇ ರೀತಿ 2014ರಿಂದ 2019ರವರೆಗೆ ಅಮಿತ್‌ ಶಾ ಅಧ್ಯಕ್ಷರಾಗಿದ್ದರು.

2019ರಲ್ಲಿ ನೇಮಕವಾದ ನಳಿನ್‌ಕುಮಾರ್‌ ಕಟೀಲ್‌ ಅವಧಿ 2022ರ ಆಗಸ್ಟ್‌ನಲ್ಲಿ ಮುಕ್ತಾಯವಾಗಲಿದೆ. ತಾಂತ್ರಿಕವಾಗಿ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಎರಡನೇ ಅವಧಿಗೆ ಮುಂದುವರಿಸಲು ಅವಕಾಶವಿದೆ. ಹಾಗೆ ನೋಡಿದರೆ ತಾತ್ವಿಕವಾಗಿಯೂ ಅವರನ್ನೇ ಮುಂದುವರಿಸಲು ಪಕ್ಷದಲ್ಲಿ ಒಪ್ಪಿಗೆ ಇತ್ತು. ಪಕ್ಷದ ಅತ್ಯಂತ ಕೆಳಹಂತದಿಂದ ಬಂದಿರುವ ಕಾರ್ಯಕರ್ತ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದವರು, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಿರಂತರ ಪ್ರವಾಸ ಮಾಡಿದ್ದಾರೆ, ಕಾರ್ಯಾಗಾರಗಳನ್ನು ನಡೆಸಿದ್ದಾರೆ ಎನ್ನುವ ಅನೇಕ ಧನಾತ್ಮಕ ಅಂಶಗಳಿದ್ದವು. ಮತ್ತೆ, ಚುನಾವಣೆ ವರ್ಷದಲ್ಲಿ ರಾಜ್ಯ ಅಧ್ಯಕ್ಷರನ್ನು ಬದಲಾವಣೆ ಮಾಡಿ ಸಂಘಟನೆಯಲ್ಲಿ ಏರುಪೇರು ಮಾಡುವುದು ಬೇಡ ಎಂಬ ವಾದವಿತ್ತು. ಅದರಲ್ಲೂ ಜುಲೈ ತಿಂಗಳಲ್ಲೇ (ಜುಲೈ 19) ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌ ಅವರ ಬದಲಾವಣೆಯಾಗಿ ಹೊಸ ಸಂಘಟನಾ ಕಾರ್ಯದರ್ಶಿಯಾಗಿ ಜಿ.ವಿ. ರಾಜೇಶ್‌ ನೇಮಕವಾಗಿದ್ದರು. ಇದೆಲ್ಲದರ ನಡುವೆ ರಾಜ್ಯ ಅಧ್ಯಕ್ಷರ ಬದಲಾವಣೆ ಬೇಡ ಎನ್ನುವ ಚರ್ಚೆಗಳಾಗುತ್ತಿರುವಾಗಲೇ ಪ್ರವೀಣ್‌ ನೆಟ್ಟಾರು ಹತ್ಯೆ ನಡೆಯಿತು. ಇದೊಂದು ಘಟನೆ ಇಡೀ ಚರ್ಚೆಯ ದಿಕ್ಕನ್ನು ಬದಲಾವಣೆ ಮಾಡಿಬಿಟ್ಟಿದೆ.

ಅಧ್ಯಕ್ಷರ ಬದಲಾವಣೆ ಮಾಡಿದರೆ ಸರಿಯಾಗುತ್ತದೆಯೇ?

ನಿರಂತರ ಕಾರ್ಯಕರ್ತರ ಹತ್ಯೆ ಆಗುತ್ತಿದ್ದರೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವನ್ನು ಕಾರ್ಯಕರ್ತರು ಮಾಡಿದರು. ಇದಕ್ಕೆ ತಕ್ಕಂತೆ, ಪ್ರವೀಣ್‌ ಹತ್ಯೆ ಸ್ಥಳಕ್ಕೆ ಆಗಮಿಸಿದ ನಳಿನ್‌ಕುಮಾರ್‌ ಕಟೀಲ್‌ ಅವರ ಕಾರನ್ನೇ ಅಲುಗಾಡಿಸಿದರು.

