Site icon Vistara News

‘ಮೂರು ಕ್ಷೇತ್ರ’ ಬಿಟ್ಟ ಸಿದ್ದರಾಮಯ್ಯಗೆ ಕೋಲಾರದಲ್ಲೂ ಸಂಕಷ್ಟ, ಸಿದ್ದು ಸ್ಪರ್ಧೆಗೆ ದಲಿತರಿಂದ ಭಾರಿ ವಿರೋಧ

Kolar Dalit Leaders Pressmeet

ಕೋಲಾರ: ಚಾಮುಂಡೇಶ್ವರಿ, ವರುಣಾ ಹಾಗೂ ಬಾದಾಮಿ ವಿಧಾನಸಭೆ ಕ್ಷೇತ್ರಗಳನ್ನು ಬಿಟ್ಟು, ಕೋಲಾರದಲ್ಲಿ ಸ್ಪರ್ಧಿಸಲು ತೀರ್ಮಾನಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈಗ ‘ನಾಲ್ಕನೇ’ ಕ್ಷೇತ್ರದಲ್ಲೂ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್‌ ನಾಯಕನ ಸ್ಪರ್ಧೆಗೆ ದಲಿತರ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಮತದಾರರ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಜಾತಿವಾರು ಮತಗಳ ಲೆಕ್ಕಾಚಾರ ಮಾಡಿ ಕೋಲಾರದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದ ಸಿದ್ದರಾಮಯ್ಯನವರಿಗೆ ಇದು ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕೋಲಾರದಲ್ಲಿ ಕುರುಬ ಸಂಘದ ವಿರೋಧ ಬೆನ್ನಲ್ಲೇ ದಲಿತ ಮುಖಂಡರು ‘ಸಿದ್ದರಾಮಯ್ಯ ದಲಿತ ವಿರೋಧಿ’ ಎಂಬ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಜೆಡಿಎಸ್ ಸೇರ್ಪಡೆಯಾದ ಬಾಲಾಜಿ ಚನ್ನಯ್ಯ, ಬಿಜೆಪಿ ಮುಖಂಡ ಸಾಹುಕಾರ್ ಶಂಕರಪ್ಪ ಹಾಗೂ ದಲಿತ ನಾಯಕ ನಾರಾಯಣಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಹಾಗೆಯೇ, ಮತದಾರರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ದಲಿತರ ವಿರೋಧಕ್ಕೆ ಕಾರಣವೇನು?

“ದಲಿತರು ಮುಖ್ಯಮಂತ್ರಿ ಆಗಬಾರದು ಎಂದು ಜಿ.ಪರಮೇಶ್ವರ್ ವಿರುದ್ದ ಸಿದ್ದರಾಮಯ್ಯ ಕುತಂತ್ರ ನಡೆಸಿದರು. ಮಲ್ಲಿಕಾರ್ಜುನ ಖರ್ಗೆ, ಶ್ರೀನಿವಾಸ ಪ್ರಸಾದ್, ಧ್ರುವನಾರಾಯಣ, ಕೆ.ಎಚ್. ಮುನಿಯಪ್ಪ ಅವರನ್ನು ಬದಿಗೊತ್ತಿ ಸಿದ್ದರಾಮಯ್ಯ ಸಿಎಂ ಆದರು. ಇದರಿಂದ ಕಾಂಗ್ರೆಸ್‌ನಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದೆ. ಈ ಬಾರಿ ಸಿದ್ದರಾಮಯ್ಯ ಸೋತರೆ ದಲಿತ ನಾಯಕರು ಸಿಎಂ ಆಗುವ ಸಾಧ್ಯತೆ ಇದೆ. ಹಾಗಾಗಿ, ಕೋಲಾರದಿಂದ ಸ್ಪರ್ಧೆಗೆ ಮುಂದಾಗಿರುವ ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು” ಎಂಬುದಾಗಿ ದಲಿತ ನಾಯಕರೆ ಕರೆ ನೀಡಿದರು. ಸುದ್ದಿಗೋಷ್ಠಿ ಬಳಿಕ ದಲಿತ ಮುಖಂಡರು ಬೀದಿ ಬದಿಯ ಮಳಿಗೆಗಳಿಗೆ ಭಿತ್ತಿಪತ್ರ ಹಂಚಿದರು.

ದಲಿತರ ಮತಗಳೇ ನಿರ್ಣಾಯಕ

ಕೋಲಾರದಲ್ಲಿ ಜಾತಿವಾರು ಮತಗಳನ್ನು ಲೆಕ್ಕಾಚಾರ ಹಾಕಿಯೇ ಸಿದ್ದರಾಮಯ್ಯ ಸ್ಪರ್ಧೆಗೆ ತೀರ್ಮಾನಿಸಿದ್ದು, ದಲಿತ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಕೋಲಾರದಲ್ಲಿ ಒಟ್ಟು ೨,೩೧,೭೪೮ ಮತದಾರರಿದ್ದಾರೆ. ಇವರ ಪೈಕಿ ಪರಿಶಿಷ್ಟ ಜಾತಿ ೫೮ ಸಾವಿರ, ಪರಿಶಿಷ್ಟ ಪಂಗಡ ೨೨ ಸಾವಿರ, ಮುಸ್ಲಿಂ ೫೩ ಸಾವಿರ, ಒಕ್ಕಲಿಗ ೪೬ ಸಾವಿರ, ಕುರುಬ ಸಮುದಾಯದ ೩೬ ಸಾವಿರ ಮತಗಳಿವೆ ಹಾಗೂ ಇತರ ಮತಗಳು ೧೬,೦೦೦. ಈಗಾಗಲೇ ಕುರುಬ ಸಂಘಟನೆಗಳು ಸಿದ್ದರಾಮಯ್ಯ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಈಗ ದಲಿತ ಸಮುದಾಯವೂ ವಿರೋಧ ವ್ಯಕ್ತಪಡಿಸುತ್ತಿರುವ ಕಾರಣ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ | Siddaramaiah CM | ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸಬೇಕು, ವರಿಷ್ಠರು ಸಿಎಂ ಮಾಡ್ಲೇಬೇಕು: ರಮೇಶ್‌ ಕುಮಾರ್‌ ವಾದ

Exit mobile version