ಮಂಗಳೂರು: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಕೊಲೆ ಬೆದರಿಕೆ ಒಡ್ಡಿರುವ ಘಟನೆ ನಡೆದಿದ್ದು, ಈ ಕುರಿತು ಪೊಲೀಸ್ ದೂರು ದಾಖಲಾಗಿದೆ.
ಪರಂಗಿಪೇಟೆಯ ಸಮೀಪ ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ತಲ್ವಾರ್ ಝಳಪಿಸಿ ಬೆದರಿಕೆ ಒಡ್ಡಿರುವುದಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಹರೀಶ್ ಪೂಂಜಾ ಕಾರು ಚಾಲಕ ನವೀನ್ ದೂರು ದಾಖಲಿಸಿದ್ದಾರೆ.
ಶಾಸಕ ಹರೀಶ್ ಪೂಂಜಾ ಅವರು ಬುಧವಾರ ಬೆಂಗಳೂರಿಗೆ ಹೋಗಿದ್ದು, ಗುರುವಾರ ಸಂಜೆ 6.20ರ ವಿಮಾನದಲ್ಲಿ ಮಂಗಳೂರಿಗೆ ಬಂದರು. ವಿಮಾನ ನಿಲ್ದಾಣದಿಂದ ಶಾಸಕರನ್ನು ಕರೆದುಕೊಂಡು ಬರಲಾಯಿತು, ಮಂಗಳೂರು ಸರ್ಕೂಟ್ ಹೌಸ್‌ಗೆ ಹೋಗಿ ಅಲ್ಲಿ ಮೀಟಿಂಗ್‌ನಲ್ಲಿ ಭಾಗವಹಿಸಿದರು.
ಬಳಿಕ ರಾತ್ರಿ 10.45 ಗಂಟೆಗೆ ಮಂಗಳೂರು ಸರ್ಕೂಟ್ ಹೌಸ್‌ನಿಂದ ತನ್ನ ಸಂಬಂಧಿಕರಾದ ಪ್ರಶಾಂತ್ ಕಾರಿನಲ್ಲಿ ಪೂಂಜಾ ಹೊರಟಿದ್ದಾರೆ. ಈ ವೇಳೆ ಸಮೀಪಕ್ಕೆ ಆಗಮಿಸಿದ ಸ್ಕಾರ್ಪಿಯೋ ಕಾರು ಶಾಸಕರ ಕಾರಿನ ಬಳಿ ಬಂದಿದೆ. ಶಾಸಕ ಆ ಕಾರಿನಲ್ಲಿ ಇರಲಿಲ್ಲವಾದ್ಧರಿಂದ, ಮುಂದೆ ಶಾಸಕರು ತೆರಳುತ್ತಿದ್ದ ಕಾರಿನ ಬಳಿ ತೆರಳಿದ್ದಾರೆ.
ಶಾಸಕರು ಪ್ರಯಾಣಿಸುತ್ತಿದ್ದ ಕಾರಿನ ಚಾಲಕನನ್ನು ನೋಡಿದ ದುಷ್ಕರ್ಮಿಗಳು, ಕತ್ತಿಯನ್ನು ಝಳಪಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ತೆರಳಿದ್ದಾರೆ. ಜೀವಬೆದರಿಕೆ ಒಡ್ಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನವೀನ್ ದೂರಿನಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಅಕ್ರಮವಾಗಿ ವಶಕ್ಕೆ ಪಡೆಯುವಿಕೆ (ಐಪಿಸಿ 341), ಶಾಂತಿಗೆ ಭಂಗ ತರುವಿಕೆ (ಐಪಿಸಿ 504) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | ಶಾಸಕ ಹರೀಶ್ ಪೂಂಜಾ ಆಡಿದ ಮಾತು ತಿರುಗು ಬಾಣ: ಮನೆಗೆ ಬಂತು ಮುಸ್ಲಿಂ ಟೋಪಿ, ಶಾಲು