ದಾವಣಗೆರೆ: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿಯವರೇ ಅಂತಿಮ ತೀರ್ಮಾನ ಕೈಗೊಳ್ಳುವ ಪರಮಾಧಿಕಾರ ಹೊಂದಿದ್ದು, ಅದಕ್ಕೆ ಬದ್ಧ ಎಂದು ಇಂಧನ ಸಚಿವ ವಿ. ಸುನಿಲ್‌ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸುನಿಲ್‌ಕುಮಾರ್, ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಒಳಿತಾಗುವ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದಾರೆ. ದೂರದೃಷ್ಟಿ ಇಟ್ಟುಕೊಂಡ ನಾಯಕರು ಅವರು. ಯಾವ ಸಮಯಕ್ಕೆ ಯಾವ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವುದು ಗೊತ್ತಿದೆ ಎಂದು ಹೇಳಿದರು.
ಆರ್‌ಎಸ್ಎಸ್ ಮೂಲದವರಿಗೆ ಸಚಿವ ಸ್ಥಾನದಿಂದ ಕೆಳಗಿಳಿಸುವುದಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುನಿಲ್‌ಕುಮಾರ್, ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ. ನನ್ನನ್ನು ಚುನಾವಣೆಗೆ ನಿಲ್ಲಿಸಿ ಸಚಿವರನ್ನಾಗಿ ಮಾಡಿದೆ ಸಂಘಟನೆ. ಮುಂದೆ ಕೂಡ ಪಕ್ಷ ಯಾವ ನಿರ್ಣಯ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಸಿದ್ದರಿದ್ದೇವೆ. ಇದರಲ್ಲಿ ಬೇರೆ ಬೇರೆ ವಿಚಾರ ಪ್ರಸ್ತಾಪ ಇಲ್ಲ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ | ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಲ್ಲ: ಸಚಿವ ಸುನೀಲ್‌ಕುಮಾರ್
ಸಚಿವ ಸ್ಥಾನಕ್ಕೆ 60 ,100 ಕೋಟಿ ನೀಡುತ್ತಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲಿವರೆಗೂ ಪಕ್ಷ ನಮಗೆ ಕೊಟ್ಟಿದೆಯೇ ವಿನಃ ನಾವು ಪಕ್ಷಕ್ಕೆ ಏನೂ ಕೊಟ್ಟಿಲ್ಲ. ಇಲ್ಲಿ ವಿಚಾರಕ್ಕೆ ಆದ್ಯತೆಯೇ, ವಿನಃ ಹಣಕ್ಕೆ ಆದ್ಯತೆ ಇಲ್ಲ. ಬೊಮ್ಮಯಿ ನೇತೃತ್ವದಲ್ಲಿ ನಾವು ಮುಂದಿನ ಚುನಾವಣೆಗೆ ಹೋಗುತ್ತೇವೆ. ಒಳ್ಳೆಯ ಬಜೆಟ್ ನೀಡಿ, 180 ಯೋಜನೆಗಳಿಗೆ ಜೀವವನ್ನು ನೀಡಿದ್ದಾರೆ. ನವಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರಾದರೆ, ನವ ಕರ್ನಾಟಕ ನಿರ್ಮಾಣಕ್ಕೆ ಬೊಮ್ಮಾಯಿ ಎಂದು ಶ್ಲಾಘಿಸಿದರು.
ಕಾಂಗ್ರೆಸ್ ಕುರಿತಾಗಿ ಪ್ರತಿಕ್ರಿಯಿಸಿದ ಸುನಿಲ್‌ಕುಮಾರ್, ಅಲ್ಲಿನ ಕಾರ್ಯಕರ್ತರ ಜತೆಗೆ ನಾಯಕರು ಕೂಡ ಅನಾಥರಾಗಿದ್ದಾರೆ. ಇವತ್ತು ರಾಜ್ಯದ ಜನರಿಗೆ ಬರವಸೆ ಇದ್ದರೆ ಅದು ಬಿಜೆಪಿ ಹಾಗೂ ಮೋದಿಯವರ ಮೇಲೆ ಮಾತ್ರ. ಕಾಂಗ್ರೆಸ್ ಹತ್ತು ಸುಳ್ಳು ಹೇಳಿ ನಿಜ ಮಾಡಲು ಹೋಗುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರಿಗಳು ಜಾಮೀನಿನ ಮೇಲೆ ಇರುವವರು. ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು, ರಾಜ್ಯ ಅಧ್ಯಕ್ಷರ ವರೆಗೂ ಬೇಲ್ ಮೇಲೆ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | ಎಸ್‌ಸಿ ಎಸ್‌ಟಿ ಮನೆಗಳಲ್ಲಿ ಇನ್ನಷ್ಟು ಬೆಳಕು