ಈ ಕುರಿತು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ಮಾಹಿತಿ ನೀಡುತ್ತ, ಈ ಘಟನೆ ನಡೆದ ಕೂಡಲೆ ನಮಗೆಲ್ಲ ಆತಂಕ ಉಂಟಾಗಿತ್ತು. ಕಟೀಲ್‌ ಅವರಷ್ಟೇ ಅಲ್ಲ, ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರನ್ನೂ ಘೇರಾವ್‌ ಮಾಡಲಾಯಿತು. ಹೀಗೆ ರಾಜ್ಯ ಅಧ್ಯಕ್ಷರ ಮೇಲೆ ಹಾಗೂ ಆರ್‌ಎಸ್‌ಎಸ್‌ ಮುಖಂಡರ ಮೇಲೆಯೇ ಆಕ್ರೋಶ ಹೊರಹಾಕುತ್ತಿರುವವರು ಯಾರು ಎಂದು ವಿಚಾರಣೆ ನಡೆಸಲಾಯಿತು. ಈ ರೀತಿ ರಾಜ್ಯ ಅಧ್ಯಕ್ಷರ ವಿರುದ್ಧ ಘೋಷಣೆ ಹಾಕುತ್ತಿದ್ದವರು, ಕಾರನ್ನು ಅಲುಗಾಡಿಸಿದ ಪ್ರತಿಯೊಬ್ಬರನ್ನೂ ವಿವಿಧ ವಿಡಿಯೊಗಳ ಮೂಲಕ ಪತ್ತೆ ಹಚ್ಚಿದೆವು. ಆಗ ತಿಳಿದಿದ್ದೇನೆಂದರೆ, ಅವರೆಲ್ಲರೂ ನೇರವಾಗಿ ಬಿಜೆಪಿಗೆ ಬಂದವರು. ಆರ್‌ಎಸ್‌ಎಸ್‌, ಬಜರಂಗದಳ, ಹಿಂದು ಜಾಗರಣ ವೇದಿಕೆ ಮೂಲಕ ಅವರಿಗೆ ಇರಲಿಲ್ಲ. ಅಲ್ಲಿಗೆ, ಇದು ಒಟ್ಟಾರೆ ಸಂಘಟನೆಯ ಮೇಲಿನ ಧ್ವೇಷವಲ್ಲ, ಬಿಜೆಪಿಯಲ್ಲಿ ವಿವಿಧ ನಾಯಕರಲ್ಲಿರುವ ಒಳಜಗಳ ಎಂಬುದು ತಿಳಿಯಿತು.

ಆದರೆ ಅಷ್ಟರ ವೇಳೆಗಾಗಲೇ ಈ ಘಟನೆ ರಾಜ್ಯದ ವಿವಿಧೆಡೆಯೂ ಹಬ್ಬಿ, ಇತರೆ ಕಾರ್ಯಕರ್ತರೂ ತಮ್ಮೊಳಗಿನ ಆಕ್ರೋಶ ಹೊರಹಾಕಿದರು. ಒಂದು ಸ್ಥಳೀಯ ರಾಜಕೀಯ ಭಿನ್ನಾಭಿಪ್ರಾಯ ರಾಜ್ಯಮಟ್ಟದ ಸಂಘಟನಾತ್ಮಕ ಸಮಸ್ಯೆಯಾಗಿ ಬೆಳೆದುಬಿಟ್ಟಿತ್ತು ಎಂದು ಪದಾಧಿಕಾರಿ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಬದಲಾವಣೆಗೂ ಇದೆ ಆಗ್ರಹ, ಆದರೆ……

