ದಾವಣಗೆರೆ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಿಸಿ ನೀರು ಹಾಗು ಬಿಸಿ ಸಾಂಬಾರ್ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ (Accident Case) ಘಟನೆ ನಡೆದಿದೆ. ಪೋಷಕರು ಎಷ್ಟೇ ಜಾಗೃತವಾಗಿದ್ದರೂ ಅನಾಹುತಗಳು ನಿಲ್ಲುತ್ತಿಲ್ಲ. ದಾವಣಗೆರೆಯ ಚನ್ನಗಿರಿ ತಾಲೂಕಿನ ತ್ಯಾವಣಿಗೆ ಹಾಗೂ ಜಗಳೂರು ಪಟ್ಟಣದ ಗೊಲ್ಲರಹಟ್ಟಿ ಗ್ರಾಮದಲ್ಲಿ ಈ ದುರಂತಗಳು ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಗೊಲ್ಲರಹಟ್ಟಿಯಲ್ಲಿ ಬಿಸಿ ಸಾಂಬಾರ್ ಬಿದ್ದು ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಗೊಲ್ಲರಹಟ್ಟಿಯ ಶ್ರೀನಿವಾಸ್ ಎಂಬುವವರ ಪುತ್ರ ಮಿಥುನ್ (4) ಮೃತ ದುರ್ದೈವಿ. ಅಡುಗೆ ಮನೆಯ ಕಟ್ಟೆಯ ಮೇಲೆ ಇಟ್ಟಿದ್ದ ಬಿಸಿ ಸಾಂಬಾರ್ ಪಾತ್ರೆಯನ್ನು ಏಕಾಏಕಿ ಎಳೆದಿದ್ದಾನೆ. ಈ ವೇಳೆ ಬಿಸಿ ಸಾಂಬಾರ್ ದೇಹದ ಮೇಲೆ ಬಿದ್ದು ಬೆಂದು ಹೋಗಿದ್ದ. ಕೂಡಲೇ ದಾವಣಗೆರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮಿಥುನ್ ಮೃತಪಟ್ಟಿದ್ದಾನೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Physical Abuse : ಇನ್ಸ್ಟಾಗ್ರಾಮ್ ಲವ್; ಮದುವೆ ಆಗೋಣ ಬಾ ಎಂದವನು ಲಾಡ್ಜ್‌ಗೆ ಕರೆದೊಯ್ದು ಕೈಕೊಟ್ಟ ಪೊಲೀಸ್ ಪೇದೆ!
ಬಿಸಿ ನೀರು ಬಿದ್ದು ಒಂದೂವರೆ ವರ್ಷದ ಮಗು ಸಾವು
ಮತ್ತೊಂದು ಪ್ರಕರಣದಲ್ಲಿ ಒಂದೂವರೆ ವರ್ಷದ ಮಗುವಿನ ಮೇಲೆ ಬಿಸಿ ನೀರು ಬಿದ್ದು ಮೃತಪಟ್ಟಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣೆಗೆ ಗ್ರಾಮದಲ್ಲಿ ಘಟನೆ ನಡೆದಿದೆ. ವಡ್ನಾಳ್ ತಿಪ್ಪೇಶ್ ಹಾಗೂ ರೇಣುಕಾ ದಂಪತಿ ಪುತ್ರ ಯಶಸ್ ಮೃತ ದುರ್ದೈವಿ.
ರೇಣುಕಾ ವಡ್ನಾಳ್ ಗ್ರಾಮದಿಂದ ತ್ಯಾವಣೆಗೆ ತವರು ಮನೆಗೆ ಬಂದಿದ್ದರು. ಸ್ನಾನ ಮಾಡಲು ಬಾತ್ ರೂಮ್‌ನಲ್ಲಿ ಕೊಡದಲ್ಲಿ ಬಿಸಿ ನೀರು ಇಟ್ಟಿದ್ದರು. ಆಟವಾಡುತ್ತಾ ಬಾತ್ ರೂಮ್‌ಗೆ ಹೋಗಿದ್ದ ಯಶಸ್ ಬಿಸಿ ನೀರು ತುಂಬಿದ ಕೊಡವನ್ನು ಮೈ ಮೇಲೆ ಎಳೆದುಕೊಂಡಿದ್ದಾನೆ. ಈ ವೇಳೆ ಬಿಸಿ ನೀರು ಬಿದ್ದು ಸೊಂಟದಿಂದ ಕಳೆಭಾಗ ಸಂಪೂರ್ಣ ಸುಟ್ಟು ಹೋಗಿತ್ತು. ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಯಶಸ್ ಮೃತಪಟ್ಟಿದ್ದಾನೆ. ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