ಮೈಸೂರು: ದಸರಾ ವೀಕ್ಷಣೆಗೆ (Mysuru dasara) ಬರುವ ದೇಶ-ವಿದೇಶದ ಪ್ರವಾಸಿಗರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಡಳಿತ ಬಿಡುಗಡೆ ಮಾಡಿದ್ದ ದಸರಾ ಗೋಲ್ಡ್ ಕಾರ್ಡ್‌ನ್ನು ಕಾಳಸಂತೆಯಲ್ಲಿ ಡಬಲ್ ರೇಟಿಗೆ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಆನ್‌ಲೈನ್‌ನಲ್ಲಿ ಮತ್ತು ಆಫ್‌ಲೈನ್‌ನಲ್ಲಿ ೫೦೦೦ ರೂ.ಗೆ ಸಿಗುವ ಈ ಕಾರ್ಡನ್ನು ಕೆಲವು ಖಾಸಗಿ ಸಂಸ್ಥೆಗಳು ೭ರಿಂದ ೧೦ ಸಾವಿರ ರೂ.ಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಿವೆ. ಈ ದಂಧೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾಡಳಿತ ಬ್ಲ್ಯಾಕ್‌ನಲ್ಲಿ ಮಾರಾಟ ಮಾಡುತ್ತಿದ್ದವರ ಮೇಲೆ ಎಫ್‌ಐಆರ್ ದಾಖಲಿಸಿದೆ ಮತ್ತು ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದೆ.
ಏನಿದು ಗೋಲ್ಡ್ ಕಾರ್ಡ್?
ಮೈಸೂರು ದಸರಾ ವೀಕ್ಷಿಸಲು ಬರುವ ಪ್ರವಾಸಿಗರು/ವಿದೇಶಿಯರು/ಸಾರ್ವಜನಿಕರಿಗೆ ಎಲ್ಲಾ ಪ್ರಮುಖ ಕಾರ್ಯಕ್ರಮಗಳು, ಪ್ರೇಕ್ಷಣೀಯ ಸ್ಥಳಗಳಿಗೆ ನೇರ ಪ್ರವೇಶ ನೀಡಲು ಅನುಕೂಲವಾಗುವಂತೆ ಜಿಲ್ಲಾಡಳಿತ ಈ ಕಾರ್ಡ್ ಬಿಡುಗಡೆ ಮಾಡಿತ್ತು. ೪,೯೯೯ ರೂ. ದರ ಇರುವ ಈ ಕಾರ್ಡನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾರಾಟ ಮಾಡಲಾಗಿತ್ತು.
ಆನ್‌ಲೈನ್ ಮೂಲಕ www.mysoredasara.gov.in ವೆಬ್ ಸೈಟ್‌ನಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಒಂದು ಬಾರಿಗೆ ಗರಿಷ್ಠ ಎರಡು ಗೋಲ್ಡ್ ಕಾರ್ಡ್ ಖರೀದಿಸಲು ಅವಕಾಶ ನೀಡಲಾಗಿತ್ತು. ಒಮ್ಮೆ ಪಾವತಿ ದೃಢೀಕರಣವಾದ ಬಳಿಕ ಅದನ್ನು ನಿಗದಿಪಡಿಸಿದ ಕೇಂದ್ರಕ್ಕೆ ಹೋಗಿ ದಾಖಲೆ ತೋರಿಸಿ ಪಡೆದುಕೊಳ್ಳಬಹುದಾಗಿತ್ತು. ಆಫ್‌ಲೈನ್‌ನಲ್ಲೂ ಇದನ್ನು ಒದಗಿಸಲಾಗುತ್ತಿತ್ತು.
ಗೋಲ್ಡ್ ಕಾರ್ಡ್ ಪಡೆದವರಿಗೆ ದಸರಾ ಮೆರವಣಿಗೆ ಜಂಬೂ ಸವಾರಿ ವೀಕ್ಷಣೆಗೆ ಅವಕಾಶವಿತ್ತು, ಪಂಜಿನ ಕವಾಯತು, ಬನ್ನಿ ಮಂಟಪ, ಮೈಸೂರು ಅರಮನೆ, ಶ್ರೀ ಜಯಚಾಮರಾಜೇಂದ್ರ ಮೃಗಾಲಯ, ಚಾಮುಂಡೇಶ್ವರಿ ದೇವಸ್ಥಾನ, ಫಲಪುಷ್ಪ ಪ್ರದರ್ಶನ, ದಸರಾ ವಸ್ತು ಪ್ರದರ್ಶನ, ಸೇಂಟ್ ಫಿಲೋಮಿನಾ ಚರ್ಚ್, ರೈಲ್ವೇ ಮ್ಯೂಸಿಯಂ ಕೆ.ಆರ್.ಎಸ್‌ನಲ್ಲಿ ಮುಕ್ತ ಪ್ರವೇಶವಿತ್ತು.