ರಾಜ್ಯ ಅಧ್ಯಕ್ಷರ ಬದಲಾವಣೆ ಮಾಡಿದಾಕ್ಷಣ ಎಲ್ಲವೂ ಸರಿಯಾಗುತ್ತದೆಯೇ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಅಸಲಿಗೆ ಕಾರ್ಯಕರ್ತರಿಗೆ ಬೇಸರ ಇರುವುದು, ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ ಎನ್ನುವುದು ಹಾಗೂ ಹತ್ಯೆಗಳು ಮುಂದುವರಿದಿರುವುದು. ಇದಕ್ಕೆ ಕ್ರಮ ಕೈಗೊಳ್ಳಬೇಕಾಗಿರುವುದು ಅಧಿಕಾರದಲ್ಲಿರುವ ಸರ್ಕಾರವೇ ಹೊರತು ಪಕ್ಷವಲ್ಲ. ಸಂಘ ಪರಿವಾರದವರಲ್ಲದ ಮುಖ್ಯಮಂತ್ರಿಯನ್ನು ನೇಮಕ ಮಾಡಿರುವುದರಿಂದಲೇ ಈ ಸಮಸ್ಯೆ ಇದ್ದು, ಅಲ್ಲಿಂದಲೇ ಪರಿಹಾರಕ್ಕೆ ಮುಂದಾಗಬೇಕು ಎಂಬ ಅಭಿಪ್ರಾಯವೂ ಕಾರ್ಯಕರ್ತರಲ್ಲಿದೆ. ಆದರೆ ಚುನಾವಣೆ ಇದನ್ನು ತಡೆಯುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸಿದರೆ ಮತ್ತೊಬ್ಬ ವೀರಶೈವ ಲಿಂಗಾಯತ ಮುಖಂಡನಿಗೇ ಸಿಎಂ ಸ್ಥಾನ ನೀಡಬೇಕು. ಇಲ್ಲದಿದ್ದರೆ, ಈಗಾಗಲೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿರುವ ಸಿಟ್ಟು ಹೊಂದಿರುವ ಸಮುದಾಯ, ಚುನಾವಣೆಯಲ್ಲಿ ತಿರುಗಿ ಬೀಳುವ ಅಪಾಯವಿದೆ. ಇದರ ಲಾಭವನ್ನು ಪಡೆಯಲು ಕಾಂಗ್ರೆಸ್‌ನಲ್ಲಿ ಎಂ.ಬಿ. ಪಾಟೀಲ್‌, ಎಸ್‌.ಆರ್‌. ಪಾಟೀಲ್‌ ಸೇರಿ ಅನೇಕರು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡುವುದಕ್ಕಿಂತಲೂ, ರಾಜ್ಯ ಅಧ್ಯಕ್ಷರ ಬದಲಾವಣೆ ಮಾಡಿ ಕಾರ್ಯಕರ್ತರನ್ನು ಚುನಾವಣಾ ಹಳಿಗೆ ತರುವುದೇ ಸುಲಭ ಮತ್ತು ಸುರಕ್ಷಿತ ಉಪಾಯ ಎಂಬ ಚಿಂತನೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿವೆ ಎಂದು ಮಾಜಿ ಸಚಿವರೊಬ್ಬರು ತಿಳಿಸಿದ್ದಾರೆ.

ಗೃಹಸಚಿವರ ಬದಲಾವಣೆಯೂ ಒಂದು ಆಯ್ಕೆ

ಚುನಾವಣಾ ವರ್ಷದಲ್ಲಿ ಸಿಎಂ ಬದಲಾವಣೆ ಬಹು ಅಪಾಯದ ಮಾರ್ಗವಾದ್ಧರಿಂದ ಮುಂದಿನ ಆಯ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ. ಆದರೆ ನಳಿನ್‌ಕುಮಾರ್‌ ಕಟೀಲ್‌ ಬದಲಾವಣೆಗೂ ರಾಜ್ಯಮಟ್ಟದ ಅನೇಕ ನಾಯಕರಲ್ಲಿ ಒಮ್ಮತವಿಲ್ಲ. ಸಂಘಟನಾತ್ಮಕ ಚುವಟಿಕೆಗಳನ್ನು ಅವರು ನಡೆಸಿಕೊಂಡು ಹೋಗುತ್ತಿದ್ದಾರೆ, ಅವರನ್ನು ಡಿಸ್ಟರ್ಬ್‌ ಮಾಡುವುದು ಬೇಡ ಎನ್ನುವುದು ಕೆಲವು ಹಿರಿಯ ನಾಯಕರ ವಾದ. ಇತ್ತೀಚೆಗೆ ಅಮಿತ್‌ ಶಾ ಕರ್ನಾಟಕಕ್ಕೆ ಆಗಮಿಸುವ ಮುನ್ನವೇ ನೇರವಾಗಿ ಅವರನ್ನು ನವದೆಹಲಿಯಲ್ಲಿ ಕಟೀಲ್‌ ಭೇಟಿ ಮಾಡಿದ್ದಾರೆ. ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸುವ ನೆಪದಲ್ಲಿ, ರಾಜ್ಯದಲ್ಲಿ ಪಕ್ಷದ ನಿಜವಾದ ಸ್ಥಿತಿಯನ್ನೂ ವಿವರಿಸಿದ್ದಾರೆ. ಇಷ್ಟರ ನಂತರವೂ ತಮ್ಮ ಬದಲಾವಣೆಯಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದಾದರೆ ಅಭ್ಯಂತರವೇನೂ ಇಲ್ಲ. ಹೇಗಿದ್ದರೂ 2024ರ ಲೋಕಸಭೆ ಚುನಾವಣೆಗೆ ತಯಾರಿ ನಡೆಸಲು ಸಾಕಷ್ಟು ಸಮಯ ಸಿಗುತ್ತದೆ ಎಂಬ ಅಭಿಪ್ರಾಯವನ್ನೂ ಕಟೀಲ್‌ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕಟೀಲ್‌ ಬದಲಾವಣೆ ಬೇಡ ಎಂದಾದರೆ, ಕಾರ್ಯಕರ್ತರ ಆಕ್ರೋಶ ತಣಿಸಲು ವರಿಷ್ಠರ ಎದುರು ಇರುವ ಮೂರನೇ ಆಯ್ಕೆ ಎಂದರೆ ಗೃಹಸಚಿವರನ್ನು ಬದಲಾವಣೆ ಮಾಡುವುದು. ಕಾರ್ಯಕರ್ತರ ಹತ್ಯೆ ಪ್ರಕರಣಗಳು ಗೃಹಸಚಿವರ ಇಲಾಖೆಯಿಂದ ಸರಿಯಾಗಿ ತನಿಖೆ ನಡೆಯುತ್ತಿಲ್ಲ ಎನ್ನುವುದು ಒಂದೆಡೆಯಾದರೆ ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಪ್ರಕರಣದ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ಬಿಂದಾಸ್‌ ಜೀವನ ಮಾಡುತ್ತಿದ್ದಾರೆ ಎನ್ನುವುದು ಆರಗ ಜ್ಞಾನೇಂದ್ರ ಅವರ ವಿರುದ್ಧ ಆಕ್ರೋಶವನ್ನು ಹೆಚ್ಚಿಸಿದೆ. ಆರಗ ಅವರ ಬದಲಾವಣೆಗೂ ಆಗ್ರಹ ಹೆಚ್ಚಾಗಿದೆ.

