ಮೈಸೂರು: ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣಕ್ಕೆ ಸಂಬಂಧಿಸಿಂದತೆ ಬಗೆದಷ್ಟೂ ಮಾಹಿತಿ ಬಹಿರಂಗವಾಗುತ್ತಿದೆ. ದರ್ಶನ್ ಹಾಗೂ ಗ್ಯಾಂಗ್‌ನನ್ನು ಮತ್ತೆ 5 ದಿನ ಕಸ್ಟಡಿಗೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಭಾನುವಾರ ಮೈಸೂರಿನಲ್ಲಿ (Mysore) ಸ್ಥಳ ಮಹಜರು ನಡೆಸಲಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಬಳಿಕ ಮೈಸೂರಿಗೆ ತೆರಳಿದ ನಟ ದರ್ಶನ್ (Actor Darshan) ಅಲ್ಲಿಂದಲೇ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಕುರಿತು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಡೆವಿಲ್ ಸಿನಿಮಾದ ಚಿತ್ರೀಕರಣದ ಹಿನ್ನೆಲೆಯಲ್ಲಿ ದರ್ಶನ್ ಮೈಸೂರಿನಲ್ಲಿಯೇ ಬೀಡುಬಿಟ್ಟಿದ್ದರು. ರೇಣುಕಾಸ್ವಾಮಿ ಕೊಲೆಯ ಬಳಿಕವೂ ಮೈಸೂರಿಗೆ ತೆರಳಿದ ದರ್ಶನ್, ಅಲ್ಲಿಂದಲೇ ಗಣ್ಯರು ಹಾಗೂ ಆಪ್ತರಿಗೆ ಕರೆ ಮಾಡಿ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ನಟ, ಜಿಮ್‌ನಲ್ಲಿ ವರ್ಕೌಟ್ ಮಾಡುವ ಮೂಲಕ ಏನೂ ನಡೆದೇ ಇಲ್ಲ ಎಂಬಂತೆ ತೋರಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಇದೆಲ್ಲದರ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ.
ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ರ‍್ಯಾಡಿಷನ್ ಹೋಟೆಲ್, ಕುವೆಂಪು ನಗರದ ಗೋಲ್ಡ್ ಜಿಮ್ ಸೇರಿದಂತೆ ಪೊಲೀಸರು ಹಲವು ಸ್ಥಳಗಳನ್ನು ಮಹಜರು ಮಾಡಲಿದ್ದಾರೆ. ನಟ ದರ್ಶನ್ ಸೇರಿ ಹಲವು ಆರೋಪಿಗಳನ್ನು ಕರೆದುಕೊಂಡು ಹೋಗಿ ಮಹಜರು ಮಾಡಲಿದ್ದಾರೆ. ಮೈಸೂರಿನಲ್ಲಿ ದರ್ಶನ್ ಯಾರಿಗೆ ಕರೆ ಮಾಡಿದ್ದರು? ಯಾರ ಮೂಲಕ ಪ್ರಭಾವ ಬೀರಲು ಪ್ರಯತ್ನಿಸಿದರು ಎಂಬುದು ಸೇರಿ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ತನಿಖೆಯ ಟೀಮ್‌ಗೆ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಸೇರ್ಪಡೆ
ಆರೋಪಿ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಂಡು, ಬೆಂಗಳೂರಿಗೆ ಕರೆತಂದಿದ್ದ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಅವರು ಮತ್ತೆ ತನಿಖಾ ತಂಡವನ್ನು ಸೇರಿಕೊಂಡಿದ್ದು, ತನಿಖೆಗೆ ಬಲ ಬಂದಂತಾಗಿದೆ. ಎಸಿಪಿ ಚಂದನ್ ಹಾಗೂ ಗಿರೀಶ್ ನಾಯ್ಕ್ ಅವರು ದರ್ಶನ್‌ನನ್ನು ಮೈಸೂರಿನಿಂದ ಕರೆತಂದಿದ್ದರು. ಆರಂಭದಲ್ಲಿ ಗಿರೀಶ್ ನಾಯ್ಕ್ ಅವರೇ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಚುನಾವಣೆ ನಿಮಿತ್ತ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು. ಬಳಿಕ ಮತ್ತೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು.
ಇದನ್ನೂ ಓದಿ: Actor Darshan: ದರ್ಶನ್ ಬಂಧಿಸಿದ ಎಸಿಪಿ ಚಂದನ್ ಕುಮಾರ್ ಕೆಲಸಕ್ಕೆ ಸೆಲ್ಯೂಟ್ ಎಂದ ಗ್ರಾಮಸ್ಥರು!