ಕಾಳಸಂತೆ ಮಾರಾಟ ಬಯಲು
ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿದ್ದ ಈ ಕಾರ್ಡನ್ನು ಕೆಲವರು ಮೊದಲೇ ಖರೀದಿ ಮಾಡಿ ಅಧಿಕ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿರುವುದು ಒಂದು ಆಡಿಯೊ ಮೂಲಕ ಬಯಲಾಗಿತ್ತು. ಬೆಂಗಳೂರಿನ ಸವಾರಿ ಇಂಟರ್ ನ್ಯಾಷನಲ್ ಸಂಸ್ಥೆ ಈ ಕಾರ್ಡ್‌ಗಳನ್ನು ೭ರಿಂದ ೧೦ ಸಾವಿರ ರೂ.ವರೆಗೂ ಮಾರಾಟ ಮಾಡಿತ್ತು. ಈ ಬಗ್ಗೆ ಮಹಿಳೆಯೊಬ್ಬರು ಗೋಲ್ಡ್ ಕಾರ್ಡ್‌ಗಾಗಿ ವಿಚಾರಣೆ ನಡೆಸುವ ಆಡಿಯೋದಲ್ಲಿ ಈ ವ್ಯವಹಾರದ ಸ್ಪಷ್ಟ ಚಿತ್ರಣ ಬಯಲಾಗಿತ್ತು.
ಮಹಿಳೆ ಕರೆ ಮಾಡಿ ಗೋಲ್ಡ್ ಕಾರ್ಡ್ ಬೇಕಿತ್ತು ಎಂದು ಕೇಳುತ್ತಾರೆ. ಆಗ ಆ ಸಂಸ್ಥೆಯ ವತಿಯಿಂದ ಮಾತನಾಡುವ ವ್ಯಕ್ತಿ ತಕ್ಷಣವೇ ಖರೀದಿ ಮಾಡಿ, ಈಗಲೇ ಖರೀದಿ ಮಾಡಿದರೆ ೭,೦೦೦ ರೂ.ಗೆ ಕೊಡಬಹುದು. ಇದು ೧೦,೦೦೦ ರೂ.ವರೆಗೂ ಏರಬಹುದು ಎಂದು ಹೇಳುತ್ತಾನೆ.
ಎಚ್ಚೆತ್ತುಕೊಂಡ ಜಿಲ್ಲಾಡಳಿತ
ಈ ಆಡಿಯೊ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಜಿಲ್ಲಾಡಳಿತದ ವತಿಯಿಂದ ಮಾರಾಟ ಮಾಡಲಾದ ಈ ಕಾರ್ಡನ್ನು ಕಾಳ ಸಂತೆಯಲ್ಲಿ ಮಾರುತ್ತಿರುವ ಬಗ್ಗೆ ತನಿಖೆಗೆ ಮುಂದಾಗಿದೆ.
ಗೋಲ್ಡ್ ಕಾರ್ಡನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಈ ಬಗ್ಗೆ ಆರೋಪಿಗಳ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದರು. ಈದರ ಜತೆಗೆ ಅಧಿಕೃತ ವೆಬ್‌ಸೈಟ್‌ನಲ್ಲೇ ಗೋಲ್ಡ್ ಕಾರ್ಡ್ ಖರೀದಿಸುವಂತೆ ಮನವಿ ಮಾಡಿದರು.
ಆಫ್‌ಲೈನ್‌ನಲ್ಲಿ ನಡೆಯಿತಾ ಅಕ್ರಮ?
ಗೋಲ್ಡ್ ಕಾರ್ಡ್ ಅಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಡಳಿತಕ್ಕೆ ಮತ್ತು ತನಿಖೆ ನಡೆಸುವಂತೆ ಪೊಲೀಸ್ ಕಮೀಷನರ್‌ಗೆ ತಿಳಿಸಿದ್ದೇನೆ ಎಂದರು.
ಒಟ್ಟು ೧ ಸಾವಿರ ಗೋಲ್ಡ್ ಪಾಸ್ ಬಿಡುಗಡೆ ಮಾಡಲಾಗಿದ್ದು, ಅದರ ಪೈಕಿ ಆನ್ ಲೈನ್ ನಲ್ಲಿ ೫೦೦ ಆಫ್ ಲೈನ್‌ನಲ್ಲಿ ೫೦೦ ಟಿಕೆಟ್ ಮಾರಾಟಕ್ಕೆ ಸೂಚಿಸಲಾಗಿತ್ತು. ಆಫ್ ಲೈನ್ ಮಾರಾಟ ವೇಳೆ ಅವ್ಯವಹಾರ ಕಂಡು ಬಂದಿದೆ. ಏಜೆನ್ಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ ಎಂದು ಸೋಮಶೇಖರ್ ತಿಳಿಸಿದ್ದಾರೆ.