ರಾಜ್ಯಾಧ್ಯಕ್ಷರ ಬದಲಾವಣೆಯೇ ಆಗಬೇಕೆಂದರೆ ಆ ಸ್ಥಾನಕ್ಕೆ ಇಂಧನ ಸಚಿವ ವಿ. ಸುನೀಲ್‌ಕುಮಾರ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಐಟಿಬಿಟಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪರಿಗಣಿಸಬಹುದು. ಗೃಹಸಚಿವರನ್ನಷ್ಟೇ ಬದಲಾವಣೆ ಮಾಡುವುದಾದರೆ ಸುನೀಲ್‌ಕುಮಾರ್‌ ಅಥವಾ ಸಿ.ಟಿ. ರವಿ ಅವರನ್ನು ಗೃಹಸಚಿವರಾಗಿ ನೇಮಕ ಮಾಡಬಹುದು. ಇದರಿಂದ ತಕ್ಕಮಟ್ಟಿಗೆ ಪರಿಹಾರ ಸಿಗುತ್ತದೆ. ಇದರ ಜತೆಗೆ ಇನ್ನು ಕೆಲವು ಕಾರ್ಯಕರ್ತರನ್ನು ಸಚಿವರನ್ನಾಗಿಸಿ ಕಾರ್ಯಕರ್ತರ ಸಿಟ್ಟನ್ನು ಶಮನ ಮಾಡಬಹುದು ಎಂಬ ಚರ್ಚೆ ಉನ್ನತ ಮಟ್ಟದಲ್ಲಿ ನಡೆದಿದೆ.

ಮೂರರಲ್ಲಿ ಒಂದು ಆಯ್ಕೆ

ಪ್ರವೀಣ್‌ ನೆಟ್ಟಾರು ಹತ್ಯೆ ನಂತರ ಉಂಟಾಗಿರುವ ಆಕ್ರೋಶ, ಪಕ್ಷದ ಬುಡವನ್ನು ಅಲುಗಾಡಿಸಿರುವುದಂತೂ ಸತ್ಯ. ಇದರ ಪರಿಹಾರಕ್ಕಾಗಿ ಬಿಜೆಪಿ ನಾಯಕರ ಮುಂದೆ ಮೂರು ಆಯ್ಕೆಗಳಿವೆ. ಮೊದಲನೆಯದು ಸಿಎಂ ಬದಲಾವಣೆ, ಎರಡನೆಯದು ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ, ಮೂರನೆಯದು ಗೃಹಸಚಿವರನ್ನು ಬದಲಾಯಿಸಿ ಸಂಪುಟ ಪುನಾರಚಿಸುವುದು. ಚುನಾವಣೆ ವರ್ಷದಲ್ಲಿ ಮೊದಲ ಆಯ್ಕೆ ಬಹುತೇಕ ಅಸಾಧ್ಯ, ಎರಡನೇ ಹಾಗೂ ಮೂರನೇ ಆಯ್ಕೆಯಲ್ಲಿ ಒಂದನ್ನು ಕೆಲವೇ ದಿನಗಳಲ್ಲಿ ಆಯ್ದುಕೊಳ್ಳಲಾಗುತ್ತದೆ ಎಂದು ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ | Amrit Mahotsav | ಹರ್ ಘರ್ ತಿರಂಗಾ ಅಭಿಯಾನ; ನಟ ಕಿಚ್ಚ ಸುದೀಪ್‌ಗೆ ತ್ರಿವರ್ಣ ಧ್ವಜ ನೀಡಿದ ಕಟೀಲ್‌

Exit mobile version