Site icon Vistara News

Dasara Elephant Arjuna: 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು; ಒಂಟಿ ಸಲಗ ದಾಳಿಯಿಂದ ದುರ್ಘಟನೆ

Dasara Elephant Arjuna

ಹಾಸನ: ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ (Dasara Elephant Arjuna) ಮೃತಪಟ್ಟಿದೆ. ಸಕಲೇಶಪುರ ತಾಲೂಕಿನ‌ ಯಸಳೂರು ವಲಯದ ಬಾಳೆಕೆರೆ ಅರಣ್ಯದಲ್ಲಿ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡು ಅರ್ಜುನ (Dasara Elephant Arjuna) ಕೊನೆಯುಸಿರೆಳೆದಿದೆ.

ಬಾಳೆಕೆರೆ ಅರಣ್ಯದಲ್ಲಿ ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. 12 ಕಾಡಾನೆಗನ್ನು ಸೆರೆ ಹಿಡಿಯಲು ಅರಿವಳಿಕೆ ಮದ್ದು ನೀಡುವಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ದಾಳಿ ತೀವ್ರವಾಗುತ್ತಿದ್ದಂತೆ ಮೂರು ಆನೆಗಳು ಹಿಂದೆ ಸರಿದಿವೆ. ಆದರೆ, ಹಿಮ್ಮೆಟ್ಟಿಸಲು ಯತ್ನಿಸಿದ ಅರ್ಜುನ ಮೇಲೆ ಕಾಡಾನೆ ಭೀಕರ ದಾಳಿ ನಡೆಸಿ ಹೊಟ್ಟೆ ಭಾಗಕ್ಕೆ ದಂತಗಳಿಂದ ತಿವಿದಿದ್ದರಿಂದ ಅರ್ಜುನ ಮೃತಪಟ್ಟಿದೆ.

ಪ್ರಜ್ಞೆತಪ್ಪಿ ಬಿದ್ದ ಮಾವುತನನ್ನ ಆಸ್ಪತ್ರೆಗೆ ಕರೆದೊಯ್ದ ಸ್ಥಳೀಯರು| Forest Officer About Elephant Arjuna

ಕಳೆದ ಒಂದು ವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಎಲ್ಲಾ ಸಾಕಾನೆಗಳಿಗಿಂತ ಬಲಶಾಲಿಯಾಗಿದ್ದ ಅರ್ಜುನ, ಆಪರೇಷನ್‌ನಲ್ಲಿ ತಂಡದ ನಾಯಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಅರ್ಜುನನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನೀರವ ಮೌನ ಆವರಿಸಿದ್ದು, ಮಾವುತರು ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ | Foeticide Case : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ; ಹೆಡ್‌ ನರ್ಸ್‌ ಉಷಾರಾಣಿ ಬಂಧನ

ಅರ್ಜುನ ಸಾವು ಹಿನ್ನೆಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಕಾಡಾನೆ ಅಲ್ಲಿಯೇ ಇದ್ದಿದ್ದರಿಂದ ಕೆಲಕಾಲ ಮೃತ ಅರ್ಜುನನ ಸಮೀಪವೂ ಹೋಗಲಾರದೆ ಅರಣ್ಯ ಇಲಾಖೆ ಸಿಬ್ಬಂದಿ ದೂರನಿಂತಿದ್ದರು. ಕಾಡಾನೆ ದೂರ ಸರಿದ ಬಳಿಕ ಅರ್ಜನನ ಬಳಿ ಸಿಬ್ಬಂದಿ ತೆರಳಲಿದರು. ಕೊಂಚ ಎಡವಟ್ಟಾಗಿದ್ದರೂ ಕೂಡ ಹಲವು ಸಿಬ್ಬಂದಿ ಪ್ರಾಣಕ್ಕೆ ಸಂಚಕಾರ ಉಂಟಾಗುತ್ತಿತ್ತು. ಅದೃಷ್ಟವಶಾತ್ ಅರ್ಜುನ, ಕಾಡಾನೆ ಜತೆ ಕಾಳಗಕ್ಕೆ ನಿಂತಿದ್ದರಿಂದ ದುರಂತ ತಪ್ಪಿದ್ದು, ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವವನ್ನು ಅರ್ಜುನ ಉಳಿಸಿದ್ದಾನೆ.

