Site icon Vistara News

Dasara 2022 | ಕುಂಬಳಕಾಯಿ ಒಡೆದು ಗಜಪಡೆಯ ದೃಷ್ಟಿ ನಿವಾರಣೆ: ಮೈಸೂರಿನಲ್ಲಿ ತಾಲೀಮು ಆರಂಭ

dasara 2022

ಮೈಸೂರು: ದಸರಾದ ಗಜಪಡೆಗಳಿಗೆ ಮೈಸೂರಿನ ರಾಜಬೀದಿಗಳಲ್ಲಿ ತಾಲೀಮು ಭಾನುವಾರದಿಂದ (ಆ.14) ಆರಂಭವಾಗಿದೆ. ತಾಲೀಮು ಆರಂಭಕ್ಕೂ ಮುನ್ನ ದಸರಾ ಗಜಪಡೆಗೆ (Dasara 2022) ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಮೈಸೂರು ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಪ್ರತಿ ದಿನ ಬೆಳಗ್ಗೆ- ಸಂಜೆ ತಾಲೀಮು ನಡೆಸುವುದು ವಾಡಿಕೆ. ಹೀಗಾಗಿ ತಾಲೀಮು ಆರಂಭಕ್ಕೂ ಮುನ್ನ ಅರಮನೆ ಅವರಣದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೋವಿಡ್‌ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಆನೆಗಳಿಗೆ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಗಿತ್ತು. ಈಗ ಎಂದಿನಂತೆ ಅರಮನೆಯಿಂದ ಬನ್ನಿ ಮಂಟಪದವರೆಗೆ ಗಜಪಡೆಗಳು ವಾಯುವಿಹಾರಕ್ಕೆ ತೆರಳುತ್ತಿವೆ. ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಅರಮನೆಯಿಂದ ಹೊರಟು ಕೆ.ಆರ್. ಸರ್ಕಲ್ , ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಆಸ್ಪತ್ರೆ ಸರ್ಕಲ್, ಬಂಬೂ ಬಜಾರ್ ರಸ್ತೆ ಮೂಲಕ ಬನ್ನಿ ಮಂಟಪ ತಲುಪಿ, ಬಳಿಕ ಬನ್ನಿ ಮಂಟಪದಿಂದ ಅರಮನೆಗೆ ವಾಪಾಸ್ ಆಗಲಿವೆ.

ಗಜಪಡೆಗಳಿಗೆ ತಾಲೀಮು ಆರಂಭ

ಅರಣ್ಯ ಅಧಿಕಾರಿ ಕರಿಕಾಳನ್ ಈ ಕುರಿತು ಮಾತನಾಡಿ, ಆನೆಗಳಿಗೆ ತೂಕ ಮಾಡಿಸಲಾಗಿದೆ. ಎಲ್ಲ ಆನೆಗಳೂ ಆರೋಗ್ಯವಾಗಿದ್ದು, ನಗರ ವಾತಾವರಣಕ್ಕೆ ಹೊಂದಿಕೊಂಡಿವೆ. ಒಂದು ವಾರದ ನಂತರ ಭಾರ ಹೊರುವ ತಾಲೀಮು ಪ್ರಾರಂಭ ಮಾಡಲಾಗುವುದು ಎಂದರು.

ಕುಂಬಳಕಾಯಿ ಒಡೆದು ದೃಷ್ಟಿ ತೆಗೆದ ಸಿಬ್ಬಂದಿಗಳು

ಅಭಿಮನ್ಯು ಜತೆಗೆ ಅರ್ಜುನ, ಗೋಪಾಲಸ್ವಾಮಿ, ಭೀಮ, ಧನಂಜಯ, ಕಾವೇರಿ ಹಾಗೂ ಚೈತ್ರಾ, ಲಕ್ಷ್ಮೀ, ಮಹೇಂದ್ರ ಆನೆಗಳು ಸಾಥ್‌ ನೀಡಲಿದೆ. ಅರಮನೆ ಆವರಣದಲ್ಲಿ ಪುಷ್ಪಾರ್ಚನೆ ಮಾಡಿ ಸಾಂಪ್ರದಾಯಿಕ ಪೂಜೆ ಬಳಿಕ ಗಜಪಡೆಗಳಿಗೆ ಯಾರ ದೃಷ್ಟಿಯೂ ಬೀಳದಂತೆ ಕುಂಬಳಕಾಯಿ ಒಡೆದು ದೃಷ್ಟಿ ತೆಗೆಯಲಾಯಿತು. ಈ ಪೂಜಾ ಕಾರ್ಯದಲ್ಲಿ ಡಿಸಿಎಫ್ ಕರಿಕಾಳನ್ ಜತೆಗೆ ವೈದ್ಯರಾದ ಮುಜೀಬ್ ಸೇರಿ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ | ಮೈಸೂರು ಯುವಜನೋತ್ಸವದಲ್ಲಿ ಅಪ್ಪು ಹವಾ !: ನಟ ಯಶ್‌ ಭಾಗಿ

Exit mobile version