ಮಂಗಳೂರು: ಸುರತ್ಕಲ್‌ನಲ್ಲಿ ಕಳೆದ ಐದು ತಿಂಗಳ ಹಿಂದೆ ನಡೆದ ಫಾಜಿಲ್ ಎಂಬುವರ ಹತ್ಯೆಯ ಬಳಿಕ, (Surathkal Murder ) ಇದೀಗ ಮತ್ತೊಂದು ಕೊಲೆ ನಡೆದಿದೆ. ಹೀಗಾಗಿ ಜನತೆ ಆತಂಕದಲ್ಲಿದ್ದಾರೆ.
ಈ ಬಾರಿ ಫ್ಯಾನ್ಸಿ ಸ್ಟೋರ್ ಮಾಲೀಕ ಜಲೀಲ್ ಹತರಾಗಿದ್ದು, ಜನರು ಪೊಲೀಸ್ ಕಮಿಷನರ್ ಅವರ ಬಳಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಹತ್ಯೆ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಶವಾಗಾರಕ್ಕೆ ಆಗಮಿಸಿದ ಶಾಸಕ ಯು.ಟಿ.ಖಾದರ್ ಅವರನ್ನೂ ಪ್ರಶ್ನಿಸಿದ್ದಾರೆ.
ಮಂಗಳೂರಿನ ಹೊರವಲಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ವ್ಯಾಪಾರಿಯೊಬ್ಬನ ಕೊಲೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಜಲೀಲ್ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವಷ್ಟರಲ್ಲೇ ಅವರು ಇಹಲೋಕ ತ್ಯಜಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರಿನ ಕಾವೂರು ನಿವಾಸಿಯಾಗಿದ್ದ ಜಲೀಲ್ ಬಹಳ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಈ ರೀತಿ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆಗೈದಿರುವುದು ಸ್ಥಳಿಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರನ್ನೇ ಅಡ್ಡಗಟ್ಟಿ ಜನರು ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇನ್ನು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಶಾಸಕ ಯು.ಟಿ.ಖಾದರ್, ಈ ಹತ್ಯೆ ಬಗ್ಗೆ ಯುಎಪಿಎ ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಸುರತ್ಕಲ್ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು ಈ ಹಿಂದೆಯೂ ಇಲ್ಲಿ ಸಾಕಷ್ಟು ಕೋಮುಗಲಭೆಗಳು ನಡೆದ ಇತಿಹಾಸ ಇದೆ. ಹೀಗಾಗಿ ಹೆಚ್ಚಿನ ಭದ್ರತೆಯನ್ನು ಅಲ್ಲಿ ನಿಯೋಜಿಸಲಾಗಿದೆ.
ಇದನ್ನೂ ಓದಿ:Surathkal Murder | ಸುರತ್ಕಲ್‌ನಲ್ಲಿ ಹತ್ಯೆ ಪ್ರಕರಣ, ಅಹಿತಕರ ಘಟನೆ ನಡೆಯದಂತೆ ಡಿ.27 ಸಂಜೆ ತನಕ ನಿಷೇಧಾಜ್ಞೆ ಜಾರಿ