ಡಿಎಫ್‌ಒ ಮೋಹನ್ ಕುಮಾರ್ ಮಾತನಾಡಿ, ಕಾಡಾನೆ‌ ಸೆರೆ ಕಾರ್ಯಾಚರಣೆ ವೇಳೆ ಮದವೇರಿದ ಗಂಡಾನೆ ನಮ್ಮ‌ ಅರ್ಜುನನ ಮೇಲೆ ಅಟ್ಯಾಕ್ ಮಾಡಿತು. ಅರಿವಳಿಕೆ ಮದ್ದು ನೀಡಿದರೂ ನಿಲ್ಲದೆ ಅದು ದಾಳಿ ಮಾಡಿದ್ದರಿಂದ ನಮ್ಮ ಸಿಬ್ಬಂದಿ, ಸಾಕಾನೆಗಳು ವಾಪಸ್‌ ಬಂದಿವೆ. ಆದರೆ, ಕಾಡಾನೆ ಸ್ವಲ್ಪ ಬಲಿಷ್ಟವಾಗಿತ್ತು, ಅಲ್ಲದೇ ದಂತಗಳು ಚೂಪಾಗಿದ್ದವು. ಕಾದಾಟದಲ್ಲಿ ಅರ್ಜುನ ಸಾವನ್ನಪ್ಪಿದ. ಈ ಬಗ್ಗೆ ನಮ್ಮ‌ ಮೇಲಾಧಿಕಾರಿಗಳ‌ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ಪ್ರಜ್ಞೆತಪ್ಪಿ ಬಿದ್ದ ಮಾವುತ

ಪ್ರಜ್ಞೆತಪ್ಪಿ ಬಿದ್ದ ಮಾವುತನನ್ನ ಆಸ್ಪತ್ರೆಗೆ ಕರೆದೊಯ್ದ ಸ್ಥಳೀಯರು| Forest Officer About Elephant Arjuna

ಅರ್ಜುನ ಸಾವಿನ‌ ವಿಷಯದಿಂದ ಕಂಗಾಲಾದ ಮಾವುತ ವಿನೋದ್ ಅಸ್ವಸ್ಥರಾಗಿ ಪ್ರಜ್ಞೆತಪ್ಪಿ ಬಿದ್ದ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು. ಅರ್ಜುನನ್ನು ಕಳೆದುಕೊಂಡಿದ್ದರಿಂದ ಅರಣ್ಯದೊಳಗೆ ಮಾವುತರ ರೋದನ ಮುಗಿಲು ಮುಟ್ಟಿದ್ದು, ಬಿಕ್ಕಿಬಿಕ್ಕಿ ಅಳುತ್ತಿದ್ದದ್ದು ಕಂಡುಬಂತು.

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸಂತಾಪ

ದಸರಾ ಆನೆ ಅರ್ಜುನ ಸಾವಿಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ. ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ.

ಇದನ್ನೂ ಓದಿ | Murder Case: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಭಾವ ಮಹದೇವಯ್ಯ ಕೊಲೆ!

ಕಾಡಾನೆಗಳನ್ನು ಸೆರೆ ಹಿಡಿಯುವಾಗ ತಮ್ಮ ಪ್ರಾಣ ರಕ್ಷಣೆಯ ಜತೆಗೆ ವನ್ಯಮೃಗಗಳ ಜೀವಕ್ಕೆ ಹಾನಿ ಆಗದಂತೆ ಅರಣ್ಯ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಲಿ. ಅರ್ಜುನನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಆ ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ ಎಂದು ತಿಳಿಸಿದ್ದಾರೆ.

Exit mobile version